ಸಾರಾಂಶ
ಗಾಲಿ ಜನಾರ್ಧನ ರೆಡ್ಡಿ ಹನುಮಮಾಲಾಧಾರಿಗಳಾಗಿ ಸಮಸ್ತ ಮಾಲಾಧಾರಿಗಳ ಮೂಲ ಸೌಕರ್ಯಕ್ಕಾಗಿ 8 ದಿನಗಳ ಕಾಲ ಕುಟೀರದಲ್ಲಿ ವಾಸ್ತವ್ಯ ಹೂಡಿದ್ದರು. ಈ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದ್ದರೆ ಯಾರು ಹೊಣೆ?
ಕೊಪ್ಪಳ: ನಗರದ ಜಿಲ್ಲಾಡಳಿತ ಭವನ ಆವರಣದಲ್ಲಿ ಜಿಲ್ಲೆಯ ಗಂಗಾವತಿ ತಾಲೂಕಿನ ಪಂಪಾ ಸರೋವರ ಬಳಿ ಇದ್ದ ಕುಟೀರಕ್ಕೆ ಬೆಂಕಿ ತಗುಲಿ ಹಾನಿಗೊಳಗಾಗಿದೆ. ಕಿಡಿಗೇಡಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜಿಲ್ಲಾ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಪ್ರತಿಭಟಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಶಾಸಕ ಗಾಲಿ ಜನಾರ್ಧನ ರೆಡ್ಡಿ ಜನಪ್ರಿಯತೆ ಸಹಿಸದೇ ಐತಿಹಾಸಿಕ ಸ್ಥಳದ ಮಹಿಮೆ ಅರಿಯದೇ ಪಂಪಾ ಸರೋವರದ ಕುಟೀರಕ್ಕೆ ಬೆಂಕಿ ಹಚ್ಚಿದ ಕಿಡಿಗೇಡಿಗಳ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಬೇಕು. ಶಾಸಕ ಗಾಲಿ ಜನಾರ್ಧನ ರೆಡ್ಡಿ ಪ್ರಸಿದ್ಧಿ ಪಡೆದಿರುವ ಶ್ರೀ ಅಂಜನಾದ್ರಿ ದೇವಸ್ಥಾನದ ಹಾಗೂ ಆನೆಗುಂದಿ ಭಾಗದ ಸಾರ್ವಜನಿಕ ಅಭಿವೃದ್ಧಿ ಕಾರ್ಯಗಳಿಗೆ, ಸಾರ್ವಜನಿಕರೊಂದಿಗೆ, ಅಧಿಕಾರಿಗಳೊಂದಿಗೆ ಹಾಗೂ ಸಂಬಂಧಿಸಿದ ಇಲಾಖೆಯೊಂದಿಗೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಮತ್ತು ಸಭೆಗಳನ್ನು ಮಾಡಲು ಪಂಪಾ ಸರೋವರದ ಹತ್ತಿರ ಕುಟೀರ ಉಪಯೋಗಿಸುತ್ತಿದ್ದರು. ಗಾಲಿ ಜನಾರ್ಧನ ರೆಡ್ಡಿ ಹನುಮಮಾಲಾಧಾರಿಗಳಾಗಿ ಸಮಸ್ತ ಮಾಲಾಧಾರಿಗಳ ಮೂಲ ಸೌಕರ್ಯಕ್ಕಾಗಿ 8 ದಿನಗಳ ಕಾಲ ಕುಟೀರದಲ್ಲಿ ವಾಸ್ತವ್ಯ ಹೂಡಿದ್ದರು. ಈ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದ್ದರೆ ಯಾರು ಹೊಣೆ? ಕುಟೀರಕ್ಕೆ ಡಿ.27ರಂದು ಬೆಳಗ್ಗೆ 10.40ರ ಸುಮಾರಿಗೆ ದುಷ್ಕರ್ಮಿಗಳು ಈ ಶೆಡ್ಡಿಗೆ ಬೆಂಕಿ ಹಚ್ಚಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ಮಾಡಿ ದುಷ್ಕರ್ಮಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಿದ್ದಾರೆ.ಪಕ್ಷದ ಜಿಲ್ಲಾಧ್ಯಕ್ಷ ಸಂಗಮೇಶ ಬಾದವಾಡಗಿ, ಪ್ರಮುಖರಾದ ಚನ್ನವೀರ ಗೌಡ ಕೋರಿ, ಜಿಲಾನ್ ಪಾಷಾ, ದುರ್ಗಪ್ಪ ದಳಪತಿ, ಗಂಗಾಧರ ಸ್ವಾಮಿ, ವೆಂಕಟೇಶ್ ಇಳಿಗೇರ್, ರಾಮಣ್ಣ ನಾಯ್ಕ್, ರಾಜೇಶ್ವರಿ, ಮಾಲಾ ನಾಯ್ಕ್, ಈರಮ್ಮ, ಸುಮಂಗಲಮ್ಮ, ವಿಜಯಲಕ್ಷ್ಮಿ, ಶರಣ ಓಜನಹಳ್ಳಿ, ಪಂಪಯ್ಯ ಸ್ವಾಮಿ ಕಿನ್ನಾಳ, ಮಂಜು ಜನಾದ್ರಿ, ಮಾರ್ಕಂಡೇಶ ಇದ್ದರು.