ನೆಟ್‍ವರ್ಕ್ ಸಮಸ್ಯೆಗೆ ಗಣತಿ ತಿರಸ್ಕಾರ: ಪ್ರತಿಭಟನೆ

| Published : Oct 06 2025, 01:00 AM IST

ಸಾರಾಂಶ

ಬರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಕೊಪ್ಪ, ಬರೂರು, ತೆಪ್ಪಗೋಡು, ಮುಳುಕೆರೆ, ಕುಂದೂರು, ಬಸವನಬ್ಯಾಣ, ಪರ್ಸಿಕೊಪ್ಪ, ಇಡುವಳ್ಳಿ, ಮಸೆಕೈಲುಬೈಲು ಇನ್ನೂ ಹಲವಾರು ಗ್ರಾಮಗಳಿಗೆ ಮೊಬೈಲ್‍ನೆಟ್‍ವರ್ಕ್ ಇಲ್ಲದೇ ಜಾತಿಗಣತಿಗೆ ಸ್ಥಳೀಯರು ತಿರಸ್ಕರಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತ್ಯಾಗರ್ತಿ

ಬರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಕೊಪ್ಪ, ಬರೂರು, ತೆಪ್ಪಗೋಡು, ಮುಳುಕೆರೆ, ಕುಂದೂರು, ಬಸವನಬ್ಯಾಣ, ಪರ್ಸಿಕೊಪ್ಪ, ಇಡುವಳ್ಳಿ, ಮಸೆಕೈಲುಬೈಲು ಇನ್ನೂ ಹಲವಾರು ಗ್ರಾಮಗಳಿಗೆ ಮೊಬೈಲ್‍ನೆಟ್‍ವರ್ಕ್ ಇಲ್ಲದೇ ಜಾತಿಗಣತಿಗೆ ಸ್ಥಳೀಯರು ತಿರಸ್ಕರಿಸಿದ್ದಾರೆ.

ಶನಿವಾರ ಬರೂರು ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನೆಡೆಸಿ ಹಲವು ವರ್ಷಗಳಿಂದ ನೆಟ್‍ವರ್ಕ್ ಸಮಸ್ಯೆಯ ಬಗ್ಗೆ ಹಲವಾರು ದೂರುಗಳನ್ನು ನೀಡಿದರೂ ಫಲಿತಾಂಶವಿಲ್ಲದೇ ಸಮಸ್ಯೆಯಾಗಿಯೇ ಉಳಿದಿದೆ ಎಂದು ಸ್ಥಳೀಯ ಗ್ರಾಮದ ಜನರು ಗ್ರಾಮಪಂಚಾಯಿತಿ ಎದುರು ಜಮಾಯಿಸಿ ಸಮಸ್ಯೆಯನ್ನು ಬಗೆಹರಿಸುವಂತೆ ಒತ್ತಾಯಿಸಿದ್ದಾರೆ.

ಸಮಸ್ಯೆಗಳನ್ನು ಅರಿತ ಉಪವಿಭಾಗಾಧಿಕಾರಿಗಳು ಇಲ್ಲಿನ ಗ್ರಾಮಪಂಚಾಯಿತಿ ಅಧಿಕಾರಿಗಳಿಗೆ ಹಾಗೂ ಸಮೀಕ್ಷೆಗೆ ನಿಯೋಜನೆಗೊಂಡ ಅಧಿಕಾರಿಗಳಿಗೆ ಬಲವಂತವಾಗಿ ಗ್ರಾಮದ ಜನರಿಗೆ ನೆಟ್‍ವರ್ಕ್ ಬರುವಲ್ಲಿಗೇ ಬರುವಂತೆ ತಿಳಿಸಿ ಗಣತಿ ಮಾಡಲು ಆದೇಶಿಸಿದ್ದಾರೆ. ಇದುವರೆಗೂ ಗ್ರಾಮಪಂಚಾಯಿತಿಯಲ್ಲಿಯೇ ಕುಳಿತು ಗಣತಿ ನೆಡೆಸುತ್ತಿರುವ ಅಧಿಕಾರಿಗಳು ಪ್ರತಿಭಟನೆಯ ಸುದ್ದಿ ತಿಳಿದು ಬೇರೆ ಗ್ರಾಮಗಳಿಗೆ ತೆರಳಿದ್ದಾರೆ. ಸರ್ಕಾರದ ಆದೇಶದಂತೆ ನಮ್ಮ ಮನೆಗೆ ಬಂದರೆ ಪ್ರತಿಯೊಂದು ಮಾಹಿತಿಯನ್ನೂ ನೀಡುತ್ತೇವೆ. ರೈತಾಪಿ ಜನರಿರುವ ಈ ಪ್ರದೇಶದಲ್ಲಿ ಗಣತಿಯ ನೆಪದಲ್ಲಿ ರೈತರು ತಮ್ಮ ಕೆಲಸಗಳನ್ನು ಬಿಟ್ಟು ಬರಲು ಸಾಧ್ಯವಿಲ್ಲ. ಕಾಲೇಜು, ಗ್ರಾಮಪಂಚಾಯಿತಿ, ಸೊಸೈಟಿ, ಹೈಸ್ಕೂಲ್‍ಗಳನ್ನು ಹೊಂದಿರುವ ಈ ಗ್ರಾಮಕ್ಕೆ ಇಂದಿನ 5ಜಿ ಯುಗದಲ್ಲಿ ಯಾವುದೇ ನೆಟ್‍ವರ್ಕ್ ಇಲ್ಲದೇ ಇರುವುದು ವಿಷಾದನೀಯ. ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ನಮ್ಮ ಮನವಿಯನ್ನು ಆಲಿಸಲು ಸ್ಥಳಕ್ಕೆ ಬರುವವರೆಗೂ ಪ್ರತಿಭಟನೆಯನ್ನು ಕೈ ಬಿಡುವುದಿಲ್ಲವೆಂದು ಪ್ರತಿಭಟನಾ ನಿರತರು ಹೇಳಿದರು.

ಸ್ಥಳಕ್ಕೆ ಧಾವಿಸಿದ ತಹಸೀಲ್ದಾರ್ ರಶ್ಮಿ. ತಾಲೂಕು ಪಂಚಾಯಿತಿ ಇಒ ಶಿವಪ್ರಕಾಶ್, ಪ್ರತಿಭಟನಾ ನಿರತರನ್ನು ಮನವೊಲಿಸಲು ಯತ್ನಿಸಿದರು. ನಂತರ ತಹಸೀಲ್ದಾರ್ ರಶ್ಮಿಯವರು ಮಾತನಾಡಿ, ಸಾಗರ ಹಾಗೂ ಹೊಸನಗರ ತಾಲೂಕಿನ ಹಲವು ಗ್ರಾಮಗಳಲ್ಲಿ ಈ ಸಮಸ್ಯೆಯಿದ್ದು, ನಮ್ಮ ಇಲಾಖೆಗೂ ಮೊಬೈಲ್ ನೆಟ್‍ವರ್ಕ್ ಇಲ್ಲದೇ ಯಾವುದೇ ಕೆಲಸವೂ ನೆಡೆಯುವುದಿಲ್ಲ. ನಿಮ್ಮ ಬೇಡಿಕೆಗಳನ್ನು ಅರಿತು ಇನ್ನು 4 ದಿನಗಳೊಳಗಾಗಿ ಸಂಬಂಧಪಟ್ಟ ಇಲಾಖೆಯವರಿಂದ ಮಾಹಿತಿ ಪಡೆದು ಅಡೆತಡೆಗಳಿದ್ದರೆ ಏನೆಂದು ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗ್ರಾಮಸ್ಥರೊಂದಿಗೆ ಚರ್ಚಿಸಿ ಸಮಸ್ಯೆಗೆ ಪರಿಹಾರ ದೊರಕಿಸಿಕೊಡುವ ಭರವಸೆ ನೀಡಿದ ಮೇಲೆ ಪ್ರತಿಭಟನೆಯನ್ನು ಹಿಂಪಡೆದುಕೊಂಡರು.

ತಾಲೂಕು ಪಂಚಾಯಿತಿ ಎಡಿ ಹನೀಫ್ ಆಗಮಿಸಿದ್ದು, ಅನಂತಪುರ ಪೋಲೀಸ್ ಇಲಾಖೆಯ ಅಧಿಕಾರಿಗಳಾದ ಎಎಸ್‍ಐ ಸಿದ್ಧಾರೂಢ, ಹಾಗೂ ಸಿಬ್ಬಂದಿಗಳು ಗ್ರಾಮಪಂಚಾಯಿತಿಗೆ ಮುತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನಾ ನಿರತರನ್ನು ತಡೆದರು.

ಈ ಪ್ರತಿಭಟನೆಯಲ್ಲಿ ದೇವರಾಜ್ ಕಲ್ಕೊಪ್ಪ, ದಾಮೋಧರ್, ಶಶಿ, ಮುಳುಕೆರೆಯಿಂದ ರವಿ, ಬಸವರಾಜ್, ತೆಪ್ಪಗೋಡಿನಿಂದ ಹುಚ್ಚಪ್ಪ, ಕಲ್ಲಪ್ಪ, ವೀರೇಶ್ ಬರೂರು, ಸುಧಾಕರ್, ದಿವಾಕರ್, ಜಾನ್ ಇಡುವಳ್ಳಿ, ಚಂದ್ರಶೇಖರ್, ಸೋಮಶೇಖರ್ ಬಸವನಬ್ಯಾಣ, ಇನ್ನೂ ಹಲವಾರು ಸ್ಥಳೀಯ ಮುಖಂಡರು ಹಾಗೂ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.