ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್. ನಗರಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ದ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಸಾಲಿಗ್ರಾಮ ಮತ್ತು ಕೆ.ಆರ್.ನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು. ಇಲ್ಲಿನ ಹಾಸನ-ಮೈಸೂರು ರಸ್ತೆಯಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಯ ಬಳಿಯಿಂದ ರಾಜ್ಯಪಾಲರ ವಿರುದ್ದ ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಾ ಹೊರಟ ನೂರಾರು ಮಂದಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುವುದರ ಜತೆಗೆ ಈಗ ಸಾಂವಿಧಾನ್ವಿಕ ಹುದ್ದೆಯಾಗಿರುವ ರಾಜ್ಯಪಾಲರ ಘನತೆಯನ್ನು ಮಣ್ಣುಪಾಲು ಮಾಡಿದ್ದು, ಇದನ್ನು ದೇಶದ ಜನತೆ ಕ್ಷಮಿಸುವುದಿಲ್ಲ ಎಂದು ರೋಷಭರಿತರಾಗಿ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿ ಕೂಡಲೇ ಪ್ರಾಸಿಕ್ಯೂಷನ್ ಅನುಮತಿ ವಾಪಾಸ್ ಪಡೆಯಬೇಕು ಎಂದು ಆಗ್ರಹಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ವಿರುದ್ದ ಧಿಕ್ಕಾರದ ಘೋಷಣೆಗಳನ್ನು ಮೊಳಗಿಸಿ ರಾಜ್ಯದ ಸರ್ವ ಜನಾಂಗದ ನಾಯಕರಾಗಿರುವ ಸಿದ್ದರಾಮಯ್ಯ ಅವರನ್ನು ಏನು ಮಾಡಲು ಸಾಧ್ಯವಿಲ್ಲ ಅವರ ವಿರುದ್ದ ಸೇಡಿನ ರಾಜಕಾರಣ ಮಾಡಿದರೆ ಕರ್ನಾಟಕ ರಾಜ್ಯದ ಜನತೆ ಭುಗಿಲೇಳಲಿದ್ದು, ಇದನ್ನು ಅರಿತು ಕೇಂದ್ರ ಸರ್ಕಾರ ಮತ್ತು ರಾಜ್ಯಪಾಲರು ಎಚ್ಚರಿಕೆಯ ಹೆಜ್ಜೆ ಇಡಬೇಕೆಂದು ಒತ್ತಾಯ ಪಡಿಸಿದರು. ಪಟ್ಟಣದ ಪುರಸಭೆಯ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ವಾಹನಗಳನ್ನು ತಡೆದು ತಮ್ಮ ಪ್ರತಿಭಟನೆ ದಾಖಲಿಸಿದ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಹಾಗೂ ಸಿದ್ದರಾಮಯ್ಯ ಅವರ ಅಭಿಮಾನಿಗಳು ಆನಂತರ ತಾಲೂಕು ಕಚೇರಿಯವರೆಗೆ ಪ್ರತಿಭಟನಾ ರ್ಯಾಲಿ ನಡೆಸಿ ರಸ್ತೆ ತಡೆ ಮಾಡಿದರು. ರಾಜ್ಯ ಕಾಂಗ್ರೆಸ್ ಎಸ್ಟಿ ಘಟಕದ ಉಪಾಧ್ಯಕ್ಷ ಶ್ರೀನಿವಾಸ್, ತಾಲೂಕು ಕುರುಬರ ಸಂಘದ ಅಧ್ಯಕ್ಷ ಜೆ. ಶಿವಣ್ಣ, ದಲಿತ ಮುಖಂಡ ರಾಮಯ್ಯ, ಜಿಪಂ ಮಾಜಿ ಸದಸ್ಯ ಶಿವರಾಮ್, ಪುರಸಭೆ ಮಾಜಿ ಅಧ್ಯಕ್ಷರಾದ ನರಸಿಂಹರಾಜು, ಗೀತಾ ಮಹೇಶ್, ಸದಸ್ಯ ಪ್ರಕಾಶ್, ಎಂ. ನಟರಾಜು, ತಾಲೂಕು ಕಾಂಗ್ರೆಸ್ ಎಸ್ಟಿ ಘಟಕದ ಅಧ್ಯಕ್ಷ ಮಹದೇವನಾಯಕ ಮಾತನಾಡಿ, ಸ್ವಾಭಿಮಾನಿ ಮತ್ತು ಪ್ರಾಮಾಣಿಕ ರಾಜಕಾರಣಿಯಾಗಿರುವ ಸಿದ್ದರಾಮಯ್ಯನವರ ವಿರುದ್ದ ಷಡ್ಯಂತ್ರದ ರಾಜಕಾರಣ ಮಾಡುತ್ತಿರುವ ಕೇಂದ್ರ ಸರ್ಕಾರ ಭವಿಷ್ಯದಲ್ಲಿ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಆನಂತರ ಪ್ರತಿಭಟನಾಕಾರರು ಸಂವಿಧಾನ ವಿರೋಧಿಯಾಗಿ ನಡೆದುಕೊಳ್ಳುತ್ತಿರುವ ರಾಜ್ಯಪಾಲರ ವಿರುದ್ದ ತಹಸೀಲ್ದಾರ್ ಜಿ. ಸುರೇಂದ್ರಮೂರ್ತಿ ಅವರ ಮೂಲಕ ರಾಷ್ಟ್ರಪತಿಗಳಿಗೆ ದೂರು ಸಲ್ಲಿಸಿದರು. ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಸ್. ಮಹದೇವ್, ಉದಯಶಂಕರ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್. ಮಹೇಶ್, ನಿರ್ದೇಶಕರಾದ ಕೆ.ಎನ್. ಪ್ರಸನ್ನಕುಮಾರ್, ಸೈಯದ್ ಜಾಬೀರ್, ಸರಿತಾ ಜವರಪ್ಪ, ಜಿಲ್ಲಾ ಕುರುಬರ ಸಂಘದ ನಿರ್ದೇಶಕ ದಿಡ್ಡಹಳ್ಳಿ ಬಸವರಾಜು, ತಾಲೂಕು ನಿರ್ದೇಶಕರಾದ ಕೆ.ಪಿ. ಬುಡೀಗೌಡ, ಅಪ್ಪಾಜಿಗೌಡ, ಪಿಎಲ್.ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಚಂದ್ರೇಗೌಡ, ಮುಖಂಡರಾದ ಕೆ.ಪಿ.ಜಗದೀಶ್, ಎಂ.ಎಸ್. ಅನಂತ, ಸುಧಾಕರ್, ನಾಗರಾಜ ನಾಯಕ, ಪ್ರದೀಪ್ ಕುಮಾರ್, ರಾಜನಾಯಕ, ಕುಮಾರ್, ರಾಘವೇಂದ್ರಗುಡ್ಡಪ್ಪ, ರಾಜಯ್ಯ, ಕೆ.ಎಂ. ಹರೀಶ್, ಬೋರಪ್ಪ ಭಾಗವಹಿಸಿದ್ದರು.