ನಿವೇಶನಕ್ಕಾಗಿ ಆಗ್ರಹಿಸಿ ಚೆಟ್ಟಳ್ಳಿಯಲ್ಲಿ ಪ್ರತಿಭಟನೆ

| Published : Sep 21 2025, 02:02 AM IST

ಸಾರಾಂಶ

ನಿವೇಶನ ರಹಿತ ಬಡವರು ಹಾಗೂ ಕೂಲಿ ಕಾರ್ಮಿಕರಿಗೆ ನಿವೇಶನ ನೀಡುವಂತೆ ಆಗ್ರಹಿಸಿ ನಿವೇಶನ ಹೋರಾಟ ಸಮಿತಿ ಪ್ರತಿಭಟನೆ ನಡೆಸಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ನಿವೇಶನ ರಹಿತ ಬಡವರು ಹಾಗೂ ಕೂಲಿ ಕಾರ್ಮಿಕರಿಗೆ ನಿವೇಶನ ನೀಡುವಂತೆ ಆಗ್ರಹಿಸಿ ನಿವೇಶನ ಹೋರಾಟ ಸಮಿತಿ ಚೆಟ್ಟಳ್ಳಿಯಲ್ಲಿ ಪ್ರತಿಭಟನೆ ನಡೆಸಿತು.ಚೆಟ್ಟಳ್ಳಿ ಗ್ರಾ.ಪಂ ಎದುರು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದ ಸಮಿತಿಯ ಪ್ರಮುಖರು ಹಾಗೂ ನಿವೇಶನ ರಹಿತರು ಹೋರಾಟವನ್ನು ತೀವ್ರಗೊಳಿಸುವ ಎಚ್ಚರಿಕೆ ನೀಡಿದರು. ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಸಿಐಟಿಯು ಜಿಲ್ಲಾಧ್ಯಕ್ಷ ಪಿ.ಆರ್.ಭರತ್ ಅವರು, ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಂತವಾಗಿ ವಾಸಿಸಲು ಮನೆಯಿಲ್ಲದ ಸುಮಾರು 100ಕ್ಕಿಂತಲೂ ಹೆಚ್ಚು ಕುಟುಂಬಗಳು ತೋಟದ ಲೈನ್‌ಮನೆಗಳಲ್ಲಿ, ಅಪಾಯಕಾರಿ ಪ್ರದೇಶಗಳಲ್ಲಿ ಬದುಕು ಸಾಗಿಸುತ್ತಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದು 77 ವರ್ಷಗಳೇ ಕಳೆದಿದ್ದರೂ ಮಹಾತ್ಮ ಗಾಂಧಿ ಅವರ ರಾಮರಾಜ್ಯದ ಕನಸು ನನಸಾಗಲಿಲ್ಲ. ಸಂವಿಧಾನದ ಆಶಯಗಳು ಸಮರ್ಪಕವಾಗಿ ಜಾರಿಯಾಗದೆ ಇರುವುದರಿಂದ ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಆದಿವಾಸಿ, ದಲಿತ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಹಾಗೂ ಅನೇಕ ಸಣ್ಣ ಸಮುದಾಯಗಳು ನೈಜ ಸ್ವಾತಂತ್ರ್ಯವನ್ನು ಅನುಭವಿಸಲಾಗದ ಪರಿಸ್ಥಿತಿಯಲ್ಲಿವೆ. ಸರ್ಕಾರಿ ಭೂಮಿ ಒತ್ತುವರಿಯಾಗಿ ಉಳ್ಳವರ ಪಾಲಾಗುತ್ತಿದೆ.ಕಳೆದ ಹತ್ತಾರು ವರ್ಷಗಳಿಂದ ನಿವೇಶನದ ಬೇಡಿಕೆ ಇಟ್ಟು ಗ್ರಾ.ಪಂ. ಎದುರು ಹಲವು ಬಾರಿ ಹೋರಾಟ ರೂಪಿಸಿದ್ದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸ್ಪಂದನೆ ನೀಡದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿದರು. ಸರ್ಕಾರ ಬಡವರ ಬಗ್ಗೆ ಕಾಳಜಿ ತೋರಿ ಲೈನ್ ಮನೆ, ಬಾಡಿಗೆ ಮನೆ, ಸಂಬಂಧಿಕರ ಆಶ್ರಯದಲ್ಲಿ ಹಾಗೂ ಅಪಾಯಕಾರಿ ಜಾಗದಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ನಿವೇಶನ ನೀಡಿ ಮನೆ ನಿರ್ಮಿಸಿಕೊಡಬೇಕು. ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ಜಾಗವನ್ನು ತೆರವುಗೊಳಿಸಿ ನಿವೇಶನ ರಹಿತರಿಗೆ ಹಂಚಿಕೆ ಮಾಡಬೇಕು, ಗ್ರಾ.ಪಂ. ವ್ಯಾಪ್ತಿಯಲ್ಲಿ ನಿವೇಶನ ರಹಿತರ ಅರ್ಜಿ ಸ್ವೀಕಾರಕ್ಕೆ ದಿನಾಂಕ ನಿಗದಿ ಮಾಡಬೇಕು, ಪೈಸಾರಿ ಜಾಗವನ್ನು ಸಮತಟ್ಟು ಮಾಡಿ ನಿವೇಶನ ಹಂಚಬೇಕು, ಕಂಡಕೆರೆಯಲ್ಲಿ ಗುರುತಿಸಿರುವ ನಿವೇಶನವನ್ನು ನೈಜ ಕುಟುಂಬಕ್ಕೆ ನೀಡಬೇಕು, ಕಸವಿಲೇವಾರಿ ಸಂದರ್ಭ ಅಲ್ಲಿನ ನಿವಾಸಿಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು, ಸರ್ಕಾರಿ ಭೂಮಿಯನ್ನು ಉಳ್ಳವರಿಗೆ ಗುತ್ತಿಗೆ ನೀಡುವ ಸರ್ಕಾರಿ ಆದೇಶವನ್ನು ಹಿಂಪಡೆಯಬೇಕು ಎಂದು ಪಿ.ಆರ್.ಭರತ್ ಒತ್ತಾಯಿಸಿದರು. ಬೇಡಿಕೆಗೆ ಸ್ಪಂದಿಸದೇ ಇದ್ದಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು. ಮನವಿ ಪತ್ರವನ್ನು ಗ್ರಾ.ಪಂ ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿಗಳ ಮೂಲಕ ಜಿಲ್ಲಾಧಿಕಾರಿ ಹಾಗೂ ಸರ್ಕಾರಕ್ಕೆ ಸಲ್ಲಿಸಿದರು. ಕೊಡಗು ಜಿಲ್ಲಾ ಜನರಲ್ ವರ್ಕರ್ಸ್ ಯೂನಿಯನ್‌ನ ಜಿಲ್ಲಾಧ್ಯಕ್ಷ ಹೆಚ್.ಬಿ.ರಮೇಶ್, ಹೋರಾಟ ಸಮಿತಿಯ ಸಂಚಾಲಕ ಎಸ್.ಬಿ.ಜಯರಾಮ್, ಸದಸ್ಯರಾದ ಗಂಗಾಧರ್, ಎಂ.ಆರ್.ಕಮಲ, ಪುಷ್ಪ, ಸರಸು, ಕೃಷ್ಣಕುಮಾರ್, ರಮ್ಯ, ಕನ್ಯಾಕುಮಾರಿ ಸೇರಿದಂತೆ ನಿವೇಶನ ರಹಿತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.