ಕಾರವಾರ: ಗುಳ್ಳಾಪುರದ ಲಾರಿ ಪಲ್ಟಿ ದುರಂತದಲ್ಲಿ ಬದುಕುಳಿದ ತರಕಾರಿ ಮಾರಾಟಗಾರರ ಆಕ್ರಂದನ

| Published : Jan 23 2025, 12:49 AM IST / Updated: Jan 23 2025, 05:12 AM IST

ಕಾರವಾರ: ಗುಳ್ಳಾಪುರದ ಲಾರಿ ಪಲ್ಟಿ ದುರಂತದಲ್ಲಿ ಬದುಕುಳಿದ ತರಕಾರಿ ಮಾರಾಟಗಾರರ ಆಕ್ರಂದನ
Share this Article
  • FB
  • TW
  • Linkdin
  • Email

ಸಾರಾಂಶ

ಶಿರೂರು ಗುಡ್ಡ ಕುಸಿತ ದುರಂತ ಮಾಸುವ ಮುನ್ನ ಜಿಲ್ಲೆ ಮತ್ತೊಂದು ದೊಡ್ಡ ದುರಂತವನ್ನು ನೋಡುವಂತಾಯಿತು.

ವಸಂತಕುಮಾರ್ ಕತಗಾಲ 

ಕಾರವಾರ: ಲಾರಿಯಲ್ಲಿದ್ದ ತರಕಾರಿ, ಹಣ್ಣುಗಳ ಮೂಟೆಯ ನಡುವೆ ಮಲಗಿ ನಸುಕಿನ ನಿದ್ದೆಯ ಮಂಪರಿನಲ್ಲಿದ್ದ ಅವರಿಗೆ ದೊಡ್ಡ ಸದ್ದಿನ ಜತೆ ಲಾರಿ ಮುಗ್ಗರಿಸುತ್ತಿದ್ದಂತೆ ಎಚ್ಚರವಾಗಿ ಹೋ ಎಂದು ಅರಚುತ್ತಿರುವಾಗಲೆ ಲಾರಿ ಬುಡಮೇಲಾಯಿತು.

ತರಕಾರಿ ಮೂಟೆಗಳ ಅಡಿಯಲ್ಲಿ ಸಿಲುಕಿದರು. ಕೆಲವರು ನಜ್ಜುಗುಜ್ಜಾಗಿ ಅಲ್ಲೇ ಉಸಿರು ನಿಲ್ಲಿಸಿದರು.ಹಾವೇರಿ ಜಿಲ್ಲೆಯ ಸವಣೂರಿನಿಂದ ಕುಮಟಾ ಸಂತೆಗೆ ತರಕಾರಿ, ಹಣ್ಣುಗಳನ್ನು ಹೇರಿಕೊಂಡು ಮಂಗಳವಾರ ರಾತ್ರಿ ಹೊರಟಿದ್ದ ಇವರ ಪಾಲಿಗೆ ಜವರಾಯ ಯಲ್ಲಾಪುರ ಬಳಿಯ ಗುಳ್ಳಾಪುರದಲ್ಲಿ ಕಾದು ಕುಳಿತಿದ್ದ. ಶಿರೂರು ಗುಡ್ಡ ಕುಸಿತ ದುರಂತ ಮಾಸುವ ಮುನ್ನ ಜಿಲ್ಲೆ ಮತ್ತೊಂದು ದೊಡ್ಡ ದುರಂತವನ್ನು ನೋಡುವಂತಾಯಿತು. 

ಅಪಘಾತದಲ್ಲಿ ರಕ್ಷಣೆಗೊಳಗಾದ ಶಾಬಿರ್ ಅಹ್ಮದ್ ಬಾಬಾ ಹುಸೈನ್ ಗವಾಯಿ ಕನ್ನಡಪ್ರಭದೊಂದಿಗೆ ಮಾತನಾಡಿ, ಸವಣೂರಿನಿಂದ ಕುಮಟಾಕ್ಕೆ ಮಂಗಳವಾರ ರಾತ್ರಿ ಪ್ರಯಾಣ ಬೆಳೆಸುತ್ತಿದ್ದೆವು. ಹಣ್ಣು, ತರಕಾರಿ ಮಾರಾಟಕ್ಕೆ ಹೋಗುತ್ತಿದ್ದವರೆಲ್ಲ ಬಡ ವ್ಯಾಪಾರಿಗಳು. ಲಾರಿಯಲ್ಲಿ ನಿದ್ದೆ ಮಾಡುತ್ತಿದ್ದರು. ಆದರೆ, ಏಕಾಏಕಿ ಲಾರಿ ಪಲ್ಟಿಯಾಗಿ ಬಿದ್ದು, ಜತೆಯಲ್ಲಿದ್ದ 10 ಜನರು ಸಾವಿಗೀಡಾಗಿದ್ದಾರೆ. ನಾನು ಲಾರಿ ಕ್ಯಾಬಿನ್ ಮೇಲೆ ಕೂತಿದ್ದೆ. ಆದ್ದರಿಂದ ದೂರಕ್ಕೆ ಹೋಗಿ ಬಿದ್ದೆ. ಕಣ್ಣ ಮುಂದೆಯೇ ಜತೆಗಿದ್ದವರು, ಗೆಳೆಯರು ಸಾವಿಗೀಡಾದರು. 

ನಿಂಬೆ ಹಣ್ಣು ಮಾರಲು ಬರುತ್ತಿದ್ದ ಗೆಳೆಯನೊಬ್ಬ ಪಕ್ಕದಲ್ಲೇ ಕೂತಿದ್ದ. ಅವನೂ ಹೊರಟುಹೋದ. ಮೃತರ ಕೆಲವು ಮನೆಯವರು ಪರಿಚಯದವರು. ಈ ವಿಚಾರ ಹೇಗೆ ಹೇಳೋದು ಅಂತಾ ಗೊತ್ತಾಗ್ತಿಲ್ಲ. ನಾನು ಬಿದ್ರೂ ಎದ್ಕೊಂಡು ಬಂದು ಆದಷ್ಟು ಜನರನ್ನು ರಕ್ಷಣೆ ಮಾಡಲು ಪ್ರಯತ್ನಿಸಿದ್ದೇನೆ ಎನ್ನುವಾಗ ಆತ ಆಘಾತದಿಂದ ಚೇತರಿಸಿಕೊಂಡಿರಲಿಲ್ಲ. 

ಹಾವೇರಿಯಿಂದ ಮಂಗಳವಾರ ರಾತ್ರಿ 10.30ಕ್ಕೆ ಇವರು ಲಾರಿಯಲ್ಲಿ ಹೊರಟಿದ್ದರು. ಎಲ್ಲರೂ ಕೆಲ ಸಮಯ ಪರಸ್ಪರ ಮಾತುಕತೆ ನಡೆಸಿ ನಿದ್ದೆಗೆ ಜಾರಿದ್ದಾರೆ. ಆಮೇಲೆ ನಡೆದಿದ್ದು ಘೋರ ದುರಂತ. ಗುಳ್ಳಾಪುರದಲ್ಲಿ ಎದ್ದ ಆಕ್ರಂದನದ ಅಲೆ ಸವಣೂರಿಗೂ ಕೆಲವೇ ನಿಮಿಷಗಳಲ್ಲಿ ವ್ಯಾಪಿಸಿತು. ಚಾಲಕ ನಿಜಾಮ್‌ಗೆ ದಟ್ಟವಾದ ಮಂಜು ಕವಿದಿದ್ದರಿಂದಲೋ ಅಥವಾ ತೂಕಡಿಸಿದ್ದರಿಂದಲೋ ಸ್ಟೇರಿಂಗ್ ನಿಯಂತ್ರಣ ತಪ್ಪಿ ಪಕ್ಕದ ವಿದ್ಯುತ್ ಕಂಬಕ್ಕೆ ಲಾರಿ ಡಿಕ್ಕಿ ಹೊಡೆದಿದೆ. ಚಾಲಕನ ಪಕ್ಕದಲ್ಲಿ 3 ಜನರು, ಕ್ಯಾಬಿನ್‌ನಲ್ಲಿ ಇದ್ದರೆ, ಟ್ರಕ್ ಹಿಂಬದಿ ಹಣ್ಣು, ತರಕಾರಿಗಳ ಮೂಟೆ ಮೇಲೆ 26 ಜನ, ಹೀಗೆ ಒಟ್ಟು 29 ಜನರು ಮಲಗಿದ್ದರು. ಟ್ರಕ್‌ನಡಿ ಸಿಲುಕಿ ನರಳಾಡಿ 8 ಮಂದಿ ಪ್ರಾಣ ಬಿಟ್ಟರೆ, ಆಸ್ಪತ್ರೆ ಸಾಗಿಸುವ ವೇಳೆ ಹಾಗೂ ಚಿಕಿತ್ಸೆ ಫಲಕಾರಿಯಾಗದೇ ಇಬ್ಬರು ಸಾವಿಗೀಡಾಗಿದ್ದಾರೆ.

ಗುಳ್ಳಾಪುರ ದುರ್ಘಟನೆಯಲ್ಲಿ ಮೃತರಾದವರು 18 ವರ್ಷದಿಂದ 35 ವರ್ಷದ ಒಳಗಿನವರೇ. ಕೆಲವರಿಗೆ ಮದುವೆಯಾಗಿ ಇಬ್ಬರು ಮೂವರು ಮಕ್ಕಳಿದ್ದರೆ, ಕೆಲವರಿಗೆ ಮದುವೆ ಸಹ ನಿಶ್ಚಯವಾಗಿತ್ತು. ತುತ್ತು ಅನ್ನಕ್ಕಾಗಿ ದುಡಿಮೆ ಮಾಡಲು ಹೋಗಿ ಮಸಣ ಸೇರಿದ್ದನ್ನು ನೋಡಿ ಆಸ್ಪತ್ರೆ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಅಲ್ಲದೇ, ಜವರಾಯನಿಗೆ ಕುಟುಂಬಸ್ಥರು ಹಿಡಿಶಾಪ ಹಾಕುತ್ತಿದ್ದರು. 

ಒಟ್ಟಿನಲ್ಲಿ ಹೊಟ್ಟೆಪಾಡಿಗಾಗಿ ತರಕಾರಿ, ಹಣ್ಣುಗಳನ್ನು ಮಾರಾಟ ಮಾಡಿ ದುಡಿಯಲು ಹೊರಟಿದ್ದವರು ಅಪಘಾತದಲ್ಲಿ ದಾರುಣವಾಗಿ ಸಾವಿಗೀಡಾಗಿದ್ದು ನಿಜಕ್ಕೂ ದುರಂತವೇ ಸರಿ.ನಾವೆಲ್ಲ ಕಾಯಿಪಲ್ಲೆ, ಹಣ್ಣುಗಳ ಮಾರಾಟಗಾರರು. ಬೆಳೆಗಾರರಿಂದ ಖರೀದಿಸಿ ಕಾರವಾರ, ಕುಮಟಾ ಮತ್ತಿತರ ಸಂತೆಗಳಿಗೆ ಹೋಗಿ ಮಾರಾಟ ಮಾಡಿ ಆ ಹಣದಲ್ಲೇ ಜೀವನ ನಿರ್ವಹಣೆ ಮಾಡುತ್ತಿದ್ದೆವು. ಕಾಯಿಪಲ್ಲೆ ಮಾರಾಟ ಮಾಡಿ ಬರುತ್ತೇವೆ ಎಂದು ಮನೆಯಿಂದ ಹೊರಟ 10 ಜನರು ಮರಳಿ ಬಾರದ ಲೋಕಕ್ಕೆ ಹೋದರು ಎಂದು ಗಾಯಾಳುವೊಬ್ಬ ನೊಂದು ನುಡಿಯುತ್ತಿದ್ದ.