ಕೊಪ್ಪಳದಲ್ಲಿ ವಿಷದ ಬಾಟಲಿ ಹಿಡಿದು ಗುತ್ತಿಗೆದಾರರ ಪ್ರತಿಭಟನೆ

| Published : Jan 19 2024, 01:49 AM IST

ಸಾರಾಂಶ

ಐದು ವರ್ಷಗಳಲ್ಲಿ ₹35 ಕೋಟಿ ಬಾಕಿ ಇದೆ. ಇಷ್ಟೊಂದು ಹಣವನ್ನು ಪಾವತಿ ಮಾಡುವಂತೆ ಎಷ್ಟೇ ಮನವಿ ಸಲ್ಲಿಸಿದರು ಪಾವತಿ ಮಾಡುತ್ತಿಲ್ಲ. ಹಿಂಗಾದರೇ ನಾವು ಜೀವನ ನಡೆಸುವುದು ಹೇಗೆ, ಸಾಮಗ್ರಿಗಾಗಿ ಮಾಡಿದ ಸಾಲವನ್ನು ತೀರಿಸುವುದು ಹೇಗೆ, ಈಗ ವಿಧಿಯಿಲ್ಲದೆ ವಿಷದ ಬಾಟಲಿಯೊಂದಿಗೆ ಬಂದಿದ್ದೇವೆ.

ಕೊಪ್ಪಳ: ಕಾಮಗಾರಿ ಪೂರ್ಣಗೊಳಿಸಿ ಐದು ವರ್ಷವಾದರೂ ಸಾಮಗ್ರಿ ಪೂರೈಕೆ ಮಾಡಿದ ಬಿಲ್ ಪಾವತಿಯಾಗಿಲ್ಲ. ಸಾಲದ ಸುಳಿಯಲ್ಲಿ ಸಿಲುಕಿದ್ದೇವೆ. ಬಿಲ್ ಪಾವತಿ ಮಾಡಿ, ಇಲ್ಲದಿದ್ದರೆ ನಾವು ಇಲ್ಲಿಯೇ ವಿಷ ಸೇವಿಸಿ, ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಕುಷ್ಟಗಿ ತಾಲೂಕು ಸರಬರಾಜು ಗುತ್ತಿಗೆದಾರರು ಕೊಪ್ಪಳ ಜಿಪಂ ಸಿಇಒ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ಪ್ರಮುಖರಾದ ಶುಖಮುನಿ ಈಳಿಗೇರ ಮಾತನಾಡಿ, ನಮ್ಮ ತಾಳ್ಮೆಗೂ ಮಿತಿ ಇದೆ. ಕಾಮಗಾರಿ ಮಾಡಿದ್ದಲ್ಲದೇ ಕಾಮಗಾರಿಗಾಗಿ ಸಾಮಗ್ರಿ ಪೂರೈಕೆ ಮಾಡಲಾಗಿದೆ. ಆದರೂ ಇದುವರೆಗೂ ಬಿಲ್ ಪಾವತಿ ಮಾಡಿಲ್ಲ. ಕಾಮಗಾರಿ ಕಳೆಪೆಯಾಗಿರುವ ಕುರಿತು ತನಿಖೆಯೂ ನಡೆದಿದೆ. ಆದರೂ ಬಿಲ್ ಪಾವತಿ ಮಾಡಲು ವಿಳಂಬ ಮಾಡುತ್ತಿರುವುದು ಏಕೆ ಎಂದು ಪ್ರಶ್ನಿಸಿ, ಆಕ್ರೋಶ ವ್ಯಕ್ತಪಡಿಸಿದರು.ಐದು ವರ್ಷಗಳಲ್ಲಿ ₹35 ಕೋಟಿ ಬಾಕಿ ಇದೆ. ಇಷ್ಟೊಂದು ಹಣವನ್ನು ಪಾವತಿ ಮಾಡುವಂತೆ ಎಷ್ಟೇ ಮನವಿ ಸಲ್ಲಿಸಿದರು ಪಾವತಿ ಮಾಡುತ್ತಿಲ್ಲ. ಹಿಂಗಾದರೇ ನಾವು ಜೀವನ ನಡೆಸುವುದು ಹೇಗೆ, ಸಾಮಗ್ರಿಗಾಗಿ ಮಾಡಿದ ಸಾಲವನ್ನು ತೀರಿಸುವುದು ಹೇಗೆ, ಈಗ ವಿಧಿಯಿಲ್ಲದೆ ವಿಷದ ಬಾಟಲಿಯೊಂದಿಗೆ ಬಂದಿದ್ದೇವೆ. ಬಿಲ್ ಪಾವತಿ ಮಾಡಿ, ಇಲ್ಲದಿದ್ದರೇ ನಾವು ವಿಷ ಸೇವಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಜಿಪಂ ಸಿಇಒ ರಾಹುಲ್ ರತ್ಮಂ ಪಾಂಡೆ, ಭರವಸೆ ನೀಡುವ ಪ್ರಯತ್ನ ಮಾಡಿದರೂ ಸರಬರಾಜುದಾರರು ಪಟ್ಟುಬಿಡದೆ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಪ್ರಮುಖರಾದ ಹನುಮಂತ ಹಿರೇಮನಿ, ಮಹಾಂತೇಶ ಮೇಟಿ, ಅಜೀಜ್ ಕಣ್ಣೂರ, ಪರಸಪ್ಪ ಚೌಡ್ಕಿ ಸೇರಿದಂತೆ ಮತ್ತಿತರರಿದ್ದರು.