ಎಸ್. ಐ.ಆರ್. ಮೂಲಕ ದೇಶದಲ್ಲಿ ಅರಾಜಕತೆ ಸೃಷ್ಟಿ ಮಾಡಲಾಗಿದೆ. ಮುಖ್ಯ ಚುನಾವಣಾ ಆಯುಕ್ತರು ಮಾಡಿರುವುದು ದೇಶದ್ರೋಹದ ಕೆಲಸ. ಹಾಗಾಗಿ ಅವರನ್ನು ಈ ಕೂಡಲೇ ವಜಾ ಮಾಡಬೇಕು. ಇಂಡಿಯಾ ಒಕ್ಕೂಟದ ಸಾಂಪ್ರದಾಯಿಕ ಅಹಿಂದ ಮತ ಕಿತ್ತು ಹಾಕಿ, ಪ್ರಜಾಪ್ರಭುತ್ವ ವ್ಯವಸ್ಥೆ ಹಾಳುಗೆಡವಲಾಗಿದೆ. ಇದರ ವಿರುದ್ಧ ಅಕ್ಟೋಬರ್ 8ರ ಪ್ರತಿಭಟನೆಯಲ್ಲಿ ಪ್ರಜಾಪ್ರಭುತ್ವ ಪಾಲಕರು ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ, ತುಮಕೂರು

ದೇಶದಲ್ಲಿ ಎಸ್‌.ಐ.ಆರ್ ಮೂಲಕ ಒಂದು ಪಕ್ಷ ಅಧಿಕಾರ ಹಿಡಿಯಲು ಸಹಾಯ ಮಾಡಿದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಅವರನ್ನು ಸೇವೆಯಿಂದ ವಜಾ ಮಾಡಬೇಕು. ಇದುವರೆಗಿನ ಎಸ.ಐ.ಆರ್.ಪ್ರಕ್ರಿಯೆ ರದ್ದು ಮಾಡಬೇಕೆಂದು ಆಗ್ರಹಿಸಿ ದೆಹಲಿ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಜೆನ್‌ಜೀ ಹೋರಾಟ ಬೆಂಬಲಿಸಿ ಅಕ್ಟೋಬರ್ 8ರ ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಇಂಡಿಯಾ ಮೈತ್ರಿಕೂಟದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಿ.ಚಂದ್ರಶೇಖರ್‌ಗೌಡ ತಿಳಿಸಿದ್ದಾರೆಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಇಂಡಿಯಾ ಮೈತ್ರಿಕೂಟದ ಪಕ್ಷಗಳ ಮುಖಂಡರೊಂದಿಗೆ ಸುದ್ದಿಗೋಷ್ಠಿ ನಡೆಸಿದ ಅವರು, ಮುಖ್ಯ ಚುನಾವಣಾ ಆಯುಕ್ತರ ಕೆಲಸದ ಬಗ್ಗೆ ಸುಪ್ರೀಂಕೋರ್ಟ್ ಸಹ ಅಸಮಾಧಾನ ವ್ಯಕ್ತಪಡಿಸಿರುವುದು, ಜನರಿಗೆ ಎಸ್.ಐ.ಆರ್. ಹಿಂದೆ ಬಿಜೆಪಿ ಮತ್ತು ಆರ್.ಎಸ್.ಎಸ್.ನ ಹಿಡನ್‌ ಅಜೆಂಡಾ ಇರುವುದು ಬಹಿರಂಗಗೊಂಡಿದೆ. ಇದರ ವಿರುದ್ಧ ಎಲ್ಲಾ ನಾಗರಿಕರು ಈ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಇಕ್ಬಾಲ್‌ ಅಹಮದ್ ಮಾತನಾಡಿ, ಎಸ್. ಐ.ಆರ್. ಮೂಲಕ ದೇಶದಲ್ಲಿ ಅರಾಜಕತೆ ಸೃಷ್ಟಿ ಮಾಡಲಾಗಿದೆ. ಮುಖ್ಯ ಚುನಾವಣಾ ಆಯುಕ್ತರು ಮಾಡಿರುವುದು ದೇಶದ್ರೋಹದ ಕೆಲಸ. ಹಾಗಾಗಿ ಅವರನ್ನು ಈ ಕೂಡಲೇ ವಜಾ ಮಾಡಬೇಕು. ಇಂಡಿಯಾ ಒಕ್ಕೂಟದ ಸಾಂಪ್ರದಾಯಿಕ ಅಹಿಂದ ಮತ ಕಿತ್ತು ಹಾಕಿ, ಪ್ರಜಾಪ್ರಭುತ್ವ ವ್ಯವಸ್ಥೆ ಹಾಳುಗೆಡವಲಾಗಿದೆ. ಇದರ ವಿರುದ್ಧ ಅಕ್ಟೋಬರ್ 8ರ ಪ್ರತಿಭಟನೆಯಲ್ಲಿ ಪ್ರಜಾಪ್ರಭುತ್ವ ಪಾಲಕರು ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಸಿಪಿಐ(ಎಂ) ನ ಸೈಯದ್ ಮುಜೀಬ್ ಮಾತನಾಡಿ, ಚುನಾವಣಾ ಆಯೋಗ ಮತದಾರರ ಹಕ್ಕು ರಕ್ಷಿಸುವ ಬದಲು ಹರಣ ಮಾಡಲು ಹೊರಟಿದೆ. ಚುನಾವಣಾ ಆಯೋಗದ ಗುಪ್ತ ಮಾರ್ಗಸೂಚಿ ಜನತೆಯ ಮುಂದೆ ಆನಾವರಣಗೊಂಡಿದೆ. ಎಸ್.ಐ.ಆರ್. ಮೂಲಕ 15 ಕೋಟಿ ಮತದಾರರನ್ನು ಅಳಿಸಿ ಹಾಕಲಾಗಿದೆ. ಕಳೆದ 12ವರ್ಷಗಳ ಕಾಲ ಬಿಜೆಪಿ ಅಧಿಕಾರದಲ್ಲಿದೆ. ಇಷ್ಟುದೊಡ್ಡ ಪ್ರಮಾಣದ ವಲಸೆಗೆ ಅವಕಾಶ ಮಾಡಿಕೊಟ್ಟಿದ್ದಾದರೂ ಹೇಗೆ ಎಂದು ಪ್ರಶ್ನಿಸಿದರು.ಸಿಪಿಐನ ಗಿರೀಶ್ ಮಾತನಾಡಿ, ರಾಷ್ಟ್ರಪತಿಗೂ ಇಲ್ಲದ ವಿಶೇಷ ಅಧಿಕಾರ ಮುಖ್ಯ ಚುನಾವಣಾ ಆಯುಕ್ತರಿಗೆ ನೀಡಿ, ಅವರ ಮೂಲಕ ವೋಟ್‌ ಚೋರಿ ನಡೆಸಿ, ಅಧಿಕಾರ ಹಿಡಿಯಲು ಬಿಜೆಪಿ ಮತ್ತು ಆರ್.ಎಸ್.ಎಸ್‌ ಹೊರಟಿವೆ. ಸಾಂವಿಧಾನಿಕ ಅಂಗಗಳನ್ನು ದುರುಪಯೋಗ ಪಡಿಸಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಮತ್ತು ಅದಕ್ಕೆ ಸಹಕರಿಸಿದ ಚುನಾವಣಾ ಮುಖ್ಯ ಆಯುಕ್ತರ ವಿರುದ್ಧ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ ಎಂದರು.

ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದಆರ್.ರಾಮಕೃಷ್ಣ,ಇರ್ಫಾನ್‌ಅಹಮದ್, ಭೈಲಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.