ಸಾರಾಂಶ
- ಅಚ್ಚುಕಟ್ಟು ರೈತರಿಗೆ ಅನ್ಯಾಯ ಮಾಡಬೇಡಿ: ರೇಣು, ಮಾಡಾಳ್, ನಾಗರಾಜ ಒತ್ತಾಯ
- - - ಕನ್ನಡಪ್ರಭ ವಾರ್ತೆ, ದಾವಣಗೆರೆ ಲಕ್ಕವಳ್ಳಿಯ ಭದ್ರಾ ಡ್ಯಾಂನಿಂದ ಅನಾವಶ್ಯಕವಾಗಿ 5 ಸಾವಿರ ಕ್ಯುಸೆಕ್ ನೀರು ನದಿ ಪಾಲಾಗುತ್ತಿದ್ದ ಹಿನ್ನೆಲೆ ಬಿಜೆಪಿಯ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಮುಖಂಡರಾದ ಮಾಡಾಳ್ ಮಲ್ಲಿಕಾರ್ಜುನ, ಲೋಕಿಕೆರೆ ನಾಗರಾಜ, ಧನಂಜಯ ಕಡ್ಲೇಬಾಳು, ಚಂದ್ರಶೇಖರ ಪೂಜಾರ ಇತರರ ನೇತೃತ್ವದಲ್ಲಿ ನೂರಾರು ರೈತರು ಭದ್ರಾ ಡ್ಯಾಂಗೆ ಖುದ್ದಾಗಿ ಭೇಟಿ ನೀಡಿ, ಪರಿಶೀಲಿಸಿದರು.ಭದ್ರಾ ಡ್ಯಾಂಗೆ ಭೇಟಿ ನೀಡಿದ್ದ ವೇಳೆ ಡ್ಯಾಂನಿಂದ ಸಾವಿರಾರು ಕ್ಯುಸೆಕ್ ನೀರು ನದಿಗೆ ಹರಿಯುತ್ತಿದ್ದು, ಇದರಿಂದ ಅಚ್ಚುಕಟ್ಟು ಪ್ರದೇಶದ ರೈತರು, ಜನರಿಗೆ ತೊಂದರೆಯಾಗಲಿದೆ. ಈ ಹಿನ್ನೆಲೆ ತ್ವರಿತವಾಗಿ ಡ್ಯಾಂನ ಗೇಟು ದುರಸ್ತಿಪಡಿಸುವ ಕೆಲಸ ಆಗಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.
ರೇಣುಕಾಚಾರ್ಯ ಮಾತನಾಡಿ, ತೀವ್ರ ಬರದ ಹಿನ್ನೆಲೆ ಕಳೆದ ವರ್ಷ ಪೂರ್ತಿ ರೈತರು ತೀವ್ರ ತೊಂದರೆ ಅನುಭವಿಸಿದರು. ಭದ್ರಾ ನೀರು ಆಶ್ರಿತ ನಗರ, ಪಟ್ಟಣ ಜನರು ನೀರಿಗಾಗಿ ಪರಿತಪಿಸಿದ್ದರು. ಮುಂಗಾರು ಮಳೆ ಕಳೆದೊಂದು ವಾರದಿಂದ ಉತ್ತಮವಾಗಿ ಆಗುತ್ತಿದೆ. ರೈತರ ಮೊಗದಲ್ಲಿ ಮಂದಹಾಸ ಮೂಡಿದ ಬೆನ್ನಲ್ಲೇ ಭದ್ರಾ ಡ್ಯಾಂನಿಂದ ನೀರು ಸೋರಿಕೆ ಆಗುತ್ತಿರುವುದು ಆತಂಕ ತಂದೊಡ್ಡಿದೆ ಎಂದರು.ಡ್ಯಾಂ ಗೇಟುಗಳ ದುರಸ್ತಿಪಡಿಸದ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ 5 ಸಾವಿರ ಕ್ಯುಸೆಕ್ ನೀರು ನದಿ ಪಾಲಾಗುತ್ತಿದೆ. ಇದರಿಂದ ರೈತರು ಬೆಳೆದ ಬೆಳೆಗಳಿಗೆ ನೀರು ಸಿಗದೇ ತೀವ್ರ ಅನ್ಯಾಯವಾಗುತ್ತಿದೆ. ಕಾಡಾ ಅಧಿಕಾರಿಗಳಿಗೆ ಐದಾರು ದಿನ ಹಿಂದೆಯೇ ವಿಚಾರ ತಿಳಿಸಿ, ದುರಸ್ತಿ ಕೈಗೊಳ್ಳುವಂತೆ ರೈತರು ಒತ್ತಾಯಿಸಿದರೂ ಸ್ಪಂದಿಸಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿ ಲಕ್ಕವಳ್ಳಿಯ ಭದ್ರಾ ಡ್ಯಾಂ ಬಳಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದ್ದೇವೆ ಎಂದು ಹೇಳಿದರು.
ಮಾಡಾಳ ಮಲ್ಲಿಕಾರ್ಜುನ ಮಾತನಾಡಿ, ಕಳೆದ ವರ್ಷದ ಬರದ ವೇಳೆ ನೀರಿನಲ್ಲದೇ ಪರಿಪಾಟಲು ಅನುಭವಿಸಿದ್ದ ರೈತರು, ಜನರ ಸಂಕಷ್ಟ ಅಧಿಕಾರಿಗಳ ಗಮನಕ್ಕೆ ಬರಲಿಲ್ಲವೇ? ಮುಂದಿನ ದಿನಗಳು, ಬೇಸಿಗೆ ದಿನಮಾನಗಳನ್ನೂ ಗಮನದಲ್ಲಿಟ್ಟುಕೊಂಡು, ಡ್ಯಾಂನ ಗೇಟ್ ದುರಸ್ಥಿಪಡಿಸಬೇಕಿತ್ತು. ಡ್ಯಾಂ ಗೇಟು ದುರಸ್ಥಿಪಡಿಸಲು ಸಹ ಕಾಂಗ್ರೆಸ್ ಸರ್ಕಾರದ ಬಳಿ ಹಣವಿಲ್ಲ. ಡ್ಯಾಂ ದುರಸ್ತಿ ಕಾರ್ಯವು ಶಾಶ್ವತವಾಗಿ ಪರಿಹಾರ ಕಾಣಬೇಕು ಎಂದು ಆಗ್ರಹಿಸಿದರು.ಬಿಜೆಪಿ ಮುಖಂಡರು ರೈತರು ಇದ್ದರು.
- - - -8ಕೆಡಿವಿಜಿ12, 13:ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಸೇರಿದಂತೆ ದಾವಣಗೆರೆ ಜಿಲ್ಲೆ ಬಿಜೆಪಿ ಪ್ರಮುಖರಾದ ಮಾಡಾಳ್ ವಿರೂಪಾಕ್ಷಪ್ಪ, ಲೋಕಿಕೆರೆ ನಾಗರಾಜ ನೇತೃತ್ವದಲ್ಲಿ ರೈತರು ಲಕ್ಕವಳ್ಳಿಯ ಭದ್ರಾ ಡ್ಯಾಂಗೆ ತೆರಳಿ, ಡ್ಯಾಂ ಗೇಟ್ ದುರಸ್ತಿಗೆ ಒತ್ತಾಯಿಸಿ ಪ್ರತಿಭಟಿಸಿದರು.