ವಿದ್ಯುತ್‌ ಕಡಿತ ಖಂಡಿಸಿ ಹಳೇಬೀಡಲ್ಲಿ ಪ್ರತಿಭಟನೆ

| Published : May 22 2025, 01:06 AM IST

ಸಾರಾಂಶ

ಹಳೇಬೀಡು ಹೋಬಳಿಯಲ್ಲಿ ನಿರಂತರ ವಿದ್ಯುತ್ ವ್ಯತ್ಯಯವಾಗುತ್ತಿದ್ದು, ರೈತರು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಕೂಡಲೇ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ, ರೈತ ಸಂಘ ಹಾಗೂ ವಿವಿಧ ಜನಪರ ಸಂಘಟನೆಗಳ ಕಾರ್ಯಕರ್ತರು ಬುಧವಾರ ಹಳೇಬೀಡಿನಲ್ಲಿ ಪ್ರತಿಭಟನೆ ನಡೆಸಿದರು. ಪರಿವರ್ತಕವನ್ನು ಅಳವಡಿಕೊಡಲು ಕೆಲ ಸಿಬ್ಬಂದಿ ಲಂಚ ಕೇಳುತ್ತಾರೆ. ವಿದ್ಯುತ್ ಸರಬರಾಜಿನಲ್ಲಿ ಭಾರಿ ತೊಂದರೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ ಎಂದರು.

ಕನ್ನಡಪ್ರಭ ವಾರ್ತೆ ಹಳೇಬೀಡು

ಹೋಬಳಿಯಲ್ಲಿ ನಿರಂತರ ವಿದ್ಯುತ್ ವ್ಯತ್ಯಯವಾಗುತ್ತಿದ್ದು, ರೈತರು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಕೂಡಲೇ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ, ರೈತ ಸಂಘ ಹಾಗೂ ವಿವಿಧ ಜನಪರ ಸಂಘಟನೆಗಳ ಕಾರ್ಯಕರ್ತರು ಬುಧವಾರ ಹಳೇಬೀಡಿನಲ್ಲಿ ಪ್ರತಿಭಟನೆ ನಡೆಸಿದರು. ರಾಜನಸಿರಿಯೂರು ವೃತ್ತದಿಂದ ಚೆಸ್ಕಂ ಕಚೇರಿಯವರೆಗೆ ರಸ್ತೆಯಲ್ಲಿ ಸರ್ಕಾರ ಹಾಗೂ ವಿದ್ಯುತ್ ಸರಬರಾಜು ಕಂಪನಿ ವಿರುದ್ಧ ಧಿಕ್ಕಾರದ ಘೋಷಣೆ ಕೂಗುತ್ತಾ ಸಾಗಿಬಂದ ಪ್ರತಿಭಟನಾಕಾರರು, ಬಸವೇಶ್ವರ(ಶ್ರೀ ಕರಿಯಮ್ಮ ಮಹಾದ್ವಾರ) ವೃತ್ತದಲ್ಲಿ ರಸ್ತೆ ಸಂಚಾರ ತಡೆದು ಕೆಲಕಾಲ ಧರಣಿ ನಡೆಸಿದರು. ಬಳಿಕ ಚೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ, ಬೀಗ ಜಡಿಯಲು ಮುಂದಾದರು. ಜಿಲ್ಲಾ ಕರವೇ ಉಪಾಧ್ಯಕ್ಷ ಸೀತಾರಾಮು, ತಿಂಗಳಿಂದ ಯಾವುದೇ ಮುನ್ಸೂಚನೆ ಹಾಗೂ ಹೊತ್ತು ಗೊತ್ತಿಲ್ಲದೆ ವಿದ್ಯುತ್ ಕಡಿತಗೊಳಿಸಲಾಗುತ್ತಿದ್ದು, ೧೦ ನಿಮಿಷ ಇದ್ದರೆ ಅದೇ ಹೆಚ್ಚು. ಚೆಸ್ಕಾಂ ಸಿಬ್ಬಂದಿ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದು, ೯ ತಿಂಗಳಿನಿಂದ ಶಾಖಾಧಿಕಾರಿಯನ್ನೂ ನೇಮಿಸಿಲ್ಲ. ಇದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಕತ್ತಲು ಆವರಿಸುತ್ತಿದೆ ಎಂದು ದೂರಿದರು. ರೈತ ಮುಖಂಡ ಕೆ.ಪಿ.ಕುಮಾರ್ ಮಾತನಾಡಿ, ತಿಂಗಳಿಂದ ವಿದ್ಯುತ್ ಕಡಿತಗೊಳಿಸಲಾಗುತ್ತಿದ್ದು, ರೈತರು ನಿದ್ದೆಗೆಟ್ಟು ನೀರು ಹಾಯಿಸಲು ಪರದಾಡುತ್ತಿದ್ದಾರೆ. ಇದಲ್ಲದೆ ಪರಿವರ್ತಕವನ್ನು ಅಳವಡಿಕೊಡಲು ಕೆಲ ಸಿಬ್ಬಂದಿ ಲಂಚ ಕೇಳುತ್ತಾರೆ. ವಿದ್ಯುತ್ ಸರಬರಾಜಿನಲ್ಲಿ ಭಾರಿ ತೊಂದರೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ ಎಂದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಕಲೇಶಪುರ ಚೆಸ್ಕಾಂ ವಿಭಾಗಾಧಿಕಾರಿ ಮಂಜುನಾಥ್, ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿ , ಸಮಸ್ಯೆಯನ್ನು ತಿಂಗಳೊಳಗೆ ಪರಿಹರಿಸುವುದಾಗಿ ಹೇಳಿದರು. ಇದಕ್ಕೊಪ್ಪದ ಕಾರ್ಯಕರ್ತರು ಕೂಡಲೇ ಬಗೆಹರಿಸಬೇಕೆಂದು ಪಟ್ಟು ಹಿಡಿದರು. ಮೇಲಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಬಳಿಕ, ಅತಿ ಶೀಘ್ರದಲ್ಲಿ ಸಹಾಯಕ ಎಂಜಿನಿಯರ್ ನೇಮಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಬಳಿಕ ಧರಣಿ ನಿರತರು ಪ್ರತಿಭಟನೆ ಹಿಂಪಡೆದರು.ರೈತ ಮುಖಂಡ ಹಾಲಪ್ಪ, ಗಡಿ ಕುಮಾರ್, ಸ್ವಾಮಿಗೌಡ, ಕರವೇ ಕಾರ್ಯಕರ್ತರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.