ಕನ್ನಡಪ್ರಭ ವಾರ್ತೆ ಮಂಡ್ಯ

ಸಂಸತ್ತಿನಲ್ಲಿ ಮಂಡನೆಯಾದ ಮಹಿಳಾ ಮೀಸಲು ಮಸೂದೆಗೆ ಇಂಡಿಯಾ ಒಕ್ಕೂಟ ವಿರೋಧ ವ್ಯಕ್ತಪಡಿಸಿರುವುದನ್ನು ಖಂಡಿಸಿ ಮಂಡ್ಯದಲ್ಲಿ ಜಿಲ್ಲಾ ಜೆಡಿಎಸ್ ಮಹಿಳಾ ಘಟಕದ ಕಾರ್ಯಕರ್ತರು ಭಾನುವಾರ ಪ್ರತಿಭಟನೆ ನೆಡೆಸಿದರು.

ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜೆಡಿಎಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮಂಜುಳಾ ಉದಯಶಂಕರ್ ನೇತೃತ್ವದಲ್ಲಿ ಸೇರಿದ ಮಹಿಳಾ ಕಾರ್ಯಕರ್ತರು ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಜೆಡಿಎಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮಂಜುಳಾ, ೧೯೯೬ರಲ್ಲಿ ಎಚ್.ಡಿ.ದೇವೇಗೌಡರ ನೇತೃತ್ವದ ಸಂಯುಕ್ತ ರಂಗ ಸರ್ಕಾರವು ಮಹಿಳೆಯರಿಗೆ ಶೇ.೩೩ರಷ್ಟು ಮೀಸಲಾತಿ ನೀಡಲು ಕ್ರಾಂತಿಕಾರಿ ಮಸೂದೆ ಮಂಡಿಸಿತ್ತು. ಆದರೆ, ಅಂದು ಕಾಂಗ್ರೆಸ್ ಮತ್ತು ಅದರ ಸಹಚರರು ಸಂಘಟಿತವಾಗಿ ಆ ಪ್ರಯತ್ನವನ್ನು ವಿಫಲಗೊಳಿಸಿದ್ದರು. ಈ ಅನ್ಯಾಯವನ್ನು ಸರಿಪಡಿಸಲು ಪ್ರಧಾನಿ ನರೇಂದ್ರ ಮೋದಿ ಅವರು ದಿಟ್ಟ ಹೆಜ್ಜೆ ಇರಿಸಿದ್ದರು. ಆದರೆ, ಈಗಲೂ ಕಾಂಗ್ರೆಸ್ ಮತ್ತು ಇಂಡಿಯಾ ಮೈತ್ರಿಕೂಟದ ಪಕ್ಷಗಳು ಮಸೂದೆಗೆ ತಡೆಯೊಡ್ಡಿವೆ ಎಂದು ಕಿಡಿಕಾರಿದರು.

ಕಾಂಗ್ರೆಸ್‌ನವರು ಮಹಿಳಾ ವಿರೋಧಿಗಳು. ಹೆಣ್ಣು ಮಕ್ಕಳು ರಾಜಕೀಯಕ್ಕೆ ಬಾರದಂತೆ ತಡೆಯುತ್ತಿದ್ದಾರೆ. ಕೇವಲ ಒಂದು ಕುಟುಂಬದ ಮಹಿಳೆಯರು ಅಧಿಕಾರದಲ್ಲಿರಬೇಕೆಂಬ ದುರಾಸೆ ಅವರದ್ದು. ಮಹಿಳಾ ಮೀಸಲಾತಿಗೆ ಅಡ್ಡಗಾಲಾಗಿರುವ ಕಾಂಗ್ರೆಸ್ ವಿರುದ್ಧ ರಾಜ್ಯದಾದ್ಯಂತ ಹೋರಾಟ ನಡೆಸಲಾಗುವುದು ಎಂದರು.


ಮೋದಿ ದಿಟ್ಟ ನಿರ್ಧಾರಗಳೊಂದಿಗೆ ನಾರಿಶಕ್ತಿಗೆ ನ್ಯಾಯ ದೊರಕಿಸುವ ದಿಸೆಯಲ್ಲಿ ಶೇ.೩೩ರಷ್ಟು ಮಹಿಳಾ ಮೀಸಲಾತಿ ಅನುಷ್ಠಾನಕ್ಕೆ ತರಲು ಮುಂದಾಗಿದ್ದರು. ದೇಶದ ಮಹಿಳೆಯರು ಖುಷಿಯಲ್ಲಿದ್ದರು. ಕಾಂಗ್ರೆಸ್ ಪಕ್ಷದ ಮಹಿಳಾ ವಿರೋಧಿ ನೀತಿಗೆ ಇದು ಸಾಕ್ಷಿಯಾಗಿದೆ. ಕಾಂಗ್ರೆಸ್ ಮುಖಂಡರು ಈ ಮಸೂದೆಯನ್ನು ವಿರೋಧಿಸಿ ಜಯ ಸಾಧಿಸಿರುವುದಾಗಿ ಭಾವಿಸು ತ್ತಿದ್ದರೂ, ಮುಂದಿನ ದಿನಗಳಲ್ಲಿ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದರು.

ಪ್ರತಿಭಟನೆಯಲ್ಲಿ ಜೆಡಿಎಸ್ ಮಹಿಳಾ ಮುಖಂಡರಾದ ವತ್ಸಲಾ ಪ್ರಕಾಶ್, ಜಯಶೀಲಮ್ಮ, ಪ್ರೇಮ, ರಾಧಾಮಣಿ, ಸುಮತಿ, ಗಾಯಿತ್ರಿ, ಲೀಲಾವತಿ, ಮಂಜುಳಾ, ಅನೇಕ ಮಹಿಳೆಯರು ಪಾಲ್ಗೊಂಡಿದ್ದರು