ಸಾರಾಂಶ
-ಗ್ರಾಮದ ಮುಖ್ಯ ರಸ್ತೆಗಳಲ್ಲಿ ಎತ್ತಿನ ಗಾಡಿ ಮೆರವಣಿಗೆ ಮೂಲಕ ವಿಭಿನ್ನ ಚಳುವಳಿ
------ಕನ್ನಡಪ್ರಭ ವಾರ್ತೆ ಹಿರಿಯೂರು
ಜವನಗೊಂಡನ ಹಳ್ಳಿ ಹೋಬಳಿ ಕೆರೆಗಳಿಗೆ ನೀರು ಹರಿಸಿ ಎಂದು ನಡೆಸುತ್ತಿರುವ ಧರಣಿ ಸತ್ಯಾಗ್ರಹ 50ನೇ ದಿನಕ್ಕೆ ಕಾಲಿಟ್ಟಿದೆ. ಐವತ್ತು ದಿನಗಳ ಹೋರಾಟದ ಪ್ರಯುಕ್ತ ಗ್ರಾಮದ ಮುಖ್ಯ ರಸ್ತೆಗಳಲ್ಲಿ ಎತ್ತಿನ ಗಾಡಿ ಮೆರವಣಿಗೆ ಮೂಲಕ ವಿಭಿನ್ನ ಚಳುವಳಿ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಹೋರಾಟ ನಿರತರನ್ನು ಉದ್ದೇಶಿಸಿ ತಾಲೂಕು ರೈತ ಸಂಘದ ಅಧ್ಯಕ್ಷ ಕೆಟಿ ತಿಪ್ಪೇಸ್ವಾಮಿ ಮಾತನಾಡಿ, ಚಳುವಳಿ ಪ್ರಾರಂಭವಾಗಿ 50 ದಿನ ಕಳೆದರೂ ಕ್ಷೇತ್ರದ ಶಾಸಕರು ಸ್ಥಳಕ್ಕೆ ಬಂದು ರೈತರ ಬೇಡಿಕೆಗಳನ್ನು ಆಲಿಸದೇ ಇರುವುದು ಖಂಡನೀಯ.ಈ ಭಾಗದ ಮೂರ್ನಾಲ್ಕು ಗ್ರಾ.ಪಂ. ಕುಡಿಯುವುದಕ್ಕೂ ನೀರು ಇಲ್ಲದೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಸಮಸ್ಯೆ ಇಷ್ಟೊಂದು ಗಂಭೀರವಾಗಿದ್ದರೂ ಆಳುವ ವರ್ಗ ನಿರ್ಲಕ್ಷ ಮಾಡುತ್ತಿರುವುದು ದುರಂತ. ಮುಂದಿನ ದಿನಗಳಲ್ಲಿ ಜನಪ್ರತಿನಿಧಿಗಳು ಯಾವ ಗ್ರಾಮಕ್ಕೆ ಬಂದರೂ ಘೇರಾವ್ ಮಾಡುವ ಪರಿಸ್ಥಿತಿ ಇದೆ. ಕ್ಷೇತ್ರದಲ್ಲಿ ಸಾವಿರಾರು ಕೋಟಿ ನೀರಾವರಿ ಕಾಮಗಾರಿಗಳು ನಡೆಯುತ್ತಿದ್ದು, ಅವುಗಳ ಮೂಲ ಸ್ವರೂಪವೇ ಹಣ ಮಾಡುವ ಉದ್ದೇಶವಾಗಿರುತ್ತದೆ. ರೈತರ ಜಮೀನಿನಲ್ಲಿ ಕಾಮಗಾರಿ ಮಾಡುವಾಗ ಯಾವುದೇ ತರಹದ ನೋಟಿಸ್ ನೀಡದೆ ಅವರಿಗೆ ತಿಳಿಸದೆ ರಾತ್ರೋರಾತ್ರಿ ಅವರ ಭೂಮಿಯಲ್ಲಿ ಕಾಮಗಾರಿ ಮಾಡುತ್ತಾರೆ. ಇನ್ನು ಮುಂದೆ ಪ್ರತಿದಿನ ಧರಣಿ ಸ್ಥಳದಲ್ಲಿಯೇ ಅಡುಗೆ ತಯಾರಿಸಿಕೊಂಡು ಒಂದೊಂದು ಊರಿನವರು ಒಂದೊಂದು ದಿನ ಧರಣಿ ನಡೆಸಲಿದ್ದಾರೆ. ಈ ಭಾಗದ 16 ಕೆರೆಗಳಿಗೆ ನೀರು ಬರುವವರೆಗೂ ಹೋರಾಟ ಮುಂದುವರೆಯಲಿದೆ ಎಂದರು.
ಈ ಸಂದರ್ಭದಲ್ಲಿ ಸಿದ್ದರಾಮಣ್ಣ, ಎಂ ಆರ್ ವೀರಣ್ಣ, ಮೂಡಲಹಟ್ಟಿ ಜಯರಾಮಪ್ಪ, ಈರಣ್ಣ, ಕೆಆರ್ ಹಳ್ಳಿ ರಾಜಪ್ಪ, ರಾಜಕುಮಾರ್, ರಾಮಣ್ಣ, ಕನ್ಯಪ್ಪ, ವಜೀರ್ ಸಾಬ್, ಕಲೀಮ್ ಸಾಬ್, ರಾಮಕೃಷ್ಣ, ಕುಮಾರ, ಮಂಜುನಾಥ್, ಕರಿಯಪ್ಪ, ಚಿತ್ರಲಿಂಗಪ್ಪ, ಸುರೇಶ್, ಚಂದ್ರಶೇಖರ್ ಮುಂತಾದವರು ಉಪಸ್ಥಿತರಿದ್ದರು.-----
ಫೋಟೊ: 1,2ಜೆಜಿ ಹಳ್ಳಿ ಹೋಬಳಿಯ ಕೆರೆಗಳಿಗೆ ನೀರು ಹರಿಸಿ ಎಂದು ನಡೆಸುತ್ತಿರುವ ಧರಣಿ 50 ನೇ ದಿನ ಪೂರೈಸಿದ ಹಿನ್ನೆಲೆಯಲ್ಲಿ ಎತ್ತಿನಗಾಡಿ ಮೆರವಣಿಗೆ ನಡೆಸಲಾಯಿತು.