ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ನಡೆಸಿದ ಭೀಕರ ವೈಮಾನಿಕ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯನ್ನು ಖಂಡಿಸಿ ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಅಂಜುಮನ್- ಎ-ಫೈಜಾನ್-ಎ-ಹುಸೈನಿ ಸಂಘಟನೆಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ನಡೆಸಿದ ಭೀಕರ ವೈಮಾನಿಕ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯನ್ನು ಖಂಡಿಸಿ ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಅಂಜುಮನ್- ಎ-ಫೈಜಾನ್-ಎ-ಹುಸೈನಿ ಸಂಘಟನೆಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.ಪ್ರತಿಭಟನೆಯಲ್ಲಿ ಅಲಿ ಖಮೇನಿ ಅವರ ಭಾವಚಿತ್ರಗಳನ್ನು ಪ್ರದರ್ಶಿಸುವುದರ ಜೊತೆಗೆ, ಕಪ್ಪು ಬಾವುಟ ಹಾಗೂ ಭಾರತದ ರಾಷ್ಟ್ರಧ್ವಜವನ್ನು ಹಿಡಿದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ಪ್ರತಿಭಟನಾಕಾರರು ಆಕ್ರೋಶವನ್ನು ಹೊರಹಾಕಿದರು.
ಖಮೇನಿ ಅವರ ನಿಧನದಿಂದ ಜಗತ್ತಿನಾದ್ಯಂತ ಇರುವ ಅವರ ಅಭಿಮಾನಿಗಳ ಹೃದಯಗಳು ದುಃಖದಿಂದ ತುಂಬಿವೆ. ವಿಶ್ವದಾದ್ಯಂತ ಸಂತ್ರಸ್ತರ ಪರವಾಗಿ ಧ್ವನಿ ಎತ್ತುತ್ತಿದ್ದ ಹಾಗೂ ಅನ್ಯಾಯದ ಮುಂದೆ ಎಂದೂ ತಲೆಭಾಗದ ಧೈರ್ಯಶಾಲಿ ನಾಯಕ ಇಬ್ರಾಹಿಂ ಅಲಿ ಖಮೇನಿ ಅವರ ಸೇವೆ ಮತ್ತು ತ್ಯಾಗವನ್ನು ಸ್ಮರಿಸಿದರು.ಅವರ ಚಿಂತನೆಗಳು ಕೇವಲ ಇರಾನ್ ದೇಶಕ್ಕೆ ಸೀಮಿತವಾಗದೆ, ಇಡೀ ಜಗತ್ತಿನ ಜನರಿಗೆ ಭರವಸೆ ಮತ್ತು ಧೈರ್ಯ ನೀಡುವಂತಿದ್ದವು ಎಂದು ಪ್ರತಿಭಟನಾಕಾರರು ಈ ಸಂದರ್ಭದಲ್ಲಿ ಆಶಯ ವ್ಯಕ್ತಪಡಿಸಿದರು. ಅಲಿ ಖಮೇನಿ ಅವರು ಇಂದು ಭೌತಿಕವಾಗಿ ನಮ್ಮನ್ನು ಅಗಲಿದ್ದರೂ, ಅವರು ತೋರಿಸಿಕೊಟ್ಟ ಮಾರ್ಗ ಮತ್ತು ಆದರ್ಶಗಳು ನಮ್ಮ ಹೃದಯದಲ್ಲಿ ಸದಾ ಜೀವಂತವಾಗಿರುತ್ತವೆ, ಅವರ ಜೀವನವು ಮುಂಬರುವ ಪೀಳಿಗೆಗೆ ಸದಾ ಕಾಲ ಸ್ಫೂರ್ತಿಯಾಗಲಿದೆ. ಕೂಡಲೇ ಭಾರತ ಸರ್ಕಾರ ಮಧ್ಯಪ್ರವೇಶಿಸಬೇಕು. ಅಮೇರಿಕಾದ ವರ್ತನೆಯನ್ನು ಖಂಡಿಸಬೇಕು ಮತ್ತು ಅಲ್ಲಿರುವ ಭಾರತೀಯರ ರಕ್ಷಣೆಗೆ ಮುಂದಾಗಬೇಕು. ಇಡೀ ವಿಶ್ವದ ಎಲ್ಲಾ ರಾಷ್ಟ್ರಗಳು ಈ ಎರಡೂ ದೇಶಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಯುನೈಟೆಡ್ ಎಮಿರೈಟ್ಸ್ ದೇಶಗಳು ಕೂಡ ತಾವು ಅಮೇರಿಕಾಕ್ಕೆ ಸೇನಾ ನೆಲೆ ನೀಡುವುದಿಲ್ಲವೆಂದು ಹೇಳಿ ಈಗ ದ್ರೋಹ ಮಾಡುತ್ತಿವೆ. ಅದಕ್ಕಾಗಿ ಇರಾನ್ ಅವರ ಮೇಲೂ ದಾಳಿ ಪ್ರಾರಂಭಿಸಿದೆ. ಇರಾನ್‌ಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಪ್ರಮುಖರಾದ ಮೀರ್ ಮೂಯಿಬ್ ಹುಸೇನ್, ಅಬ್ಬಾಸ್, ಸಾಬೇರಾ ಹುಸೇನ್, ತೌಕಿರ್ ಮತ್ತಿತರರಿದ್ದರು.
---ಖಮೇನಿ ಅವರು ಸದಾ ಸತ್ಯದ ಪರವಾಗಿ ನಿಂತು ಅನ್ಯಾಯದ ಮುಂದೆ ತಲೆಭಾಗದ ವ್ಯಕ್ತಿಯಾಗಿದ್ದಾರೆ. ಅಮೇರಿಕಾ ಮತ್ತು ಇಸ್ರೇಲ್ ತಮ್ಮ ಸ್ವಾರ್ಥಕ್ಕಾಗಿ ಒಂದು ಸಣ್ಣ ದೇಶದ ಮೇಲೆ ಪದೇ ಪದೇ ಯುದ್ಧ ಸಾರಿ ಅಲ್ಲಿನ ಜನರನ್ನು ಸಂಕಷ್ಟಕ್ಕೀಡು ಮಾಡುತ್ತಿದ್ದಾರೆ. ಖಮೇನಿ ಅವರು ಎಲ್ಲರ ಹೃದಯದಲ್ಲಿ ಜೀವಂತವಾಗಿದ್ದಾರೆ.
-ಮೌಲಾನ ಅಬ್ಬಾಸ್ ಅಲಿ ಶರೀಫ್, ಮುಸ್ಲಿಂ ಗುರುಗಳು.