ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಆಶ್ರಮ ಶಾಲೆಗಳ ನೌಕರರಿಗೆ ಕಳೆದ ಹದಿನಾಲ್ಕು ತಿಂಗಳಿಂದ ವೇತನ ಬಾಕಿ ಇದೆ. ಅಲ್ಲದೇ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರಿಗೆ ಜೀತದಾಳಿನಂತೆ ದುಡಿಸಿಕೊಂಡು ಸಕಾಲಕ್ಕೆ ವೇತನ ಕೊಡುತ್ತಿಲ್ಲ. ಆದ್ದರಿಂದ ಹೊರಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ಒದಗಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮಾರ್ಚ್ 1ರಂದು ಜಿಲ್ಲಾ ಪಂಚಾಯಿತಿ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ ಹೇಳಿದರು.ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ವಸತಿ ನಿಲಯಗಳಲ್ಲಿ ಕಳೆದ ಹತ್ತು- ಹದಿನೈದು ವರ್ಷಗಳಿಂದ ಹೊರಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರು ಅತ್ಯಂತ ಕಡಿಮೆ ವೇತನದಲ್ಲಿ ಸೇವೆ ಸಲ್ಲಿಸುತ್ತ ತಮ್ಮ ಮುಂದಿನ ಭವಿಷ್ಯ ಒಳ್ಳೆಯದು ಆಗುತ್ತದೆ ಎಂಬ ಆಸೆಯನ್ನು ಹೊಂದಿದ್ದರು. ಆದಾಗ್ಯೂ, ಸಮಾಜ ಕಲ್ಯಾಣ ಇಲಾಖೆಯಲ್ಲಿ ಸರ್ಕಾರ ಸಿಬ್ಬಂದಿ ಕಡಿತಗೊಳಿಸಿದ್ದರಿಂದ ಕೆಲಸದ ಹೊರೆಯಾಗಿ ಅತ್ಯಂತ ಸಂಕಷ್ಟದಲ್ಲಿ ಒದ್ದಾಡುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಇನ್ನೊಂದೆಡೆ ಮ್ಯಾನ್ ಪವರ್ ಏಜೆನ್ಸಿಗಳು ದುಡಿದ ವೇತನವನ್ನು ಕಡಿಮೆ ಪಾವತಿಸುವುದು, ಇಪಿಎಫ್ ಮತ್ತು ಇಎಸ್‍ಐ ಹಣ ನೌಕರರ ಹೆಸರಿಗೆ ಜಮಾ ಮಾಡದೇ ಮೋಸ ಮಾಡಲಾಗುತ್ತಿದೆ. ದುಡಿದ ವೇತನ ನಾಲ್ಕೈದು ತಿಂಗಳು ಪಾವತಿಸದೇ ಅಲೆದಾಡಿಸುತ್ತಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಆಶ್ರಮ ಶಾಲೆಗಳ ನೌಕರರಿಗೆ 14 ತಿಂಗಳಿಂದ ವೇತನ ಪಾವತಿಇಲ್ಲ. ಬಿಸಿಎಂ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ನೌಕರರಿಗೂ ನಾಲ್ಕೈದು ತಿಂಗಳು ವೇತನವಿಲ್ಲ. ಅಧಿಕಾರಿಗಳು, ನೌಕರರ ಬಗ್ಗೆ ಸ್ವಲ್ಪವೂ ಕಾಳಜಿ ತೋರುತ್ತಿಲ್ಲ. ಹೀಗಾಗಿ ನೌಕರರ ಬದುಕು ಅತ್ಯಂತ ಸಂಕಷ್ಟದಲ್ಲಿ ಸಿಕ್ಕಿ ಒದ್ದಾಡುವಂತಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.ಧರಣಿಯಲ್ಲಿ ಜಿಲ್ಲೆಯಲ್ಲಿನ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ಮೊರಾರ್ಜಿ ದೇಸಾಯ, ಕಿತ್ತೂರ್ ರಾಣಿ ಚೆನ್ನಮ್ಮ, ಇಂದಿರಾಗಾಂಧಿ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ವಸತಿ ನಿಲಯಗಳ ಎಲ್ಲ ಹೊರಗುತ್ತಿಗೆ ನೌಕರರು ಹೋರಾಟದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಅವರು ಕೋರಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಪರಶುರಾಮ್ ಹಡಗಲಿಗಿ, ಕಾರ್ಯದರ್ಶಿ ಕಾಶಿನಾಥ್ ಬಂಡಿ, ಉಪಾಧ್ಯಕ್ಷ ಮೇಘರಾಜ್ ಕಠಾರೆ, ಚಿಂಚೋಳಿ ತಾಲ್ಲೂಕು ಅಧ್ಯಕ್ಷೆ ಶ್ರೀಮತಿ ನರಸಮ್ಮಾ ಚಂದನಕೇರಾ, ಜಿ. ಪರಮೇಶ್ವರ್ ಕಾಂತಾ ಮುಂತಾದವರು ಉಪಸ್ಥಿತರಿದ್ದರು.