ಕಾನೂನು ತಿದ್ದುಪಡಿ ಮಾಡಿ ಪಟ್ಟ ನೀಡುವಂತೆ ಆಗ್ರಹಿಸಿ ಮಾ. 10ರಂದು ಹೋರಾಟ

| Published : Mar 05 2025, 12:32 AM IST

ಕಾನೂನು ತಿದ್ದುಪಡಿ ಮಾಡಿ ಪಟ್ಟ ನೀಡುವಂತೆ ಆಗ್ರಹಿಸಿ ಮಾ. 10ರಂದು ಹೋರಾಟ
Share this Article
  • FB
  • TW
  • Linkdin
  • Email

ಸಾರಾಂಶ

ಕಾನೂನು ತಿದ್ದುಪಡಿ ಮಾಡಿ ಪಟ್ಟಾ ನೀಡುವಂತೆ ಆಗ್ರಹಿಸಿ ಮಾ.11ರಂದು ಬೆಂಗಳೂರಿನ ಫ್ರಿಡಂ ಪಾರ್ಕ್‌ನಲ್ಲಿ ಹೋರಾಟ ಹಮ್ಮಿಕೊಂಡಿದ್ದು ತಾಲೂಕಿನ ಬಗರ್‌ಹುಕುಂ ಸಾಗುವಳಿದಾರರು, ಅರ್ಜಿ ತಿರಸ್ಕೃತಗೊಂಡ ಫಲಾನುಭವಿಗಳು ಹೋರಾಟದಲ್ಲಿ ಪಾಲ್ಗೊಳ್ಳಬೇಕು.

ಕನ್ನಡಪ್ರಭ ವಾರ್ತೆ ಕಂಪ್ಲಿ

ಕಾನೂನು ತಿದ್ದುಪಡಿ ಮಾಡಿ ಪಟ್ಟಾ ನೀಡುವಂತೆ ಆಗ್ರಹಿಸಿ ಮಾ.11ರಂದು ಬೆಂಗಳೂರಿನ ಫ್ರಿಡಂ ಪಾರ್ಕ್‌ನಲ್ಲಿ ಹೋರಾಟ ಹಮ್ಮಿಕೊಂಡಿದ್ದು ತಾಲೂಕಿನ ಬಗರ್‌ಹುಕುಂ ಸಾಗುವಳಿದಾರರು, ಅರ್ಜಿ ತಿರಸ್ಕೃತಗೊಂಡ ಫಲಾನುಭವಿಗಳು ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಸದಸ್ಯ ಕರಿಯಪ್ಪ ಗುಡಿಮನಿ ತಿಳಿಸಿದರು.

ಪಟ್ಟಣದ ಅತಿಥಿಗೃಹ ಆವರಣದಲ್ಲಿ ನಡೆದ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಪದಾಧಿಕಾರಿಗಳ ಸಂಘಟನಾ ಸಭೆಯಲ್ಲಿ ಮಾತನಾಡಿದರು

ಸರ್ಕಾರದ ದೃಷ್ಟಿಯಲ್ಲಿ ಯೋಗ್ಯವಲ್ಲದ ಭೂಮಿಯಲ್ಲಿ ಬದುಕು ಕಟ್ಟಿಕೊಂಡ ರೈತರ ಬಗರ್‌ಹುಕುಂ ಅರ್ಜಿಗಳನ್ನು ತಿರಸ್ಕೃತಗೊಳಿಸಿದ್ದು ಸರಿಯಲ್ಲ. ಇದರಿಂದಾಗಿ ಸಾವಿರಾರು ಕುಟುಂಬಗಳಿಗೆ ಜೀವನ ನಡೆಸಲಿಕ್ಕೂ ಸಮಸ್ಯೆಯಾಗಿದೆ. ಕಾನೂನು ತಿದ್ದುಪಡಿ ಮೂಲಕ ಕೃಷಿ ಯೋಗ್ಯವಲ್ಲದ ಭೂಮಿಯ ರೈತರಿಗೆ ಪಟ್ಟಾ ನೀಡಬೇಕು. ತಾಲೂಕಿನಲ್ಲಿ 2185 ಬಗರ್‌ಹುಕುಂ ಅರ್ಜಿ ಸಲ್ಲಿಸಿದ್ದು ಕೇವಲ 253 ಅರ್ಜಿಗಳನ್ನು ಪರಿಶೀಲನೆಗೆ ಪರಿಗಣಿಸಿ ಉಳಿದ 1932 ಅರ್ಜಿ ತಿರಸ್ಕರಿಸಿದ್ದು ಸರಿಯಲ್ಲ. ಬಗರ್‌ಹುಕುಂ ಸಾಗುವಳಿದಾರರು ಹಲವು ದಶಕಗಳಿಂದ ಭೂಮಿಯನ್ನೆ ನಂಬಿಕೊಂಡು ಜೀವನ ಸಾಗಿಸುತ್ತಿದ್ದು ಇವರಿಗೆ ಅನ್ಯಾಯವಾಗಬಾರದು. ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಕಾನೂನು ತಿದ್ದುಪಡಿ ಮಾಡಿ ಪಟ್ಟಾ ನೀಡಲಿ ಎಂದು ಆಗ್ರಹಿಸಿದರು.

ಬಳಿಕ ರಾಜ್ಯ ಸಮನ್ವಯ ಸಮಿತಿ ಸದಸ್ಯ ವಸಂತರಾಜ ಕಹಳೆ ಮಾತನಾಡಿ, ನಂ.10 ಮುದ್ದಾಪುರದ 29 ಎಕರೆಯಲ್ಲಿ 50 ರೈತರು ಉಳುಮೆ ಮಾಡುತ್ತಿದ್ದ ಜಮೀನನ್ನು ವಶಪಡಿಸಿಕೊಂಡ ಸರ್ಕಾರ ಆಡಳಿತ ಸೌಧ ನಿರ್ಮಿಸಿದೆ. ಭೂಮಿ ಕಳೆದುಕೊಂಡ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ನೋವಿಗೆ ಶಾಸಕರು ಹಾಗೂ ಅಧಿಕಾರಿಗಳು ಸ್ಪಂದಿಸಬೇಕು. ಕೂಡಲೇ ಕ್ರಮ ವಹಿಸಿ ರೈತರಿಗೆ ಭೂಮಿ, ನಿವೇಶನ ನೀಡುವಲ್ಲಿ ಮುಂದಾಗಬೇಕು ಎಂದು ಒತ್ತಾಯಿಸಿದರು.ತಾಲೂಕಿನ ಗ್ರಾಮಗಳಲ್ಲಿಯೂ ಅಭಿವೃದ್ಧಿ ನೆಪದಲ್ಲಿ ಬಗರ್‌ಹುಕುಂ ಭೂಮಿ ಮೀಸಲಿಡುವ ಶಾಸಕ ಜೆ.ಎನ್. ಗಣೇಶರ ಕ್ರಮ ಸರಿಯಲ್ಲ. ಬಗರ್‌ಹುಕುಂ ರೈತರಿಗೆ ಭೂಮಿ ನೀಡುವಲ್ಲಿ ಶಾಸಕರು ಮುಂದಾಗದಿದ್ದಲ್ಲಿ ಶಾಸಕರ ವಿರುದ್ಧ ಹೋರಾಟಕ್ಕೆ ಮುಂದಾಗುವುದಾಗಿ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ನಾನಾ ಸಂಘಟನೆಗಳ ಪದಾಧಿಕಾರಿಗಳಾದ ರವಿ ಮಣ್ಣೂರು, ಕೆ.ಲಕ್ಷ್ಮಣ, ಸೀಕ್ಲಿ ಬಸವರಾಜ, ಶಾಂತಪ್ಪ ಪೂಜಾರಿ, ಬಸಪ್ಪ ಮೆಟ್ರಿ, ಬಾರಿಕೇರ ಗಂಗಾಧರ, ಆನೆ ಯಲ್ಲಪ್ಪ, ಅರುಣಾ, ಎಚ್.ಮಹೇಶ, ಸಿ.ಬಸವರಾಜ, ಜೆ.ಉಮೇಶ ಇತರರಿದ್ದರು.