ಸಾರಾಂಶ
ಕನ್ನಡಪ್ರಭ ವಾರ್ತೆ ಅರಕಲಗೂಡು
ಸಿಇಟಿ ಪರೀಕ್ಷೆ ಪ್ರವೇಶ ಸಮಯದಲ್ಲಿ ರಾಜ್ಯದ ಹಲವೆಡೆ ವಿದ್ಯಾರ್ಥಿಗಳಿಗೆ ಜನಿವಾರ ತೆಗೆಸಿದ ಘಟನೆ ಖಂಡಿಸಿ, ಅರಕಲಗೂಡು ಪಟ್ಟಣದಲ್ಲಿ ಜನಿವಾರ ಧಾರಣೆ ಮಾಡುವ ವಿವಿಧ ಸಮುದಾಯಗಳು ಬೃಹತ್ ಪ್ರತಿಭಟನೆ ನಡೆಸಿದವು.ಕೋಟೆ ಕೋದಂಡರಾಮ ಪ್ರವಚನ ಮಂದಿರದಲ್ಲಿ ಸಭೆ ಸೇರಿದ ತಾಲೂಕು ಬ್ರಾಹ್ಮಣ ಮಹಾಸಭಾ, ಆರ್ಯ ವೈಶ್ಯ ಮಂಡಳಿ, ವಿಶ್ವ ಕರ್ಮ ಸಮುದಾಯ, ದೇವಾಂಗ ಸಮುದಾಯದ ಮುಖಂಡರು ಘಟನೆ ಖಂಡಿಸಿ ಘೋಷಣೆಗಳನ್ನು ಕೂಗುತ್ತಾ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಅನಕೃ ವೃತ್ತ ಹಾಗೂ ದೊಡ್ಡಮ್ಮ ವೃತ್ತಗಳಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲಕಾಲ ರಸ್ತೆ ತಡೆ ಮಾಡಿದರು, ಇದರಿಂದ ನೂರಾರು ವಾಹನಗಳು ರಸ್ತೆಯಲ್ಲಿ ನಿಲ್ಲುವಂತಾಯಿತು.
ಪ್ರತಿಭಟನೆಯಲ್ಲಿ ವಿವಿಧ ಸಮುದಾಯದ ಮುಖಂಡರು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಅರೇಮಾದನಹಳ್ಳಿ ವಿಶ್ವ ಬ್ರಾಹ್ಮಣ ಮಠದ ಶಿವಸುಜ್ಞಾನ ತೀರ್ಥ ಸ್ವಾಮೀಜಿಗಳ ನೇತೃತ್ವದಲ್ಲಿ ತಾಲೂಕು ಕಚೇರಿಗೆ ತೆರಳಿ ಪ್ರತಿಭಟನೆ ನಡೆಸಿದರು.ಈ ಸಂದರ್ಭದಲ್ಲಿ ಶಿವಸುಜ್ಞಾನ ತೀರ್ಥ ಸ್ವಾಮೀಜಿ ಮಾತನಾಡಿ, ಸಿಇಟಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳಿಗೆ ಜನಿವಾರ ತೆಗೆಸಿದ್ದಲ್ಲದೆ ಪರೀಕ್ಷೆಗೆ ಕೂರಲು ಅವಕಾಶ ನೀಡದ ಘಟನೆ ತೀವ್ರ ಖಂಡನೀಯ, ಜನಿವಾರ ಧಾರಣೆ ಸನಾತನ ಧರ್ಮದ ಪವಿತ್ರ ಸಂಕೇತವಾಗಿದೆ. ಇದನ್ನು ತೆಗೆಸಿ ಅಪಮಾನ ಮಾಡಿರುವುದು ಅತ್ಯಂತ ಖಂಡನೀಯ, ಇದಕ್ಕೆ ಕಾರಣರಾದವರ ಮೇಲೆ ಕಠಿಣವಾದ ಕಾನೂನು ಕ್ರಮ ಕೈಗೊಳ್ಳುವ ಜತೆಗೆ ಇನ್ನೊಮ್ಮೆ ಇದು ಮರಕಳಿಸದಂತೆ ನೋಡಿಕೊಳ್ಳಬೇಕು ಎಂದು ಎಚ್ಚರಿಸಿದರು.
ಜಿಪಂ ಮಾಜಿ ಅಧ್ಯಕ್ಷ ವಿ. ಎ.ನಂಜುಂಡಸ್ವಾಮಿ, ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಕೆ.ವಿ.ಶ್ರೀನಿವಾಸ ಮೂರ್ತಿ, ಕಾರ್ಯದರ್ಶಿ ದೇವಕಿ ಚಂದ್ರಶೇಖರ್, ರಾಮನಾಥಪುರ ಗ್ರಾಪಂ ಸದಸ್ಯೆ ಪುಷ್ಪ ಹರೀಶ್, ವಕೀಲ ಎ.ಆರ್. ಜನಾರ್ದನಗುಪ್ತ ಮಾತನಾಡಿ, ಘಟನೆಯನ್ನು ತೀವ್ರವಾಗಿ ಖಂಡಿಸಿ, ಯಜ್ಞೋಪವೀತದ ಮಹತ್ವದ ಅರಿವು ಇಲ್ಲದವರ ಕುಕೃತ್ಯ ಇದೆಂದು ಭಾವಿಸಲಾಗದು. ಇದರ ಹಿಂದೆ ಧಮನಕಾರಿ ಚಿಂತನೆ ಇರುವಂತಿದೆ. ಇದರಿಂದ ಹಿಂದೂ ಧರ್ಮವನ್ನು ಧಮನಗೊಳಿಸಬಹುದೆಂಬ ದುಷ್ಟ ಚಿಂತನೆ ಅಡಗಿರುವಂತಿದೆ. ಸರ್ಕಾರ ಇಂತಹ ಕುಕೃತ್ಯ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು. ಬಳಿಕ ತಹಶೀಲ್ದಾರ್ ಕೆ.ಸಿ ಸೌಮ್ಯ ಅವರಿಗೆ ಮನವಿ ಸಲ್ಲಿಸಲಾಯಿತು.ವಿವಿಧ ಸಮುದಾಯಗಳ ಮುಖಂಡರಾದ ಎ.ಎಸ್. ಹಿರಣ್ಣಯ್ಯ, ಎ.ಎನ್.ಗಣೇಶಮೂರ್ತಿ, ಕೆ.ಎಸ್. ವಾಸುದೇವ್, ಗಣೇಶ್, ನರಸಿಂಹಮೂರ್ತಿ, ಪಿ.ಎನ್.ರಂಗನಾಥ್, ಎ.ಎನ್. ನಾಗೇಂದ್ರ, ಪಿ.ಎನ್. ರಮೇಶ್, ಕಿರಣ್ ಕುಮಾರ್, ಪ್ರವೀಣ್ ಕುಮಾರ್, ಅ.ರಾ.ಸುಬ್ಬರಾವ್, ವೆಂಕಟೇಶಮೂರ್ತಿ, ಕೆ.ವಿ. ಸತೀಶ್, ಶ್ರೇಯಸ್, ಸುಹಾಸ್, ಸೃಜನ್, ವಿನೋದ್, ರಾಮಶೇಷು, ರಾಮಣ್ಣ, ನಾಗಣ್ಣ, ಕೆ.ಎ. ನಾಗರಾಜ್, ಛಾಯಾಪತಿ, ರಘು, ವಿಪ್ರ ಮಹಿಳಾ ಬಳಗದ ಅಧ್ಯಕ್ಷೆ ರುಕ್ಮಿಣಿ, ಕಾರ್ಯದರ್ಶಿ ಪಿ.ಎಸ್.ಸುಧಾ, ಖಜಾಂಚಿ ಸವಿತಾ ಮುಂತಾದ ಹಲವರು ಪಾಲ್ಗೊಂಡಿದ್ದರು.