ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ: 2ಎ ಮೀಸಲಾತಿಗಾಗಿ ಬೆಳಗಾವಿಯಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜ ನಡೆಸುತ್ತಿದ್ದ ಹೋರಾಟ ಹತ್ತಿಕ್ಕಲು ಲಾಠಿಚಾರ್ಜ್ ನಡೆಸಿದ ರಾಜ್ಯ ಸರ್ಕಾರದ ವಿರುದ್ಧ ಬಬಲೇಶ್ವರ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ವಿಜಯಪುರ:
2ಎ ಮೀಸಲಾತಿಗಾಗಿ ಬೆಳಗಾವಿಯಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜ ನಡೆಸುತ್ತಿದ್ದ ಹೋರಾಟ ಹತ್ತಿಕ್ಕಲು ಲಾಠಿಚಾರ್ಜ್ ನಡೆಸಿದ ರಾಜ್ಯ ಸರ್ಕಾರದ ವಿರುದ್ಧ ಬಬಲೇಶ್ವರ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.ಬಬಲೇಶ್ವರ ಪಟ್ಟಣದ ಶ್ರೀ ಗುರುಪಾದೇಶ್ವರ ಮಠದಿಂದ ಶಾಂತವೀರ ವೃತ್ತಕ್ಕೆ ಆಗಮಿಸಿ ಸಮಾಜದ ಮುಖಂಡರು ಮಾನವ ಸರ್ಪಳಿ ನಿರ್ಮಿಸಿ ವಿಜಯಪುರ-ಜಮಖಂಡಿ ರಾಜ್ಯ ಹೆದ್ದಾರಿ ಬಂದ್ ಮಾಡಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ಹೊರ ಹಾಕಿದರು. ಬಳಿಕ ಬಬಲೇಶ್ವರ ತಹಶೀಲ್ದಾರ್ ಸಂತೋಷ ಮ್ಯಾಗೇರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಬಬಲೇಶ್ವರ ಬ್ರಹ್ಮಮಠದ ಪೀಠಾಪತಿ ಹಾಗೂ ಪಂಚಮಸಾಲಿ ಆಲಗೂರು ಪೀಠದ 3ನೇ ಜಗದ್ಗುರು ಡಾ.ಮಹಾದೇವ ಶಿವಾಚಾರ್ಯರು ಮಾತನಾಡಿ, ಹೋರಾಟದ ಸಮಯದಲ್ಲಿ ಪ್ರತಿಭಟನಕಾರರ ಮೇಲೆ ವಿನಾಕಾರಣ ದಾಖಲಿಸಿರುವ ಪ್ರಕರಣಗಳನ್ನು ಕೂಡಲೇ ಹಿಂದಕ್ಕೆ ಪಡೆಯಬೇಕು, ಲಾಠಿಚಾರ್ಜ್ ಮಾಡಲು ಕಾರಣರಾದ ಎಡಿಜಿಪಿ, ಎಸ್‌ಪಿ, ಡಿಸಿ ಅವರನ್ನು ಕೂಡಲೇ ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.ಪಂಚಮಸಾಲಿ ಸಮಾಜದ ಮುಖಂಡರಾದ ವಿಜುಗೌಡ ಪಾಟೀಲ, ವ್ಹಿ.ಎಸ್.ಪಾಟೀಲ, ಸುರೇಶ ಬಿರಾದಾರ, ಚನ್ನಪ್ಪ ಕೊಪ್ಪದ, ಈರಣ್ಣ ಕೋಳಕೂರ, ಅರ್ಜುನ ಬೇಲೂರ, ಬಸವರಾಜ ಕುರವಿನಶೆಟ್ಟಿ, ಮಾಳಿ ಸಮಾಜದ ಮುಖಂಡ ಮಲ್ಲು ಕಣ್ಣೂರ, ಸಂಗಪ್ಪ ತಮಗೊಂಡ, ಬಾಪುರಾಜ ಯಾದವಾಡ, ಈರಗೌಡ ಬಿರಾದಾರ, ಶಿವಪುತ್ರ ಪೂಜಾರಿ, ಬಿ.ಜಿ.ಬಿರಾದಾರ ಉಪಸ್ಥಿತರಿದ್ದರು.