ಸಾರಾಂಶ
13 ಗ್ರಾಮದ ರೈತರು ಸರ್ಕಾರದ ಬಲವಂತದ ಭೂ ಸ್ವಾಧೀನ ನೀತಿ ಖಂಡಿಸಿ 1180 ದಿನಗಳಿಂದ ದೇವನಹಳ್ಳಿಯ ಸಂತೆ ಮೈದಾನದಲ್ಲಿ ಶಾಂತಿಯುತ ಚಳವಳಿ ನಡೆಸುತ್ತಿದ್ದರು. ಇಂಥದೊಂದು ದೀರ್ಘಾವಧಿಯ ರೈತ ಚಳವಳಿ ನಡೆಯುತ್ತಿದ್ದರೂ ಸರ್ಕಾರ ಏನೂ ನಡೆಯುತ್ತಿಲ್ಲವೆಂಬಂತೆ ಜಾಣ ಕುರುಡುತನ ಪ್ರದರ್ಶಿಸಿತು.
ಕೊಪ್ಪಳ:
ದೇವನಹಳ್ಳಿಯಲ್ಲಿ ಚಳವಳಿ ನಿರತ ರೈತರ ಬಂಧನ ಖಂಡಿಸಿ ಸಂಯುಕ್ತ ಹೋರಾಟ-ಕರ್ನಾಟಕ ಜಿಲ್ಲಾ ಮಂಡಳಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳಿಂದ ನಗರದ ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಬಂಧಿತ ರೈತರ ಬಿಡುಗಡೆಗೆ ಆಗ್ರಹಿಸಲಾಯಿತು.ರೈತ ಪರ ಚಳವಳಿಗಾರರು ಮಾತನಾಡಿ, 13 ಗ್ರಾಮದ ರೈತರು ಸರ್ಕಾರದ ಬಲವಂತದ ಭೂ ಸ್ವಾಧೀನ ನೀತಿ ಖಂಡಿಸಿ 1180 ದಿನಗಳಿಂದ ದೇವನಹಳ್ಳಿಯ ಸಂತೆ ಮೈದಾನದಲ್ಲಿ ಶಾಂತಿಯುತ ಚಳವಳಿ ನಡೆಸುತ್ತಿದ್ದರು. ಇಂಥದೊಂದು ದೀರ್ಘಾವಧಿಯ ರೈತ ಚಳವಳಿ ನಡೆಯುತ್ತಿದ್ದರೂ ಸರ್ಕಾರ ಏನೂ ನಡೆಯುತ್ತಿಲ್ಲವೆಂಬಂತೆ ಜಾಣ ಕುರುಡುತನ ಪ್ರದರ್ಶಿಸಿತು. ಇದು ರೈತರ ತಾಳ್ಮೆಗೆಡಲು ಕಾರಣವಾಯಿತು. ಇದರಿಂದ ರೈತರ ಚಳವಳಿಯು ತೀವ್ರತೆ ಪಡೆಯಿತು ಎಂದು ಹೇಳಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳ ರೈತರು, ಕಾರ್ಮಿಕರು, ಜನಪರ ಸಂಘಟನೆಗಳ ಕಾರ್ಯಕರ್ತರು ದೇವನಹಳ್ಳಿ ಚಲೋ ಚಳವಳಿಯ ಭಾಗವಾಗಿ ಅಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು. ಪ್ರಾಣ ಬಿಟ್ಟೆವು, ಭೂಮಿ ಬಿಡೆವು ಘೋಷವಾಕ್ಯದಡಿ ಪ್ರತಿಭಟನೆ ನಡೆಸುತ್ತಿದ್ದ ಹೋರಾಟಗಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಸ್ಯೆಗಳಿಗೆ ಪರಿಹಾರ ಹುಡುಕಬೇಕಾದ ಸರ್ಕಾರ ರೈತರ ಜತೆ ಅಸಭ್ಯವಾಗಿ ವರ್ತಿಸಿದ್ದಲ್ಲದೆ ಅನಗತ್ಯವಾಗಿ ಬಂಧಿಸಿ ದರ್ಪ ತೋರಿಸಿದೆ. ಸರ್ಕಾರದ ಈ ನಡೆ ಖಂಡಿಸಿ ರಾಜ್ಯಮಟ್ಟದ ಹೋರಾಟಕ್ಕೆ ಬೆಂಬಲಿಸಿ ಕೊಪ್ಪಳದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿದ್ದೇವೆ ಎಂದು ಹೇಳಿದರು.ಈ ವೇಳೆ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಖಾಸಿಮ್ ಸರ್ದಾರ್, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಬಸವರಾಜ್ ಶೀಲವಂತರ, ಜನಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಸ್.ಎ. ಗಫಾರ, ಮಖಬೂಲ್ ರಾಯಚೂರು, ಶಿವಪ್ಪ ಹಡಪದ, ಸಿಪಿಐಎಂ ತಾಲೂಕು ಮುಖಂಡ ಫಕೀರಮ್ಮ ಮಿರಗನತಂಡಿ, ಕಟ್ಟಡ ಕಾರ್ಮಿಕರ ಮುಖಂಡ ಶಕ್ಷಾವಲಿ, ಮಂಜಪ್ಪ, ಟಿಯುಸಿಐ ರಾಜ್ಯ ಕಾರ್ಯದರ್ಶಿ ಕೆ.ಬಿ. ಗೋನಾಳ, ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ ಮುಖಂಡ ನಾಗರಾಜ ಕಡೆಮನಿ, ಭೀಮಪ್ಪ ಯಲಬುರ್ಗಿ ಭಾಗವಹಿಸಿದ್ದರು.