ಸಾರಾಂಶ
ಬ್ಯಾಡಗಿ: ಕಳಪೆ ಬಿತ್ತನೆ ಬೀಜ ಮಾರಿ ರೈತರಿಗೆ ಮೋಸ ಮಾಡಿದ ಕಂಪನಿ ವಿರುದ್ಧ ಕಾನೂನು ಕ್ರಮ ಸೇರಿದಂತೆ ಸಂತ್ರಸ್ತ ರೈತರಿಗೆ ಪರಿಹಾರಕ್ಕಾಗಿ ರಾಜ್ಯ ರೈತ ಸಂಘದ ಸದಸ್ಯರು ತಾಪಂ ಆವರಣದಲ್ಲಿರುವ ಶಾಸಕರ ಕಚೇರಿ ಎದುರು ನಡೆಸುತ್ತಿರುವ ಧರಣಿ ಮೊದಲನೇ ದಿನವಾದ ಬುಧವಾರ ಯಾವುದೇ ಫಲಪ್ರದ ಕಾಣಲಿಲ್ಲ.
ಈ ವೇಳೆ ಮಾತನಾಡಿದ ತಾಲೂಕಾಧ್ಯಕ್ಷ ರುದ್ರಗೌಡ್ರ ಕಾಡನಗೌಡ್ರ ಅವರು, ತಾಲೂಕಿನ ಬಡಮಲ್ಲಿ, ಹಿರೇಹಳ್ಳಿ, ಭಗತ್‌ಸಿಂಗ್‌ನಗರ, ಚಿಕ್ಕಳ್ಳಿ ಗ್ರಾಮಗಳಲ್ಲಿ ಬೇಸಿಗೆ ಹಂಗಾಮಿನಲ್ಲಿ ಮೆಣಸಿನಕಾಯಿ ಬೀಜ ಬಿತ್ತನೆ ಮಾಡಿದ್ದರು. ಆದರೆ ಗಿಡಗಳು ದೊಡ್ಡದಾಗಿ ಬೆಳೆದಿದ್ದರೂ ಅದರಲ್ಲಿ ಕಾಯಿಗಳು ಬಿಟ್ಟಿಲ್ಲ. ಹೀಗಾಗಿ ರೈತರು ತೀವ್ರ ನಷ್ಟ ಅನುಭವಿಸಿದ್ದು, ಈ ಕುರಿತಂತೆ ಸಂಘದ ವತಿಯಿಂದ ಹಲವು ಹೋರಾಟ ಮಾಡಿದರೂ ಅಧಿಕಾರಿಗಳು ಪರಿಹಾರ ಕೊಡಿಸಲು ಮುಂದಾಗಿಲ್ಲ. ಆದ್ದರಿಂದ ಪರಿಹಾರ ಸಿಗುವ ವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಎಚ್ಚರಿಸಿದರು.ಶಾಸಕರೇ ಪರಿಹಾರ ಕೊಡಿಸಿ: ರೈತ ಮುಖಂಡ ಗಂಗಣ್ಣ ಎಲಿ ಮಾತನಾಡಿ, ಕಳಪೆ ಬಿತ್ತನೆ ಬೀಜ ಮಾರಾಟ ಮಾಡಿದ ಹೈದ್ರಾಬಾದ್ ಧನ್‌ಕ್ರಾಫ್ ಮತ್ತು ಸನ್ಸ್ ಪ್ರೈ. ಲಿಮಿಟೆಡ್‌ನಿಂದ ಜಿಲ್ಲಾಧಿಕಾರಿಗಳು ಹಾಗೂ ಸ್ಥಳೀಯ ಶಾಸಕರು ಸಂತ್ರಸ್ತ ರೈತರಿಗೆ ಪರಿಹಾರ ಕೊಡಿಸುವ ಭರವಸೆ ನೀಡಿದ್ದರು. ಆದರೆ ಈವರೆಗೂ ಏನನ್ನೂ ಮಾಡದಿರುವ ಅವರ ವರ್ತನೆ ಸಾಕಷ್ಟು ಅನುಮಾನ ಮೂಡಿಸಿದೆ. ನಮ್ಮನ್ನು ಕಾಯಬೇಕಿದ್ದ ಇವರೇ ನಮ್ಮನ್ನು ಕೈಬಿಡುತ್ತಿದ್ದಾರೆ. ಆದ್ದರಿಂದ ಕ್ಷೇತ್ರದ ಶಾಸಕರು ರೈತರಿಗೆ ನ್ಯಾಯ ಒದಗಿಸುವ ವರೆಗೂ ರೈತ ಸಂಘವು ಪ್ರತಿಭಟನೆ ಹಿಂದಕ್ಕೆ ಪಡೆಯುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಎಕರೆಗೆ ₹4 ಲಕ್ಷ ಪರಿಹಾರ ಕೊಡಿ: ಮಂಜು ತೋಟದ ಮಾತನಾಡಿ, ಪ್ರತಿ ಎಕರೆಗೆ ಮೆಣಸಿನಕಾಯಿ ಸಸಿ ನೆಟ್ಟು ಬೆಳೆಸಲು ₹1.5 ಲಕ್ಷ ಖರ್ಚು ಮಾಡಿದ್ದೇವೆ. ಇದೀಗ ಹಸಿ ಮೆಣಸಿನಕಾಯಿ ದರ ಕ್ವಿಂಟಲ್‌ಗೆ ₹8 ಸಾವಿರವಿದೆ, ರೈತರಿಗೆ ಪ್ರತಿ ಎಕರೆಗೆ ₹4 ಲಕ್ಷ ಪರಿಹಾರ ನೀಡುವಂತೆ ಒತ್ತಾಯಿಸಿದರು.
ನ್ಯಾಯ ಸಿಗುವ ಭರವಸೆಯಿಲ್ಲ: ಅನ್ಯಾಯವಾದ ರೈತರಿಗೆ ನ್ಯಾಯ ಒದಗಿಸಬಾರದೆಂಬ ನಿರ್ಧಾರಕ್ಕೆ ಪೊಲೀಸ್ ಇಲಾಖೆ ಬಂದಿದೆ, ಬಿತ್ತನೆ ಬೀಜ ಕಂಪನಿ ಸಿಬ್ಬಂದಿ ಬಂಧನವಾಗಿದ್ದರೂ ಸುಲಭವಾಗಿ ಜಾಮೀನು ಸಿಗುವಂತಹ ಸೆಕ್ಷನ್ ಹಾಕಿದ್ದು, ಅವರ ವಿರುದ್ಧ ಎಫ್‌ಐಆರ್ ಹಾಕಿ ಏನು ಪ್ರಯೋಜನ? ರೈತರನ್ನು ಕರೆಸಿ ಬಿತ್ತನೆ ಬೀಜ ಕಂಪನಿ ಸಿಬ್ಬಂದಿ ಜತೆ ಸಂಧಾನ ನಡೆಸಿಲ್ಲವೇಕೆ? ನಿಮ್ಮಿಂದ ನ್ಯಾಯ ಸಿಗುವ ಭರವಸೆಯಿಲ್ಲ. ಬದಲಾಗಿ ಅಪ್ರತ್ಯಕ್ಷವಾಗಿ ಶಾಸಕರ ಗೌರವಕ್ಕೆ ಚ್ಯುತಿ ಬರುವಂತೆ ಪೊಲೀಸರು ನಡೆದುಕೊಳ್ಳುತ್ತಿದ್ದಾರೆ ಎಂದು ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ ತಿಳಿಸಿದರು.ಮೂರು ಹಂತದಲ್ಲಿಯೂ ವಿಜ್ಞಾನಿಗಳು ಬೀಜಗಳನ್ನು ಪರೀಕ್ಷೆ ನಡೆಸಿದ್ದು, ಬಿತ್ತನೆ ಬೀಜ ಕಳಪೆಯಾಗಿದ್ದು, ಯಾವುದೇ ಕಾರಣಕ್ಕೂ ಕಾಯಿಗಳು ಬಿಡುವುದಿಲ್ಲ ಎಂಬ ವರದಿ ನೀಡಿದ್ದಾರೆ. ಹೀಗಿದ್ದರೂ ಬೀಜ ಕಂಪನಿಯವರು ಪರಿಹಾರ ನೀಡುತ್ತಿಲ್ಲ. ಹಾಗಿದ್ದರೇ ನಮ್ಮ ಹೋರಾಟ ನ್ಯಾಯಸಮ್ಮತವಲ್ಲವೇ? ಬೂಟಾಟಿಕೆಯೇ ಎಂದು ಪ್ರತಿಭಟನಾನಿರತ ರೈತರು ಪ್ರಶ್ನಿಸಿದರು.ಸ್ಥಳಕ್ಕೆ ಬಾರದ ಅಧಿಕಾರಿಗಳುರೈತರ ಧರಣಿ ಕುರಿತಾಗಿ ಮಾಹಿತಿ ಇದ್ದರೂ ಕೃಷಿ, ತೋಟಗಾರಿಕೆ, ಸೇರಿದಂತೆ ಯಾವೊಬ್ಬ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬರಲಿಲ್ಲ. ಇದರೊಟ್ಟಿಗೆ ಸ್ಥಳೀಯ ಶಾಸಕರು ಬೆಂಗಳೂರು ಪ್ರವಾಸಲ್ಲಿದ್ದ ಕಾರಣ ಸಮಸ್ಯೆಗೆ ಪರಿಹಾರ ದೊರೆಯದ ಕಾರಣ ರೈತರು ಪ್ರತಿಭಟನೆಯನ್ನು ಎರಡನೇ ದಿನಕ್ಕೆ ಮುಂದುವರಿಸಿದ್ದಾರೆ.