ಶ್ರೀರಾಮಸೇನೆ ಕಾರ್ಯಕರ್ತರ ಪ್ರತಿಭಟನೆ, ಆಕ್ರೋಶ

| Published : Jul 03 2025, 11:47 PM IST

ಶ್ರೀರಾಮಸೇನೆ ಕಾರ್ಯಕರ್ತರ ಪ್ರತಿಭಟನೆ, ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀರಾಮಸೇನೆ ಕಾರ್ಯಕರ್ತರನ್ನು ಗಿಡಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಿದ ಘಟನೆ ಖಂಡಿಸಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ನಗರದಲ್ಲಿ ಶ್ರೀರಾಮಸೇನೆಯ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿ, ಆಕ್ರೋಶ ಹೊರಹಾಕಿದರು. ಈ ವೇಳೆ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ನೂಕು ನುಗ್ಗಲು ಉಂಟಾಗಿ ಕೆಲ ಕಾಲ ಗೊಂದಲ ಉಂಟಾಯಿತು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಶ್ರೀರಾಮಸೇನೆ ಕಾರ್ಯಕರ್ತರನ್ನು ಗಿಡಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಿದ ಘಟನೆ ಖಂಡಿಸಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ನಗರದಲ್ಲಿ ಶ್ರೀರಾಮಸೇನೆಯ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿ, ಆಕ್ರೋಶ ಹೊರಹಾಕಿದರು. ಈ ವೇಳೆ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ನೂಕು ನುಗ್ಗಲು ಉಂಟಾಗಿ ಕೆಲ ಕಾಲ ಗೊಂದಲ ಉಂಟಾಯಿತು.

ನಗರದ ಚನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಶ್ರೀರಾಮ ಸೇನೆ ಕಾರ್ಯಕರ್ತರು ಮಳೆಯ ನಡುವೆಯೇ ತೀವ್ರ ಕಿಡಿಕಾರಿದರು. ಮಾತ್ರವಲ್ಲ, ರಾಜ್ಯ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿದರು‌. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಮೋದ್ ಮುತಾಲಿಕ್, ಇದು ಸಂವಿಧಾನ ಬಾಹಿರ ಘಟನೆ. ಇಂಗಳಿ ಎಂಬ ಗ್ರಾಮದಲ್ಲಿ ಸೊಕ್ಕಿನಿಂದ ಮರಕ್ಕೆ ಕಟ್ಟಿ ಹೊಡೆದಿದ್ದಾರೆ. ಹೊಡೆಯಲು ಇದು ಪಾಕಿಸ್ತಾನವೋ ಅಥವಾ ಅಪಘಾನಿಸ್ತಾನವೋ ಎಂದು ಪ್ರಶ್ನೆ ಮಾಡಿದರು. ತಾಲಿಬಾನ್ ಮಾದರಿಯಲ್ಲಿ ಆಗುತ್ತಿರುವ ಈ ಘಟನೆಯನ್ನು ನಾವು ಖಂಡಿಸಬಾರದಾ ಎಂದು ಪ್ರಶ್ನೆ ಮಾಡಿದ ಅವರು, ನಡೆದ ಘಟನೆಯನ್ನು ಬೇರೆ ಕಡೆಗೆ ಗಮನ ಸೆಳೆಯುವ ಪ್ರಯತ್ನವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ನಮ್ಮ ಹುಡುಗರ ಮೇಲೆ ಬೇರೆ ಬೇರೆ ಆರೋಪಗಳನ್ನು ಮಾಡಲಾಗುತ್ತಿದೆ. ಕಂಬಕ್ಕೆ ಕಟ್ಟಿ ಹೊಡೆಯುತ್ತಾರೆ ಅಂದರೆ ಅದು ಗಂಭೀರ ವಿಚಾರ. ಇದನ್ನು ಸರ್ಕಾರ ಹಾಗೂ ಪೊಲೀಸ್ ಇಲಾಖೆ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.ಸಾರ್ವಜನಿಕರಿಗೆ ರಕ್ಷಣೆ ಕೊಡಬೇಕಾಗಿರುವುದು ನಿಮ್ಮ ಕರ್ತವ್ಯವಾಗಿದೆ. ಅದನ್ನು ಬಿಟ್ಟು ನೀವು ಹೊಡೆದವರಿಗೆ ಪ್ರೋತ್ಸಾಹ ಮಾಡುತ್ತಿದ್ದಿರಿ. ಕಾಂಗ್ರೆಸ್ ಸರ್ಕಾರದ ಮಾತು ಕೇಳಿ ಬಚಾವ್ ಮಾಡೋದು, ಪ್ರೋತ್ಸಾಹ ಮಾಡುವ ಕೆಲಸ ಮಾಡಿದರೆ ನಿಮ್ಮನ್ನು ಕಂಬಕ್ಕೆ ಕಟ್ಟಿ ಹೊಡೆಯುವ ಪರಿಸ್ಥಿತಿ ಬರುತ್ತದೆ ಎಂದು ಎಚ್ಚರಿಕೆ ನೀಡಿದ ಅವರು, ಡಿಜೆ ಹಳ್ಳಿ ಕೆಜೆ ಹಳ್ಳಿ ಹುಬ್ಬಳ್ಳಿ ಘಟನೆಗಳನ್ನು ನೆನಪಿಸಿಕೊಳ್ಳಿ. ಇವರಿಗೆ ಎಲ್ಲಿಂದ ಬಂತು ಧೈರ್ಯ? ಕಾಂಗ್ರೆಸ್ ಸರ್ಕಾರ ಅವರನ್ನು ಬಚಾವ್ ಮಾಡುವ ಪ್ರಕ್ರಿಯೇ ಮಾಡುತ್ತಿರುವುದೇ ಈ ಜಿಹಾದಿ ಮನಸ್ಥಿತಿಗೆ ಕಾರಣ ಎಂದು ಕಿಡಿಕಾರಿದರು.ಗೋ ರಕ್ಷಕರು ಹಿಂದೂಗಳು. ಅವರು ಎಂದಿಗೂ ಯಾವತ್ತಿಗೂ ಇಂತಹ ಕುಕೃತ್ಯ ಮಾಡುವವರಲ್ಲ. ಗೋ ರಕ್ಷಣೆ ಮಾಡುವವರನ್ನು ಮರಕ್ಕೆ ಕಟ್ಟಿ ಹೊಡೆಯುವ ಧೈರ್ಯ ಎಲ್ಲಿಂದ ಬಂತು ಎಂದು ಪ್ರಶ್ನಿಸಿದ ಅವರು, ಒಂದು ಎಚ್ಚರಿಕೆ ಕೊಡುತ್ತಿದ್ದೇನೆ. ಇನ್ನು ಮುಂದೆ ಈ ರೀತಿ ಮಾಡಿದರೆ ಇನ್ನು ಹಿಂದೂ ಸಮಾಜ ಅದಕ್ಕೆ ಉತ್ತರ ಕೊಡಬೇಕಾಗುತ್ತೆ. ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಆದರೂ ಲಾರಿಯಲ್ಲಿ ಗಾಡಿಗಳಲ್ಲಿ ರಾಜಾರೋಷವಾಗಿ ಗೋವುಗಳನ್ನು ತೆಗೆದುಕೊಂಡು ಹೋಗಲಾಗುತ್ತಿದೆ. ಪೊಲೀಸರು ಒಂದು ಆಕಳನ್ನಾದರೂ ಹಿಡಿದಿದ್ದಾರಾ ಎಂದು ಪ್ರಶ್ನಿಸಿದರು.ಕಾಂಗ್ರೆಸ್ ಹೇಳುವ ಮಾತು ಕೇಳಬೇಡಿ. ಕಾನೂನಿನ ಮಾತು ಕೇಳಿ ನಮ್ಮ ಕಾರ್ಯಕರ್ತರು ರೌಡಿಶೀಟರ್ ಇರಬಹುದು. ಎಂಥವರನ್ನು ಈಗ ರೌಡಿಶೀಟರ್ ಮಾಡಲಾಗುತ್ತಿದೆ ಎಂದರೆ ಅದಕ್ಕೆ ಬೆಲೆಯೇ ಇಲ್ಲದಂತಾಗಿದೆ. ಕಲ್ಲಡ್ಕ ಪ್ರಭಾಕರ್ ಭಟ್, ಪುತೀಲ್, ಚಕ್ರವರ್ತಿ ಸೂಲಿಬೆಲೆ ಇಂತಹ ಹಿಂದೂ ಕಾರ್ಯಕರ್ತರನ್ನು ರೌಡಿಶೀಟರ್ ಮಾಡಲಾಗುತ್ತಿದೆ ಎಂದು ದೂರಿದರು.ಗಿಡಕ್ಕೆ ಕಟ್ಟಿ ಹೊಡೆದಿದ್ದನ್ನು ಬಿಟ್ಟು ಉಳಿದಿರುವುದನ್ನೆಲ್ಲ ಹೇಳುತ್ತಿದ್ದಿರಿ. ಹಿಂದೂ ಮುಸ್ಲಿಂ ಎಲ್ಲರೂ ಹೊಡೆದಿದ್ದಾರೆ ಅಂತ ಹೇಳುತ್ತಿರಿ. ಇದು ನಿಮ್ಮ ಘನತೆ ಉಳಿಸುವಂತದ್ದಲ್ಲ. ಈ ಘಟನೆ ಇಡೀ ದೇಶಾದ್ಯಂತ ಚರ್ಚೆ ಆಗುತ್ತಿದೆ. ಇದರ ಕುರಿತ ವಿಚಾರ ಮಾಡುವುದನ್ನು ಬಿಟ್ಟು ಉಳಿದ್ದನ್ನೆಲ್ಲ ಡೈವರ್ಟ್ ಮಾಡುತ್ತಿದ್ದಾರೆ. ಗೋವಿಗಾಗಿ ನಾವು ಸಾಯಲು ಸಿದ್ಧ. ಗೋವಿನ ಸಲುವಾಗಿ ಸಾಯಿಸಲು ಸಿದ್ಧವಾಗಿದ್ದೇವೆ. ಸಾವಿರಾರೂ ವರ್ಷಗಳಿಂದ ಈ ನೆಲದಲ್ಲಿ ನಮಗೆ ಅನ್ಯಾಯ ಆಗುತ್ತಿದೆ. ನಡೆದಾಡುವ ದೇವರು ಅಂತ ಗೋವನ್ನು ನಾವು ಕರೀತಿವಿ. ಕಾಂಗ್ರೇಸ್ ಸರ್ಕಾರ ಸುಧಾರಿಸಿಕೊಳ್ಳದಿದ್ದರೆ ಹಿಂದೂ ಸಮಾಜ ಸಿಡಿದೇಳುತ್ತೆ ಎಂದು ಮುತಾಲಿಕ್ ಎಚ್ಚರಿಸಿದರು.ಕಾರ್ಯಕರ್ತರ ಪೊಲೀಸ್‌ ವಶಕ್ಕೆ

ಹುಕ್ಕೇರಿ ತಾಲೂಕಿನ ಇಂಗಳಿಯಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರನ್ನು ಮರಕ್ಕೆ ಕಟ್ಟಿ ಥಳಿಸಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ಸಂಘಟನೆಯ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ಈ ಕೃತ್ಯದಲ್ಲಿ ಪಾಲ್ಗೊಂಡ ಎಲ್ಲ ಆರೋಪಿಗಳನ್ನು ಬಂಧಿಸಬೇಕು. ಇಲ್ಲವಾದರೆ ಇಂಗಳಿ ಚಲೋ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಸಿದರು. ಕಾರ್ಯಕರ್ತರನ್ನು ಥಳಿಸಿದ ಆರೋಪಿಗಳು ವಿಡಿಯೋದಲ್ಲಿ ಸೆರೆಯಾಗಿದ್ದು, ಅವರನ್ನು ಬಂಧಿಸಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್‌ ಅವರಿಗೆ ಮನವಿ ಸಲ್ಲಿಸಿದರು. ಹಲ್ಲೆಗೆ ಒಳಗಾದ ಗೋರಕ್ಷಕರಿಗೆ ಚಿಕಿತ್ಸೆ ವೆಚ್ಚವನ್ನು ಕೂಡ ಭರಿಸಬೇಕು. ಜತೆಗೆ ಅವರಿಗೆ ರಕ್ಷಣೆಯನ್ನೂ ನೀಡಬೇಕು ಎಂದು ಆಗ್ರಹಿಸಿದರು.