ಸಾರಾಂಶ
ಇಳಕಲ್ಲ ನಗರದ ಗೌಳೇರಗುಡಿ ನವನಗರದಲ್ಲಿ ಮಹಿಳೆಯರಿಗೆ ಶೌಚಾಲಯ ಹಾಗೂ ಮೂಲಸೌಕರ್ಯ ಕಲ್ಪಿಸಲು ಆಗ್ರಹಿಸಿ ಮಹಿಳೆಯರು ಮಂಗಳವಾರ ಕೈಯಲ್ಲಿ ಚೊಂಬು ಹಿಡಿದು ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಇಳಕಲ್ಲ
ಇಲ್ಲಿನ ಗೌಳೇರಗುಡಿ ನವನಗರದಲ್ಲಿ ಮಹಿಳೆಯರಿಗೆ ಶೌಚಾಲಯ ಹಾಗೂ ಮೂಲಸೌಕರ್ಯ ಕಲ್ಪಿಸಲು ಆಗ್ರಹಿಸಿ ಮಹಿಳೆಯರು ಮಂಗಳವಾರ ಕೈಯಲ್ಲಿ ಚೊಂಬು ಹಿಡಿದು ಪ್ರತಿಭಟನೆ ನಡೆಸಿದರು.ನವನಗರದ ಪಕ್ಕದ ಬಯಲಿನಲ್ಲಿ ಮಹಿಳೆಯರು ಬಹಿರ್ದೆಸೆಗೆ ಹೋಗುತ್ತಿದ್ದರು. ಆದರೆ, ಆ ಸ್ಥಳದ ಮಾಲೀಕರು ಅಲ್ಲಿ ನಿವೇಶನಗಳನ್ನು ಮಾಡಿ ಸುತ್ತಲೂ ಬೇಲಿ ಹಾಕಿದ್ದರಿಂದ ಮಹಿಳೆಯರು ತೊಂದರೆಗೆ ಸಿಲುಕಿದ್ದರು. ಇದರಿಂದಾಗಿ ರೋಸಿ ಹೋದ ಮಹಿಳೆಯರು ಕೈಯಲ್ಲಿ ಚಂಬು ಹಿಡಿದುಕೊಂಡು ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿ ತಿಳಿದು ನಗರಸಭೆ ಪೌರಾಯುಕ್ತ ರಾಜಾರಾಮ ಪವಾರ, ಸದಸ್ಯರಾದ ರೇಶ್ಮಾ ಮಾರನಬಸರಿ, ಸುರೇಶ್ ಜಂಗ್ಲಿ, ಅಮೃತ ಬಿಜ್ಜಳ, ಮೌಲಪ್ಪ ಬಂಡಿವಡ್ಡರ ಮತ್ತಿತರರು ಸ್ಥಳಕ್ಕೆ ಧಾವಿಸಿ ಮಹಿಳೆಯರ ಜೊತೆಗೆ ಚರ್ಚೆ ಮಾಡಿ ಮನವೊಲಿಸಿದರು.
ಗೌಳೇರಗುಡಿ ಭಾಗದಲ್ಲಿ ಮಹಿಳೆಯರಿಗೆ ಸುಲಭ ಶೌಚಾಲಯ ಜೊತೆಗೆ ಒಳಚರಂಡಿ ವ್ಯವಸ್ಥೆ ಮಾಡಿ ಮನೆ ಮನೆಗಳಲ್ಲಿ ವೈಯುಕ್ತಿಕ ಶೌಚಾಲಯ ಕಟ್ಟಿಸಿಕೊಳ್ಳಲು ವ್ಯವಸ್ಥೆ ಮಾಡಿಕೊಡುವ ಭರವಸೆ ನೀಡಿದ ನಂತರ ಪ್ರತಿಭಟನಾ ನಿರತ ಮಹಿಳೆಯರು ಪ್ರತಿಭಟನೆ ಕೈಬಿಟ್ಟರು.