ಸಾರಾಂಶ
ಕುಶಾಲನಗರ ಮತ್ತು ಸೋಮವಾರಪೇಟೆ ತಾಲೂಕು ಮುಸ್ಲಿಂ ಒಕ್ಕೂಟದ ಪ್ರಮುಖರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಕುಶಾಲನಗರ
ಕೇಂದ್ರ ಸರ್ಕಾರ ವಕ್ಫ್ ಮಸೂದೆ ತಿದ್ದುಪಡಿ ಮಾಡಿರುವ ನಿರ್ಣಯವನ್ನು ತಕ್ಷಣ ಹಿಂಪಡೆಯುವಂತೆ ಆಗ್ರಹಿಸಿ ಕುಶಾಲನಗರ ಮತ್ತು ಸೋಮವಾರಪೇಟೆ ತಾಲೂಕು ಮುಸ್ಲಿಂ ಒಕ್ಕೂಟದ ಪ್ರಮುಖರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.ತಾಲೂಕು ಮುಸ್ಲಿಂ ಒಕ್ಕೂಟ ಕೇಂದ್ರ ಸಮಿತಿ ಅಧ್ಯಕ್ಷರಾದ ಈ.ಕೆ ಕರೀಂ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಕಾಯ್ದೆಯನ್ನು ತಕ್ಷಣ ಹಿಂಪಡೆಯಬೇಕು ಎಂದು ಹೇಳಿದ ಕರೀಂ ಮುಸಲ್ಮಾನರಿಗೆ ಸೇರಿದ ಆಸ್ತಿಯನ್ನು ಕಬಳಿಸುವ ಅಪಾಯಕಾರಿ ಕಾನೂನನ್ನು ತಂದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.ಈ ಸಂದರ್ಭ ಸಾಮಾಜಿಕ ಕಾರ್ಯಕರ್ತ ಮಹಮ್ಮದ್ ಹನೀಫ್ ಮಾತನಾಡಿ, ಧಾರ್ಮಿಕ ಕಾರ್ಯಗಳಿಗೆ ಪೂರ್ವಿಕರು ದಾನ ನೀಡಿದ ಜಾಗ ಸರ್ಕಾರದ ಆಸ್ತಿ ಅಲ್ಲ. ಮುಂದಿನ ದಿನಗಳಲ್ಲಿ ಮಂದಿರ, ಚರ್ಚ್ ಆಸ್ತಿಯ ಮೇಲು ಸರ್ಕಾರ ಕಣ್ಣು ಹಾಕುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಇದೇ ಸಂದರ್ಭ ಮಾತನಾಡಿದ ಒಕ್ಕೂಟದ ಪ್ರಮುಖರು ಯಾವುದೇ ಸಂದರ್ಭ ಕೊಡಗು ವಿಶ್ವವಿದ್ಯಾಲಯ ರದ್ದುಗೊಳಿಸುವ ನಿರ್ಣಯ ಕೈಗೊಳ್ಳಬಾರದು ಅಥವಾ ಇತರ ವಿಶ್ವವಿದ್ಯಾಲಯಗಳಿಗೆ ವಿಲೀನಗೊಳಿಸುವ ನಿರ್ಧಾರ ಸರಕಾರ ಮಾಡಿದ್ದಲ್ಲಿ ಜಿಲ್ಲೆಯ ಬಡ ಮತ್ತು ಅಲ್ಪಸಂಖ್ಯಾತರ ಮಕ್ಕಳಿಗೆ ಉನ್ನತ ಶಿಕ್ಷಣ ಪಡೆಯುವ ನಿಟ್ಟಿನಲ್ಲಿ ಅನ್ಯಾಯ ಮಾಡಿದಂತಾಗುತ್ತದೆ.ಕೊಡಗು ವಿಶ್ವವಿದ್ಯಾಲಯವನ್ನು ಅಳುವಾರದಲ್ಲಿ ಉಳಿಸಿಕೊಂಡು ಅದರ ಅಭಿವೃದ್ಧಿ ಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಾರ್ಯ ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಒಕ್ಕೂಟದ ಪ್ರಮುಖರಾದ ಅಬ್ದುಲ್ ರಜಾಕ್ , ಆದಮ್, ಇಬ್ರಾಹಿಂ, ಉಸ್ಮಾನ್, ರಿಜ್ವಾನ್ , ಶಮಿ ಮತ್ತಿತರರು ಇದ್ದರು.