ಸಾರಾಂಶ
ಕನ್ನಡಪ್ರಭ ವಾರ್ತೆ ಮಸ್ಕಿ
ಸುಪ್ರೀಂ ಕೋರ್ಟ್ ತೀರ್ಪಿನಂತೆ ಒಳಮೀಸಲಾತಿ ಜಾರಿ ಮಾಡುವಂತೆ ಒತ್ತಾಯಿಸಿ ಇದೇ ಸೆ.20 ರಂದು ಮಸ್ಕಿಯಲ್ಲಿ ಬೃಹತ್ ರ್‍ಯಾಲಿ, ಬಹಿರಂಗ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಒಳ ಮೀಸಲಾತಿ ಜಾರಿಗಾಗಿ ಐಕ್ಯ ಹೋರಾಟ ಸಮಿತಿಯ ಸದಸ್ಯರಾದ ಜಿಪಂ ಮಾಜಿ ಸದಸ್ಯ ದೊಡ್ಡಪ್ಪ ಮುರಾರಿ ಹಾಗೂ ಸಾಹಿತಿ ಸಿ.ದಾನಪ್ಪ ನಿಲೋಗಲ್ ಹೇಳಿದರು.ಪಟ್ಟಣದ ಪತ್ರಿಕಾ ಭವನದಲ್ಲಿ ಶನಿವಾರ ಒಳ ಮೀಸಲಾತಿ ಜಾರಿಗಾಗಿ ಐಕ್ಯ ಹೋರಾಟ ಸಮಿತಿಯ ವತಿಯಿಂದ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ 30 ವರ್ಷಗಳಿಂದ ಒಳ ಮೀಸಲಾತಿ ಜಾರಿ ಮಾಡುವಂತೆ ಹೋರಾಟ ಮಾಡುತ್ತಾ ಬಂದಿದ್ದೇವೆ. ಈಗ ಸುಪ್ರೀಂ ಕೋರ್ಟ್ ಒಳ ಮೀಸಲಾತಿ ಜಾರಿ ಮಾಡಲು ತೀರ್ಪು ನೀಡಿದ್ದು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಕೂಡಲೇ ಮಿಸಲಾತಿ ಜಾರಿ ಮಾಡಿ ಜನಸಂಖ್ಯಾವಾರು ಪಾಲು ಕೊಡಿ ಎಂದು ಅಗ್ರಹಿಸಿ ಇದೇ ಸೆ.20 ರಂದು ಮಸ್ಕಿ ಪಟ್ಟಣದಲ್ಲಿ ಬೃಹತ್ ರ್‍ಯಾಲಿ ಹಾಗೂ ಬಹಿರಂಗ ಸಭೆ ಹಮ್ಮಿಕೊಳ್ಳಲಾಗಿದ್ದು, ಅಂಬೇಡ್ಕರ್ ಉದ್ಯಾನವನದಿಂದ ಭ್ರಮರಾಂಬ ಕಲ್ಯಾಣ ಮಂಟಪದವರೆಗೆ ಬೃಹತ್ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದರು.
ಈ ಐತಿಹಾಸಿಕ ಚಳುವಳಿಯಲ್ಲಿ ಬೆಂಗಳೂರಿನ ಮಾಡಸಂದ್ರ ಮುನಿಯಪ್ಪ, ಎಸ್‌ಡಿಪಿಐನ ಭಾಸ್ಕರ ಪ್ರಸಾದ್, ವಕೀಲರಾದ ಹರಿರಾಮ್, ಹೋರಾಟಗಾರ ಮಾನಸಯ್ಯ ಹಾಗೂ ನಾಯಕ ಸಮುದಾಯದ ಜಯಲಕ್ಷ್ಮಿ ಸೇರಿ ಎಲ್ಲಾ ಜಿಲ್ಲೆಗಳಿಂದ ಹೋರಾಟಗಾರರು ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ ಅಲ್ಲದೇ ಸಮಾಜದ ಸಾವಿರಾರು ಜನರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.ಸಿಎಂ ಸಿದ್ದರಾಮಯ್ಯನವರು ಚುನಾವಣೆಗೂ ಮುನ್ನ ತಾವು ಚಿತ್ರದುರ್ಗದಲ್ಲಿ ಘೋಷಣೆ ಮಾಡಿದ ಮಾತು ಏನಾಯಿತು. ತಾವು ಅಹಿಂದ, ಶೋಷಿತ ಸಮಾಜದ ನಾಯಕರೆಂದು ನಿಮಗೆ ಬಿರುದು ಇದೆ. ತಮ್ಮ ಅವಧಿಯಲ್ಲಿ ಒಳ ಮೀಸಲಾತಿ ಅನುಷ್ಠಾನ ಪಕ್ಕಾ ಎಂದು ನಿರೀಕ್ಷಿಸಿದ್ದ ಅಸ್ಪೃಶ್ಯ ಸಮುದಾಯಗಳು ಇಂದು ಆತಂಕದಿಂದ ನೋಡುವಂತಾಗಿದೆ.
ಸುಪ್ರೀಂ ಕೋರ್ಟ್ ತೀರ್ಪು ನೀಡಿದರು ಸಹ ಕಾಂಗ್ರೆಸ್ ಸರ್ಕಾರ ಒಳ ಮಿಸಲಾತಿ ಜಾರಿ ತರಲು ಹಿಂದೇಟು ಹಾಕುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.30 ವರ್ಷಗಳಿಂದ ಮೀಸಲಾತಿಗಾಗಿ ಹೋರಾಟ ಮಾಡಿದ ಸಮುದಾಯವನ್ನು ರಾಜ್ಯದಲ್ಲಿ ಆಡಳಿತ ನಡೆಸಿರುವ ಎಲ್ಲಾ ಸರ್ಕಾರಗಳು ಮಾದಿಗರಿಗೆ ಮೀಸಲಾತಿ ನೀಡಲು ಕಡೆಗಣಿಸಿವೆ. ಕಲ್ಬುರ್ಗಿಯಲ್ಲಿ ನಡೆವ ಸಚಿವ ಸಂಪುಟದಲ್ಲಿ ಒಳ ಮೀಸಲಾತಿಯನ್ನು ಜಾರಿ ಮಾಡಿಲ್ಲ ಎಂದರೆ, ಇನ್ನಷ್ಟು ಉಗ್ರ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಐಕ್ಯ ಹೋರಾಟ ಸಮಿತಿ ಮುಖಂಡರಾದ ಹನುಮಂತಪ್ಪ ವೆಂಕಟಾಪುರು, ಮಲ್ಲಯ್ಯ ಬಳ್ಳಾ, ಸುರೇಶ್ ಅಂತರಗಂಗಿ, ರಮೇಶ್ ಸೇರಿ ಇತರರು ಇದ್ದರು.