ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರ 2025- 26ನೇ ಸಾಲಿನ ಬಿಕ್ಕಟ್ಟನ್ನು ಸರ್ಕಾರದ ಹಂತದಲ್ಲೇ ಪರಿಹರಿಸಿ, ಯುಜಿಸಿ, ನಾನ್- ಯುಜಿಸಿ ಎಂಬ ತಾರತಮ್ಯ ಮಾಡದೇ ನಿರ್ಣಯ ಕೈಗೊಳ್ಳುವಂತೆ ಆಗ್ರಹಿಸಿ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿಯವರು ಜಿಲ್ಲಾಧಿಕಾರಿ ಕಚೇರಿ ಬಳಿ ಸೋಮವಾರ ಪ್ರತಿಭಟಿಸಿದರು.ರಾಜ್ಯದ 432 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹತ್ತಾರು ವರ್ಷಗಳಿಂದ 18 ಸಾವಿರ ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದಾರೆ. ಇದರಲ್ಲಿ 5623 ಅತಿಥಿ ಉಪನ್ಯಾಸಕರು ಯುಜಿಸಿ ಅರ್ಹತೆ ಪಡೆದವರಿದ್ದು, ಉಳಿದ 5353 ಅತಿಥಿ ಉಪನ್ಯಾಸಕರು ನಾನ್-ಯುಜಿಸಿಗಳಾಗಿದ್ದಾರೆ. ಸಾವಿರಾರು ಅತಿಥಿ ಉಪನ್ಯಾಸಕರು ಎಂ.ಫಿಲ್ ಪದವಿ ಪಡೆದಿದ್ದಾರೆ. ಇವರೆಲ್ಲರೂ ಹತ್ತಾರೂ ವರ್ಷಗಳ ಕಾಲ ಬೋಧನಾ ಅನುಭವ, ಬೋಧನಾ ಕೌಶಲ್ಯ ಹೊಂದಿ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ ಎಂದರು.
ಯುಜಿಸಿ ಅರ್ಹತೆ ಪಡೆದಿಲ್ಲ ಎಂಬ ಕಾರಣದಿಂದ ಶೈಕ್ಷಣಿಕ ಗುಣಮಟ್ಟ ಕುಸಿದಿಲ್ಲ. ಇದುವರೆಗೂ ಯುಜಿಸಿ ನಿಯಮಾವಳಿಗಳಲ್ಲಿ ಸೂಚಿಸಿರುವಂತೆ ಕಾಯಂ ಅಧ್ಯಾಪಕರಿಗೆ ನೀಡಿರುವ ಯಾವುದೇ ರೀತಿಯ ಸವಲತ್ತುಗಳನ್ನು ಪಡೆಯದೇ ತಾತ್ಕಾಲಿಕ ನೌಕರರಾಗಿಯೇ, ಕನಿಷ್ಠ ಗೌರವಧನ ಪಡೆದು ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿದ್ದರೂ ಸೂಕ್ತ ಸೌಲಭ್ಯ ನೀಡುತ್ತಿಲ್ಲ ಎಂದು ಅವರು ಆರೋಪಿಸಿದರು.ರಾಜ್ಯದ ಶೇ.70 ರಷ್ಟು ಸರ್ಕಾರಿ ಪದವಿ ಕಾಲೇಜುಗಳು ಅತಿಥಿ ಉಪನ್ಯಾಸಕರ ಸೇವೆ ಅವಲಂಭಿಸಿವೆ. ಕಳೆದ ಒಂದು ತಿಂಗಳಿಂದ ಸರಿಯಾಗಿ ವಿದ್ಯಾರ್ಥಿಗಳಿಗೆ ಪಾಠ ಪ್ರವಚನಗಳು ನಡೆಯುತ್ತಿಲ್ಲ. ಜೊತೆಗೆ ಇದೇ ವೃತ್ತಿಯನ್ನು ನಂಬಿ ದಶಕಗಳಿಂದ ಪಾಠ ಪ್ರವಚನ ಮಾಡುತ್ತಾ ಬಂದಿರುವ ಅತಿಥಿ ಉಪನ್ಯಾಸಕರ ಬದುಕು ಈಗ ಆತಂತ್ರವಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಹತ್ತಾರು ವರ್ಷಗಳಿಂದ ನಿರಂತರ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಸೇವಾ ಹಿರಿತನ ಆಧಾರದಲ್ಲಿ ಪರಿಗಣಿಸಬೇಕು. ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಯುಜಿಸಿ, ನಾನ್-ಯುಜಿಸಿ ಎಂಬ ತಾರತಮ್ಯ ಮಾಡದೆ ಸರ್ಕಾರದ ಹಂತದಲ್ಲೇ ಮಾನವೀಯ ದೃಷ್ಠಿಯಿಂದ ತೀರ್ಮಾನ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.ಸಮಿತಿಯ ರಾಜ್ಯಾಧ್ಯಕ್ಷ ಡಾ. ಸೋಮಶೇಖರ್ ಎಚ್. ಶಿಮೊಗ್ಗಿ, ಪದಾಧಿಕಾರಿಗಳಾದ ರಾಜೇಶ್ ಕುಮಾರ್, ನಾಗರಾಜು, ರವೀಂದ್ರ, ಶಾಮಲಾ, ದೀಪಾ, ರೈತ ಸಂಘದ ಹೊಸಕೋಟೆ ಬಸವರಾಜು, ಪಿ. ಮರಂಕಯ್ಯ ಮೊದಲಾದವರು ಇದ್ದರು.