ಸಾರಾಂಶ
ಕನ್ನಡಪ್ರಭ ವಾರ್ತೆ ಆನಂದಪುರ
ಪಶ್ಚಿಮ ಬಂಗಾಳದಲ್ಲಿ ವೈದ್ಯೆ ಹಾಗೂ ದೇಶದೆಲ್ಲೆಡೆ ನಡೆಯುತ್ತಿರುವ ಅತ್ಯಾಚಾರ ಖಂಡಿಸಿ ಆನಂದಪುರದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.ಭೀಮ್ ಸೇನಾ ಟ್ರಸ್ಟ್, ಪಾಂಡುರಂಗ ಯುವಕ ಸಂಘ, ಹಾಗೂ ಸಿರಿ ಮಹಿಳಾ ಒಕ್ಕೂಟ, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಇವರುಗಳ ಸಹಯೋಗದೊಂದಿಗೆ ಪ್ರತಿಭಟನೆ ನಡೆಸಲಾಯಿತು. ದಾಸಕೊಪ್ಪ ಪಾಂಡುರಂಗ ದೇವಸ್ಥಾನದಿಂದ ಪ್ರಾರಂಭಗೊಂಡ ಪ್ರತಿಭಟನಾ ಮೆರವಣಿಗೆ ಆನಂದಪುರ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಸಾಗಿ ನಂತರ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ಉದ್ದೇಶಿಸಿ ಪಾಂಡುರಂಗ ಯುವಕ ಸಂಘದ ಅಧ್ಯಕ್ಷ ನಾಗರಾಜ್ ಮಾತನಾಡಿ, ದೇಶದೆಲ್ಲೆಡೆ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರಕ್ಕೆ ಕಡಿವಾಣ ಹಾಕಲು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಅತ್ಯಾಚಾರಿಗಳನ್ನು ಜೈಲಿನಲ್ಲಿ ಇಟ್ಟು ಪೋಷಿಸುವ ಬದಲು ತಕ್ಷಣವೇ ಕಲ್ಲಿಗೇರಿಸಬೇಕೆಂದು ಆಗ್ರಹಿಸಿದರು.
ವೈದ್ಯಾಧಿಕಾರಿ ಡಾ.ವಿನಯ್ ಶೇಖರ್ ಮಾತನಾಡಿ, ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡುವಂತಹ ವ್ಯಕ್ತಿಗಳಿಗೆ ನ್ಯಾಯಾಲಯ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಯುವಕರು ದುಶ್ಚಟಕ್ಕೆ ದಾಸರಾಗಿ ಇಂತಹ ಕೃತ್ಯ ಎಸಗುತ್ತಿದ್ದಾರೆ. ಯುವಜನತೆಯನ್ನು ದುಶ್ಚಟದಿಂದ ದೂರವಿಡಲು ದೇಶದೆಲ್ಲೆಡೆ ಜಾಗೃತಿ ಮೂಡಿಸುವುದು ಅತ್ಯವಶ್ಯಕ. ನಮ್ಮ ಹೆಣ್ಣು ಮಕ್ಕಳ ರಕ್ಷಣೆ ಹೊಣೆ ನಮ್ಮದಾಗಬೇಕು ಎಂದರು. ಕಾನೂನು ವಿದ್ಯಾರ್ಥಿಗಳಾದ ನೇಹಾ ಮತ್ತು ಸಿಂಚನ ಮಾತನಾಡಿ, ಮಹಿಳೆಯರಿಗೆ ಇರುವಂತಹ ಕಟ್ಟುಪಾಡುಗಳನ್ನು ಯುವಕರಿಗೂ ಅನ್ವಯಿಸುವಂತೆ ಮಾಡಬೇಕು. ಮಹಿಳೆಯರ ರಕ್ಷಣೆಗೆ ಸರ್ಕಾರ ವಿಶೇಷ ಪೊಲೀಸ್ ವ್ಯವಸ್ಥೆ ಕಲ್ಪಿಸಬೇಕು ಎಂದರು. ನಾಡಕಚೇರಿ ಪ್ರಭಾರಿ ಉಪ ತಹಸೀಲ್ದಾರ್ ಕವಿರಾಜ್ ಅವರಿಗೆ ಮನವಿ ಸಲ್ಲಿಸಲಾಯಿತು.ಪ್ರತಿಭಟನೆಯಲ್ಲಿ ಪಿಡಿಒ ಮಂಜ ನಾಯಕ್, ಭೀಮ್ ಸೇನಾ ಟ್ರಸ್ಟ್ ಅಧ್ಯಕ್ಷ ವಿಕಾಸ್, ಕಾರ್ಯದರ್ಶಿ ಅಕ್ಷಯ್, ಗ್ರಾಪಂ ಉಪಾಧ್ಯಕ್ಷೆ ರೂಪಕಲಾ, ಅಣ್ಣಪ್ಪ, ಮಂಜುನಾಥ್, ಸುನಿಲ್, ಸುದೀಪ್, ಎನ್.ಉಮೇಶ್, ಶೇಖರಪ್ಪ, ಆನಂದ ,ಮಂಜು, ಮಹಿಳಾ ಒಕ್ಕೂಟದ ಭಾಗ್ಯಮ್ಮ, ನಾಗರತ್ನ ,ಗೀತಾ ಕುಮಾರಿ ಹಾಗೂ ಇನ್ನು ಅನೇಕರು ಭಾಗವಹಿಸಿದ್ದರು.