ಸಾರಾಂಶ
ಹನೂರು ತಾಲೂಕಿನ ಎಲ್ಲೇಮಾಳ ಗ್ರಾಪಂ ಮುಂಭಾಗ ವಿವಿಧ ಬೇಡಿಕೆ ಈಡೇರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ತಾಲೂಕು ಘಟಕದ ವತಿಯಿಂದ ಪ್ರತಿಭಟನೆಯನ್ನು ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಹನೂರು
ಚುನಾವಣೆ ಮುನ್ನ ನೀಡಿದ್ದ ಭರವಸೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ತಾಲೂಕು ಘಟಕದ ವತಿಯಿಂದ ಎಲ್ಲೇಮಾಳ ಗ್ರಾಪಂ ಮುಂಭಾಗ ಪ್ರತಿಭಟನೆಯನ್ನು ನಡೆಸಲಾಯಿತು.ಪ್ರತಿಭಟನೆ ನೇತೃತ್ವವಹಿಸಿದ್ದ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ತಾಲೂಕು ಘಟಕದ ತಾಲೂಕು ಅಧ್ಯಕ್ಷ ಚಂಗಡಿ ಕರಿಯಪ್ಪ ಮಾತನಾಡಿ, ಲೋಕಸಭಾ ಚುನಾವಣೆ ಮುನ್ನ ಡಿಎಂ ಸಮುದ್ರ ಬಳಿ ರೈತ ಸಂಘಟನೆಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆಯಲ್ಲಿ ಎಲ್ಲೇಮಾಳ ಗ್ರಾಪಂ ಅಭಿವೃದ್ಧಿ ಅಧಿಕಾರಿ ಪ್ರತಿಭಟನಾ ಸ್ಥಳಕ್ಕೆ ತೆರಳಿ ವಿವಿಧ ಗ್ರಾಮಗಳ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಲು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಹೀಗಾಗಿ ಭರವಸೆ ಹುಸಿಯಾದ ಹಿನ್ನೆಲೆಯಲ್ಲಿ ಬೇಸತ್ತ ರೈತ ಸಂಘಟನೆಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಜನಪ್ರತಿನಿಧಿ ಅಧಿಕಾರಿಗಳ ವಿರುದ್ಧ ಗ್ರಾಮ ಪಂಚಾಯಿತಿ ಮುಂಭಾಗ ಅಕ್ರೋಶ ವ್ಯಕ್ತಪಡಿಸಿದರು.ರಸ್ತೆಗಳ ಅಭಿವೃದ್ಧಿಪಡಿಸಿ ಇಲ್ಲದಿದ್ದರೆ ಪ್ರತಿಭಟನೆ:ಎಲ್ಲೇಮಾಳ ಗ್ರಾಪಂ ವ್ಯಾಪ್ತಿಯ ಬಿಎಮ್ ಸಮುದ್ರ ಹಾಗೂ ಎಲ್ಲೇ ಮಾಳ ಮುಖ್ಯ ರಸ್ತೆ ಹನೂರು ಮುಖ್ಯರಸ್ತೆ ಸೇರಿದಂತೆ ಬೈರನತ್ತ ಗ್ರಾಮಕ್ಕೆ ತೆರಳುವ ರಸ್ತೆಯು ತೀವ್ರವಾದ ಗುಂಡಿಮಯವಾಗಿ ಸಂಚಾರಕ್ಕೆ ಯೋಗ್ಯವಿಲ್ಲದೆ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ವಾಹನ ಸವಾರರು ಪರದಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆಗಳ ಅಭಿವೃದ್ಧಿಯನ್ನು ಪಂಚಾಯಿತಿ ಅಧಿಕಾರಿಗಳು ಕ್ರಮವಹಿಸುವ ನಿಟ್ಟಿನಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಗ್ರಾಪಂ ಅಭಿವೃದ್ಧಿ ಅಧಿಕಾರಿ ರಮೇಶ್ ಪ್ರತಿಭಟನಾಕಾರರಿಗೆ ಡಿಸೆಂಬರ್ ಒಳಗಡೆ ರಸ್ತೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಅಲ್ಲಿಯವರೆಗೆ ಎರಡನೇ ತಾರೀಖಿನಿಂದ ಮಲೆಮಾದೇಶ್ವರ ದೇವಾಲಯದ ಬಳಿ ಜಾನುವಾರುಗಳ ಜಾತ್ರೆ ಇರುವುದರಿಂದ ತಾತ್ಕಾಲಿಕವಾಗಿ ರಸ್ತೆಗೆ ಮಣ್ಣನ್ನು ಹಾಕಿ ಸಮತಟ್ಟ ಮಾಡಿ ಅನುಕೂಲ ಕಲ್ಪಿಸಲಾಗುವುದು ಆದ್ದರಿಂದ ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯತಿ ವತಿಯಿಂದ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.ಇದೆ ವೇಳೆ ರೈತ ಮುಖಂಡರಾದ ಶಾಂತಕುಮಾರ್ ಗುರುಸ್ವಾಮಿ ರಾಜು ಗಿರಿಮಲ್ಲಯ್ಯ ಮೈಕಲ್ ನಂದೀಶ್ ರಾಜು ಚಿನ್ನರಾಜು ಸಿದ್ದಭೈರ ಹಾಗೂ ಇನ್ನಿತರ ರೈತ ಮುಖಂಡರು ಹಾಗೂ ಪೊಲೀಸ್ ಸಿಬ್ಬಂದಿ ಸೂಕ್ತ ಬಂದೋಬಸ್ತ್ ನೀಡುವ ನಿಟ್ಟಿನಲ್ಲಿ ಉಪಸ್ಥಿತರಿದ್ದರು.