ಕನ್ನಡಪ್ರಭ ವಾರ್ತೆ ರಾಮನಾಥಪುರ
ಇಲ್ಲಿಯ ಗ್ರಾಮ ಪಂಚಾಯಿತಿ ವತಿಯಿಂದ ಈ ಹಿಂದೆ ಆಶ್ರಯ ನಿವೇಶನಗಳಿಗೆ ಹಕ್ಕು ಪತ್ರವನ್ನು ನೀಡಿದ್ದು, ಇದುವರೆಗೂ ಖಾತೆ ಮಾಡಿ ಇ-ಸ್ವತ್ತು ನೀಡಿಲ್ಲ. ಅವರಿಗೆ ಇ ಸ್ವತ್ತು ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ಸೇನೆ ವತಿಯಿಂದ ಗ್ರಾಮ ಪಂಚಾಯ್ತಿ ಎದುರು ನಡೆಸುತ್ತಿರುವ ಪ್ರತಿಭಟನೆ 12ನೇ ದಿನಕ್ಕೆ ಮುಂದುವರೆದಿದ್ದು, ಇಸ್ವತ್ತು ನೀಡುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಸಂಘಟನೆಯ ಡಾ. ಎಸ್. ರಾಘವೇಂದ್ರಗೌಡರು ತಿಳಿಸಿದರು.ರಾಮನಾಥಪುರದ ಕೋಟವಾಳು ಗ್ರಾಮದ ಆಶ್ರಯ ನಿವೇಶನಕ್ಕೆ ಖಾತೆ ಹಾಗೂ ಮೂಲಭೂತ ಸೌಕರ್ಯ ಮಾಡಿಕೊಡುವಂತೆ ರಾಮನಾಥಪುರ ಗ್ರಾಮ ಪಂಚಾಯತಿ ಮುಂಭಾಗಲ್ಲಿ 12ನೇ ದಿನ ಮುಂದುವರಿದ ಅಹೋರಾತ್ರಿ ಉಗ್ರ ಪ್ರತಿಭಟನೆಯಲ್ಲಿ ಫಲಾನುಭವಿಗಳು ಭಾಗವಹಿಸಿದ್ದರು. ರಾಮನಾಥಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಈ ಹಿಂದೆ ಕೊಟವಾಳು ಗ್ರಾಮದ ಸ.ನಂ 12ರಲ್ಲಿ ಹಕ್ಕುಪತ್ರ ನೀಡಿದ್ದು, ಗ್ರಾಮಸ್ಥರು ಹಕ್ಕುಪತ್ರವಿದ್ದರೂ ಖಾತೆ ಮಾಡಿಕೊಡದ ರಾಮನಾಥಪುರ ಗ್ರಾಮ ಪಂಚಾಯತಿ ನಿರ್ಲಕ್ಷ್ಯದ ವಿರುದ್ಧ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಹಾಗೂ ಅಹೋರಾತ್ರಿ ಧರಣಿ 12 ದಿನಕ್ಕೆ ಕಾಲಿಟ್ಟಿದೆ. ರಾಮನಾಥಪುರ ಗ್ರಾಮ ಪಂಚಾಯತಿ ಮುಂಭಾಗ ಆವರಣದಲ್ಲಿ ಹನ್ನೆರಡನೇ ದಿನ ಮುಂದುವರೆದು ನಡೆಯುತ್ತಿರುವ ಹೋರಾಟ. ಅಂದರೆ ಈ ಹಿಂದೆ ಈಗಾಗಲೇ ಸತತ ಎರಡು ವರ್ಷ ಆದರೂ ಈವರೆಗೆ ಯಾವುದೇ ಅಧಿಕಾರಿಗಳು ಸರಿಯಾಗಿ ಸ್ಪಂದಿಸದಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಘಟನೆಯ ಹಿನ್ನೆಲೆ:ಸುಮಾರು 4-5 ವರ್ಷಗಳ ಹಿಂದೆ ರಾಜೀವ್ ಗಾಂಧಿ ಆಶ್ರಯ ವಸತಿ ಯೋಜನೆಯಡಿ ಕೊಟವಾಳು ಗ್ರಾಮದ ವಸತಿ ರಹಿತರಿಗೆ ನಿವೇಶನ ಹಂಚಿಕೆ ಮಾಡಿ ಹಕ್ಕುಪತ್ರಗಳನ್ನು ವಿತರಿಸಲಾಗಿತ್ತು. ಆದರೆ, ಹಕ್ಕುಪತ್ರ ವಿತರಣೆಯಾಗಿ 4 -5 ವರ್ಷಗಳೇ ಕಳೆದರೂ ಸಂಬಂಧಪಟ್ಟ ಇಲಾಖೆಗಳು ಇದುವರೆಗೆ ಖಾತೆ ಮಾಡಿಕೊಟ್ಟಿಲ್ಲ. ಇದರಿಂದಾಗಿ ಫಲಾನುಭವಿಗಳು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದು, ಇಂದಿಗೂ ಬಾಡಿಗೆ ಮನೆಗಳಲ್ಲಿ ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. ಹಲವಾರು ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ಕೇವಲ ಭರವಸೆ ನೀಡುತ್ತಿದ್ದಾರೆಯೇ ಹೊರತು ಕೆಲಸ ಮಾಡುತ್ತಿಲ್ಲ. ಈ ಕೂಡಲೇ ಜಿಲ್ಲಾಧಿಕಾರಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸಬೇಕು. ಬಡವರ ನೋವಿಗೆ ಸರ್ಕಾರ ಸ್ಪಂದಿಸದಿದ್ದರೆ ಉಗ್ರ ಹೋರಾಟ ರಾಜ್ಯಾದ್ಯಂತ ತೀವ್ರಗೊಳಿಸುವುದಾಗಿ ಅವರು ಎಚ್ಚರಿಸಿದರು.
ಜಿಲ್ಲಾಡಳಿತವು ಹಾಗೂ ತಾಲೂಕು ಆಡಳಿತವು ಇನ್ನಾದರೂ ಎಚ್ಚೆತ್ತುಕೊಂಡು ಕೊಟವಾಳು ಗ್ರಾಮದ ಬಡ ಕುಟುಂಬಗಳಿಗೆ ಶೀಘ್ರದಲ್ಲಿ ನ್ಯಾಯ ಒದಗಿಸಿ ಕೊಡಬೇಕು. ಇಲ್ಲದಿದ್ದಲ್ಲಿ ಮುಂದೆ ಆಗುವ ಅನಾಹುತಗಳಿಗೆ ಜನಪ್ರತಿನಿಧಿಗಳು ಅಧಿಕಾರಿಗಳು ಹೊಣೆಗಾರರಾಗುತ್ತೀರಿ ಎಂದು ರಾಘವೇಂದ್ರಗೌಡ ತಿಳಿಸಿದರು.
ಈ ಹೋರಾಟದಲ್ಲಿ ಆಶ್ರಯ ನಿವೇಶನ ಮಹಿಳೆಯರು ಕುಟುಂಬಸ್ಥರು ಸಂಘಟನೆಗಳು, ಸಂಘಟನೆಯ ಪದಾಧಿಕಾರಿಗಳು, ರಾಮನಾಥಪುರ ಗ್ರಾಮ ಪಂಚಾಯತಿ ಮಾಜಿ ಸದಸ್ಯರು ಮುಖಂಡರು ಹಾಗೂ ಸ್ಥಳೀಯರು ಭಾಗಿಯಾಗಿದ್ದರು.