ಕಾಲ ಮಿತಿಯೊಳಗೆ ಜನರ ಸಮಸ್ಯೆ ಪರಿಹರಿಸಿ

| Published : Jul 09 2024, 12:49 AM IST

ಸಾರಾಂಶ

ಪಿಂಚಣಿಗೆ ಸಂಬಂಧ ಪಟ್ಟ ಅರ್ಜಿಯನ್ನು ಸ್ಥಳದಲ್ಲೇ ವಿಲೇವಾರಿ ಮಾಡಲಾಗಿದೆ. ಬಾಕಿ ಅರ್ಜಿಗಳನ್ನು ಇಲಾಖೆಗಳಿಗೆ ವರ್ಗಾಯಿಸಿ ಕಾಲ ಮಿತಿಯೊಳಗೆ ಇತ್ಯರ್ಥಪಡಿಸಲು ಅಧಿಕಾರಿಗಳು ಶಾಸಕ ಸೂಚನೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ವಿವಿಧ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಕಾಲಮಿತಿಯೊಳಗೆ ಪರಿಹರಿಸಲು ಸೂಚನೆ ನೀಡಲಾಗಿದೆ ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು.ನಗರದ ತಾಲ್ಲೂಕು ಕಚೇರಿಯ ಶಾಸಕರ ಕಚೇರಿ ಮುಂಭಾಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ತಾಲ್ಲೂಕಿನ ಜನರ ಅಹವಾಲು ಪರಿಹರಿಸುವ ತಾಲ್ಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಅಧಿಕಾರಿಗಳ ಜವಾಬ್ದಾರಿ

ಇಂದು ಬೆಳಗ್ಗೆ ನಮಸ್ತೆ ಚಿಕ್ಕಬಳ್ಳಾಪುರ ಮತ್ತು ಜನಸ್ಪಂದನ ಕಾರ್ಯಕ್ರಮದಲ್ಲಿ ಸುಮಾರು 250 ಅರ್ಜಿಗಳು ಬಂದಿವೆ. ಈ ಅರ್ಜಿಗಳನ್ನು ಆದಷ್ಟು ಬೇಗ ಬಗೆಹರಿಸುವ ಮೂಲಕ ವಿಲೇವಾರಿ ಮಾಡಬೇಕು. ಕಾನೂನು ತೊಡಕು ಇರುವ ಅರ್ಜಿಗಳನ್ನು ಹೊರತುಪಡಿಸಿ ಉಳಿದ ಅರ್ಜಿಗಳನ್ನು ಅಧಿಕಾರಿಗಳು ತಮ್ಮ ಜವಾಬ್ದಾರಿ ಅರಿತು ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಿದಾಗ ಮಾತ್ರ ಜನರು ಸಮಸ್ಯೆಗಳಿಂದ ಮುಕ್ತರಾಗಲು ಸಾಧ್ಯ ಎಂದು ಹೇಳಿದರು.ಪಿಂಚಣಿಗೆ ಸಂಬಂಧ ಪಟ್ಟ ಅರ್ಜಿಯನ್ನು ಸ್ಥಳದಲ್ಲೇ ವಿಲೇವಾರಿ ಮಾಡಲಾಗಿದೆ. ಬಾಕಿ ಅರ್ಜಿಗಳನ್ನು ಇಲಾಖೆಗಳಿಗೆ ವರ್ಗಾಯಿಸಿ ಕಾಲ ಮಿತಿಯೊಳಗೆ ಇತ್ಯರ್ಥಪಡಿಸಲು ಸೂಚನೆಗಳನ್ನು ನೀಡಿದ್ದೇನೆ ಎಂದರು.ಮಳೆ ಹಾನಿ ತಡೆಗೆ ಕ್ರಮ

ಮಳೆಗಾಲ ಪ್ರಾರಂಭವಾಗಿದ್ದು,ಮಳೆಯಿಂದಾಗುವ ಹಾನಿಯನ್ನು ಹಾಗೂ ಪ್ರಸ್ತುತ ಕ್ಷೇತ್ರದಲ್ಲಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಜೊತೆ ಜೊತೆಗೆ ನಿವಾರಿಸಲು, ರಾಜಕಾಲುವೆ, ಸರ್ಕಾರಿ ಜಾಗಗಳ ಒತ್ತುವರಿಯಾರೇ ಮಾಡಿದ್ದರೂ ಯಾವುದೇ ಮುಲಾಜಿಲ್ಲದೇ ತೆರವಿಗೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆಗಳನ್ನು ನೀಡಿರುವುದಾಗಿ ತಿಳಿಸಿದರು.ಸ್ಮಶಾನಕ್ಕೆ ಜಾಗದ ಕೊರತೆ

ಹಾಗೇಯೇ ಕೆಲ ಗ್ರಾಮಗಳಲ್ಲಿ ಸ್ಮಶಾನಗಳಿಗೆ ಜಾಗದ ಕೊರತೆಯಿದ್ದು, ಅಂತಹ ಕಡೆಗಳಲ್ಲಿ ಸರ್ಕಾರಿ ಭೂಮಿ ಅಥವಾ ಖಾಸಗಿ ಜಾಗ ಖರೀದಿಸಿ ಸ್ಮಶಾನಗಳಿಗೆ ನೀಡುವ ಕುರಿತು ಸಹಾ ಅಧಿಕಾರಿಗಳೊಂದಿಗೆ ಚರ್ಚಿಸಿರುವುದಾಗಿ ತಿಳಿಸಿದರು.ಜನತಾ ದರ್ಶನದಲ್ಲಿ ಅಪರ ಜಿಲ್ಲಾಧಿಕಾರಿ ಎನ್. ಭಾಸ್ಕರ್, ಉಪವಿಭಾಗಾಧಿಕಾರಿ ಡಿ.ಹೆಚ್.ಅಶ್ವಿನ್, ತಹಶೀಲ್ದಾರ್ ಅನಿಲ್, ತಾಪಂ ಇಒ ಮಂಜುನಾಥ್, ನಗರಸಭೆ ಉಸ್ತುವಾರಿ ಪೌರಾಯುಕ್ತ ಹಾಗೂ ಪರಿಸರ ಅಭಿಯಂತರ ಉಮಾಶಂಕರ್, ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.