ಬೇಲೂರಲ್ಲಿ ಚೆಸ್ಕಾಂ ಕಚೇರಿ ಮುಂದೆ ಕಳ್ಳೇರಿ ಗ್ರಾಮಸ್ಥರ ಧರಣಿ

| Published : Mar 30 2024, 12:50 AM IST

ಸಾರಾಂಶ

ವಿದ್ಯುತ್ ಪರಿವರ್ತಕ ಕೆಟ್ಟು ಹೋಗಿರುವುದರಿಂದ ಕುಡಿಯುವ ನೀರಿಗೆ ತೊಂದರೆಯಾಗಿದೆ ಎಂದು ಆರೋಪಿಸಿ ಬೇಲೂರಿನ ಕಳ್ಳೇರಿ ಗ್ರಾಮಸ್ಥರು ಪಟ್ಟಣದ ಚೆಸ್ಕಾಂ ಕಚೇರಿ ಮುಂಭಾಗದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಟ್ರಾನ್ಸ್‌ಫಾರ್ಮರ್ ಕೆಟ್ಟು ಕುಡಿಯುವ ನೀರಿಗೆ ತೊಂದರೆ ಆರೋಪ

ಬೇಲೂರು: ವಿದ್ಯುತ್ ಪರಿವರ್ತಕ ಕೆಟ್ಟು ಹೋಗಿರುವುದರಿಂದ ಕುಡಿಯುವ ನೀರಿಗೆ ತೊಂದರೆಯಾಗಿದೆ ಎಂದು ಆರೋಪಿಸಿ ಕಳ್ಳೇರಿ ಗ್ರಾಮಸ್ಥರು ಪಟ್ಟಣದ ಚೆಸ್ಕಾಂ ಕಚೇರಿ ಮುಂಭಾಗದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಕಳ್ಳೇರಿ ಗ್ರಾಮಪಂಚಾಯತಿ ಅಧ್ಯಕ್ಷ ಅಬ್ದುಲ್ ಹಕೀಂ ಮಾತನಾಡಿ, ಚೆಸ್ಕಾಂ ಅಧಿಕಾರಿಗಳಿಗೆ ಹಾಗೂ ಸಂಬಂಧಪಟ್ಟವರ ವಿರುದ್ಧ ಧಿಕ್ಕಾರ ಕೂಗಿ ಸುಮಾರು ೧ ತಿಂಗಳಿಂದ ಗ್ರಾಮ ಪಂಚಾಯತಿ ವ್ಯಾಪ್ತಿಯ ೬ ಗ್ರಾಮಗಳಲ್ಲಿ ವಿದ್ಯುತ್ ಇಲ್ಲದೆ ಹಾಗೂ ವಿದ್ಯುತ್ ಪರಿವರ್ತಕ ಕೆಟ್ಟು ಹೊಗಿದ್ದರಿಂದ ಕುಡಿಯುವ ನೀರಿಗೆ ಮತ್ತು ಇನ್ನಿತರ ಕೆಲಸ ಕಾರ್ಯಗಳಿಗೆ ತೀವ್ರ ತೊಂದರೆಯಾಗಿದೆ. ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಲಿಖಿತವಾಗಿ ದೂರು ನೀಡಿದರೂ ಇದರ ಬಗ್ಗೆ ಗಮನ ಹರಿಸುತ್ತಿಲ್ಲ. ಇನ್ನೆರಡು ದಿನದಲ್ಲಿ ವಿದ್ಯುತ್ ಪರಿವರ್ತಕ ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಪ್ರೇಮಕುಮಾರ್ ಮಾತನಾಡಿ, ‘ನಮ್ಮ ಭಾಗದಲ್ಲಿ ಕೂಲಿ ಕಾರ್ಮಿಕರೆ ಹೆಚ್ಚಾಗಿದ್ದು ವಿದ್ಯುತ್ ಇಲ್ಲದೆ ಪರದಾಡುವಂತಾಗಿದೆ. ಬಳಗುಪ್ಪೆ ಗೋರಿಮಠ ಕಳ್ಳೇರಿ ಗ್ರಾಮಗಳಲ್ಲಿ ವಿದ್ಯುತ್ ಪರಿವರ್ತಕ ಹಾಳಾಗಿ ತಿಂಗಳು ಕಳೆದರೂ ಅದರ ಬಗ್ಗೆ ಗಮನ ಹರಿಸುತ್ತಿಲ್ಲ. ಸಮಸ್ಯೆಗಳನ್ನು ಬಗೆಹರಿಸಿ ಎಂದು ಕೇಳಲು ಹೋದರೆ ಹಣದ ಬೇಡಿಕೆ ಇಡುತ್ತಾರೆ’ ಎಂದು ದೂರಿದರು.

ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದರೂ ಪ್ರಯೋಜನವಾಗುತ್ತಿಲ್ಲ. ಕೂಡಲೇ ಇವರನ್ನು ಬೇರೆಡೆ ವರ್ಗಾಯಿಸಿ, ವಿದ್ಯುತ್ ಪರಿವರ್ತಕ ಇನ್ನೆರಡು ದಿನಗಳಲ್ಲಿ ಸರಿಮಾಡದಿದ್ದರೆ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿ ನಂತರ ಸುತ್ತಮುತ್ತಲಿನ ೫ ಗ್ರಾಮಸ್ಥರು ಖಾಲಿ ಕೊಡಗಳನ್ನು ತಂದು ಕೆಇಬಿ ಮುಂಭಾಗದಲ್ಲಿ ಪ್ರತಿಭಟನೆ ಮಾಡಲಾಗುತ್ತದೆ ಎಂದರು.

ಗ್ರಾಮಸ್ಥರಾದ ಅಜ್ಗರ್ ಆಲಿ, ಕೇಶವಮೂರ್ತಿ, ನಿತಿನ್ ಕುಮಾರ್, ಮಂಜುನಾಥ್, ನಿಜಾಮ್ ಹುದ್ದೀನ್, ಗೌಸ, ರಜಾಕ್, ಬಷೀರ್, ರಾಮೇಗೌಡ ಹಾಜರಿದ್ದರು.ಕಳ್ಳೇರಿ ಗ್ರಾಮಸ್ಥರು ಬೇಲೂರು ಪಟ್ಟಣದ ಕೆಇಬಿ ಇಲಾಖೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.