ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 10 ಕಾರ್ಮಿಕರನ್ನು ವಜಾಗೊಳಿಸಿರುವ ಕ್ರಮ ಖಂಡಿಸಿ ಸಿಐಟಿಯು ಸಂಘಟನೆಯ ಪದಾಧಿಕಾರಿಗಳು ಸೋಂಪುರ ಕೈಗಾರಿಕಾ ಪ್ರದೇಶದಲ್ಲಿರುವ ಎಕೆಇ ಇನ್ಪ್ರಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ಕಂಪನಿ ಮುಂದೆ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ

ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 10 ಕಾರ್ಮಿಕರನ್ನು ವಜಾಗೊಳಿಸಿರುವ ಕ್ರಮ ಖಂಡಿಸಿ ಸಿಐಟಿಯು ಸಂಘಟನೆಯ ಪದಾಧಿಕಾರಿಗಳು ಸೋಂಪುರ ಕೈಗಾರಿಕಾ ಪ್ರದೇಶದಲ್ಲಿರುವ ಎಕೆಇ ಇನ್ಪ್ರಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ಕಂಪನಿ ಮುಂದೆ ಪ್ರತಿಭಟನೆ ನಡೆಸಿದರು.

ಸಿಐಟಿಯು ದಾಬಸ್‍ಪೇಟೆ ವಲಯ ಸಮಿತಿ ಅಧ್ಯಕ್ಷ ಬಸವರಾಜು ಮಾತನಾಡಿ, ಈ ಕಂಪನಿ ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕಳೆದ 18 ವರ್ಷಗಳಿಂದ ಕಾಯಂ ನೌಕರರಾಗಿ ಕೆಲಸ ಮಾಡುತ್ತಿದ್ದ 10 ಕಾರ್ಮಿಕರನ್ನು ಏಕಾಏಕಿ ವಜಾಗೊಳಿಸಿ ಕಂಪನಿ ಮುಚ್ಚಲಾಗಿದೆ. ಕೆಲಸದಿಂದ ವಜಾಗೊಂಡಿರುವ ಕಾರ್ಮಿಕರನ್ನು ಇದೇ ಕಂಪನಿ ಸೋಂಪುರ ಕೈಗಾರಿಕಾ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂಪನಿಗೆ ಕೆಲಸಕ್ಕೆ ನೇಮಿಸಿಕೊಳ್ಳಬೇಕು. ಈ ಬಗ್ಗೆ ಕಂಪನಿಯ ಆಡಳಿತ ಮಂಡಳಿ ತುರ್ತು ಸಭೆ ಸೇರಿ ಒತ್ತಾಯಿಸಿದರು.

ಸಿಐಟಿಯು ಜಿಲ್ಲಾಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ, ಕಳೆದ 18 ವರ್ಷ ಸತತವಾಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸಿದ್ದಾರೆ. ಇದೀಗ ಕಾರ್ಮಿಕರ ಕುಟುಂಬಗಳು ಬೀದಿ ಪಾಲಾಗಿವೆ. ಯಾವುದೇ ಭದ್ರತೆಯಿಲ್ಲದೇ ಕಾರ್ಮಿಕರನ್ನು ದುಡಿಸಿಕೊಂಡಿರುವ ಕಂಪನಿ ಕೆಲಸದಿಂದ ವಜಾಗೊಳಿಸಿ ದ್ರೋಹ ಮಾಡಿದೆ. ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಕೆಲಸಕ್ಕೆ ಮರಳಿ ಪಡೆದು ಕಾರ್ಮಿಕರಿಗೆ ಸೂಕ್ತ ಭದ್ರತೆ ಒದಗಿಸಬೇಕು. ಜತೆಗೆ ನೌಕರರಿಗೆ ಸಿಗುವ ಪಿಎಫ್ ಹಾಗೂ ಇತರ ಸೌಲಭ್ಯಗಳನ್ನು ಒದಗಿಸಬೇಕೆಂದು ಒತ್ತಾಯಿಸಿದರು.

ಕಾರ್ಮಿಕ ವೆಂಕಟೇಶ್ ಪ್ರತಿಕ್ರಿಯಿಸಿ, ನಾವು ಸೋಂಪುರ ಕೈಗಾರಿಕಾ ಪ್ರದೇಶದಲ್ಲಿರುವ ಕಂಪನಿಗೆ ಸೇರಿರುವ ಶಾಖೆಯಲ್ಲಿ ಕೆಲಸ ಮಾಡಲು ಸಿದ್ದರಿದ್ದೇವೆ. ಕಂಪನಿ ಆಡಳಿತ ಮಂಡಳಿ ಕಂಪನಿಗೆ ನಷ್ಟವಾಗಿದೆ ಎಂದು ಸುಳ್ಳು ಹೇಳಿ ಮತ್ತೊಂದು ಶಾಖೆಯನ್ನು ತೆರೆದು ಕಾರ್ಮಿಕರಿಗೆ ಮೋಸ ಮಾಡುತ್ತಿದೆ. ತಕ್ಷಣ ವಜಾಗೊಂಡ ಕಾರ್ಮಿಕರನ್ನು ಮರು ನೇಮಕ ಮಾಡಿಕೊಳ್ಳದಿದ್ದರೆ ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕ ಕುಟುಂಬಗಳು ಬೀದಿಗಿಳಿದು ಹೋರಾಡುತ್ತೇವೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ್.ಪಿ.ಎ, ತಾಲೂಕು ಸಮಿತಿ ಪ್ರಧಾನ ಕಾರ್ಯದರ್ಶಿ ಅಂಜುಂ ಖಾನಂ, ಜಿಲ್ಲಾ ಕಾರ್ಯದರ್ಶಿ ವೆಂಕಟೇಶ್ ಪಿ.ಕೆ, ಬಯೋಜಿನ್ ಕಾರ್ಮಿಕ ಸಂಘಟನೆಯ ಕಾರ್ಯದರ್ಶಿ ರವಿಕುಮಾರ್ ಇತರರುರು ಉಪಸ್ಥಿತರಿದ್ದರು.