ರೈತರ ಹಿತ ಕಾಪಾಡುವ ಬದಲು ಜಲಾಶಯದ ನೀರು ಬಸಿದು ಇಲ್ಲಿನ ರೈತರನ್ನು ಹಾಳು ಮಾಡುವ ಪರಿಸ್ಥಿತಿ ಇದೆ. ಸರ್ಕಾರ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಬಾರದು. ಒಂದು ವೇಳೆ ಪ್ರಾಧಿಕಾರಕ್ಕೆ ಮಣಿದು ನೀರು ಹರಿಸುವುದಾದರೆ ನಮ್ಮ ಸರ್ಕಾರದ ವಿರುದ್ಧವೂ ಕನ್ನಡಿಗರು ಧ್ವನಿ ಎತ್ತು ನಿಲ್ಲಬೇಕಾಗುತ್ತದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ಮತ್ತೆ ನೀರು ಬಿಡಲು ಸಿಡಬ್ಲ್ಯೂಆರ್‌ಸಿ ನೀಡಿರುವ ಆದೇಶ ಖಂಡಿಸಿ ಕೆಆರ್‌ಎಸ್ ಅಣೆಕಟ್ಟೆಗೆ ಮುತ್ತಿಗೆ ಹಾಕಲು ಯತ್ನಿಸಿದ ವಾಟಾಳ್ ನಾಗರಾಜು ಸೇರಿದಂತೆ ಕನ್ನಡ ಪರ ಸಂಘಟನೆಗಳ ಮುಖಂಡರನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದ್ದಾರೆ.

ಕನ್ನಡ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡ ಪರ ಸಂಘಟನೆಗಳು ಜಲಾಶಯದ ಮುಂಭಾಗದಲ್ಲಿ ಜಮಾಯಿಸಿ ಸಿಡಬ್ಲ್ಯೂಆರ್‌ಸಿ ಹಾಗೂ ತಮಿಳುನಾಡು ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿದರು.

ನಂತರ ವಾಟಾಳ್ ನಾಗರಾಜು ಮಾತನಾಡಿ, ಪ್ರತಿ ಬಾರಿಯು ಸಿಡಬ್ಲ್ಯೂಆರ್‌ಸಿ ಸೇರಿದಂತೆ ನೀರಾವರಿ ಹಂಚಿಕೆ ಪ್ರಾಧಿಕಾರಗಳು ತಮಿಳುನಾಡಿನ ಪರ ಕೆಲಸ ಮಾಡುತ್ತಿವೆ. ಇಲ್ಲಿನ ಸ್ಥಿತಿಗತಿಗಳ ನೋಡದೆ, ರೈತರ ಬೆಳೆಗಿಳಿಗೆ ನೀರು ಉಣಿಸಲು ಬಿಡದೆ, ಕಾವೇರಿ ನೀರು ಹರಿಸುವಂತೆ ಆದೇಶದ ಮೇಲೆ ಆದೇಶಗಳ ಮಾಡುತ್ತಾ ಕನ್ನಡಿಗರನ್ನು ಕೆರಳಿಸುವಂತೆ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರ ಹಿತ ಕಾಪಾಡುವ ಬದಲು ಜಲಾಶಯದ ನೀರು ಬಸಿದು ಇಲ್ಲಿನ ರೈತರನ್ನು ಹಾಳು ಮಾಡುವ ಪರಿಸ್ಥಿತಿ ಇದೆ. ಸರ್ಕಾರ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಬಾರದು. ಒಂದು ವೇಳೆ ಪ್ರಾಧಿಕಾರಕ್ಕೆ ಮಣಿದು ನೀರು ಹರಿಸುವುದಾದರೆ ನಮ್ಮ ಸರ್ಕಾರದ ವಿರುದ್ಧವೂ ಕನ್ನಡಿಗರು ಧ್ವನಿ ಎತ್ತು ನಿಲ್ಲಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮುಂದಿನ ದಿನಾಂಕವನ್ನು ನಿಗಧಿ ಮಾಡಿ ಕನ್ನಡ ಪರ ಸಂಘಟನೆಗಳ ಮುಖಂಡರ ಸಭೆ ಕರೆದು ಚರ್ಚೆ ನಡೆಸಿ ತಮಿಳುನಾಡಿನ ವಿರುದ್ಧ ಕರ್ನಾಟಕದ ಗಡಿ ಭಾಗವನ್ನು ಬಂದ್ ಮಾಡಲಾಗುತ್ತದೆ. ಜೊತೆಗೆ ತಮಿಳುನಾಡು ಮುಖ್ಯ ಮಂತ್ರಿಗಳು ಮೇಕೆದಾಟು ಅಣೆಕಟ್ಟೆ ವಿಚಾರದಲ್ಲಿ ಅಡ್ಡಿ ಪಡಿಸುವುದು ಕಂಡ ಬಂದಿದೆ. ಇದನ್ನು ಕೈ ಬಿಟ್ಟು ಮೇಕೆದಾಟು ಅಣೆಕಟ್ಟೆ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ಆಗ್ರಹಿಸಿದರು.

ಕರ್ನಾಟಕದಲ್ಲಿರುವ ತಮಿಳುನಾಡಿನ ಜನರು ಇಲ್ಲಿನ ನಾಡು, ನುಡಿ, ಜಲ, ಭಾಷೆ ಹಾಗೂ ಕಾವೇರಿ ಪರವಾಗಿ ನಿಲ್ಲಬೇಕು. ಕಾವೇರಿ ನದಿ ನೀರು ಉಳಿಸಿಕೊಳ್ಳಲು ಹೋರಾಟ ಮಾಡಿ ನಾಡಿನ ಹಿತ ಕಾಪಾಡಬೇಕು. ಅಲ್ಲದೇ, ಚಿತ್ರ ನಟರು, ಕಾರ್ಮಿಕರು, ವಾಣಿಜ್ಯ ಮಂಡಳಿ ಎಲ್ಲರೂ ಕಾವೇರಿ ನೀರು ಹೋರಾಟದ ಪರವಾಗಿ ನಮ್ಮಲ್ಲಿಯೂ ನಿಲ್ಲಬೇಕು ಎಂದು ಒತ್ತಾಯಿಸಿದರು.

ತಮಿಳುನಾಡಿನ ಪರ ರಜಿನಿಕಾಂತ್ ಸೇರಿದಂತೆ ಇತರ ನಟರು ಹೋರಾಟ ಮಾಡಿರುವುದು ಬಹುಕಾಲದಿಂದ ಬಂದಿದೆ. ನಮ್ಮ ನಾಡಿನ ಪರ ಚಿತ್ರನಟರು ಹಾಗೂ ಕಾರ್ಮಿಕ ಸಂಘಟನೆಗಳು ಹಾಗೂ ವಾಣಿಜ್ಯ ಮಂಡಳಿ ಎಲ್ಲವೂ ಈ ಬಾರಿ ಕನ್ನಡ ಪರ ಸಂಘಟನೆಗಳ ಹೋರಾಟದ ಪರವಾಗಿ ನಿಲ್ಲಬೇಕು. ನಾಡಿನ ಪರ ಧ್ವನಿ ಎತ್ತಬೇಕು ಎಂದು ಮನವಿ ಮಾಡಿದರು.

ಎಲ್ಲಾ ಕನ್ನಡ ಪರ ಸಂಘಟನೆಗಳು ನಮ್ಮಲ್ಲಿರುವ ಅಸಮಾಧಾನ ಬದಿಗೊತ್ತಿ ನಮ್ಮ ನಾಡು, ಜಲ, ಭಾಷೆ ರಕ್ಷಣೆ ಮಾಡಲು ಒಗ್ಗೂಡೋಣ ಬನ್ನಿ. ರೈತರ ಪರವಾಗಿ ನಿಲ್ಲೋಣ ನಮ್ಮ ರಾಜ್ಯವನ್ನು ಉಳಿಸೋಣ ಎಂದು ವಾಟಾಳ್ ನಾಗರಾಜು ಕರೆ ನೀಡಿದರು.

ಈ ವೇಳೆ ಹೋರಾಟಗಾರರು ಜಲಾಶಯದ ಮುಂದೆ ಹಾಕಿದ ಬ್ಯಾರಿಕೇಡ್‌ಗಳನ್ನು ಎಳೆದು ಒಳ ನುಗ್ಗಲು ಪ್ರಯತ್ನಿಸಿದ ವೇಳೆ ಪೊಲೀಸರು ವಾಟಾಳಾ ನಾಗರಾಜು ಸೇರಿದಂತೆ ಕನ್ನಡ ಪರ ಹೋರಾಟಗಾರರನ್ನು ತಡೆದು, ಬಂಧಿಸಿ ವಾಹನದಲ್ಲಿ ಕರೆದೊಯ್ದು ನಂತರ ಬಿಡುಗಡೆ ಮಾಡಿದರು.

ಕೆಆರ್‌ಎಸ್‌ಗೆ ಹೋರಾಟಗಾರಿಂದ ಮುತ್ತಿಗೆ ಹಿನ್ನೆಲೆ, ಜಲಾಶಯ ಮುಂಭಾಗದ ಪ್ರವೇಶದ್ವಾರದ ಬಳಿ, ಡಿವೈಎಸ್‌ಪಿ ಯು.ಡಿ.ಕೃಷ್ಣ ಕುಮಾರ್ ನೇತೃತ್ವದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಿ ಬ್ಯಾರಿಗೇಡ್ ಅಳವಡಿಸಿ ಹೆಚ್ಚಿನ ಭದ್ರತೆ ಒದಗಿಸಿ ಪ್ರತಿಭಟನಾಕಾರರು ಮುಖ್ಯದ್ವಾರದಲ್ಲಿ ಪ್ರವೇಶಿಸದಂತೆ ಬಿಗಿ ಭದ್ರತೆ ಮಾಡಿದರು.

ಈ ವೇಳೆ ರಾಜ್ಯ ಕನ್ನಡ ಸೇನೆ ಅಧ್ಯಕ್ಷ ಕೆ.ಆರ್.ಕುಮಾರ್, ಸಂಜೀವ್ ನಾಯಕ್, ದಾನ ಪ್ರಭುದೇವು, ಮಂಡ್ಯ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್, ಪಾರ್ಥ ಸಾರಥಿ ಸೇರಿದಂತೆ ಇತರ ಕನ್ನಡ ಪರ ಸಂಘಟನೆಯ ಮುಖಂಡರನ್ನು ಬಂಧಿಸಿ ಬಿಡುಗಡೆ ಮಾಡಿದರು.