ಶಾಲಾ ಶಿಕ್ಷರಿಗೆ ಅಡುಗೆ ತಯಾರಿ ಜವಾಬ್ದಾರಿ ಹೊರೆಯಾಗುತ್ತಿದೆ ಎಂಬ ನೆಪ ಮಾಡಿ ಶಿಕ್ಷಣ ಇಲಾಖೆ ಅಡುಗೆ ತಯಾರಿಯ ಜವಾಬ್ದಾರಿ ಖಾಸಗೀಕರಣ ಮಾಡಲು ಹೊರಟಿದೆ

ಹೂವಿನಹಡಗಲಿ: ಮಧ್ಯಾಹ್ನದ ಅಕ್ಷರ ದಾಸೋಹ ಬಿಸಿಯೂಟ ತಯಾರಿಕರು ಸೇವಾ ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಶುಕ್ರವಾರ ಶಾಲೆಯಲ್ಲಿ ಬಿಸಿಯೂಟ ಬಂದ್ ಮಾಡಿ ಪ್ರತಿಭಟನೆ ಮಾಡಿದರು.

ಇಲ್ಲಿನ ಲಾಲ್‌ ಬಹದ್ಧೂರ್‌ ಶಾಸ್ತ್ರಿ ವೃತ್ತದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಬಿಸಿಯೂಟ ತಯಾರಿಕ ಸಂಘದ ಜಿಲ್ಲಾಧ್ಯಕ್ಷೆ ಎಚ್‌.ಅನುಸೂಯ ಮಾತನಾಡಿ, ಮದ್ಯಾಹ್ನ ಅಕ್ಷರ ದಾಸೋಹ ಬಿಸಿಯೂಟ ತಯಾರಕರು ಕಳೆದ 24 ವರ್ಷಗಳಿಂದ ಮಧ್ಯಾಹ್ನ ಉಪಹಾರ ಯೋಜನೆ ಅಡಿಯಲ್ಲಿ ಸರ್ಕಾರಿ ಶಾಲೆಗಳು ಮತ್ತು ಅನುದಾನಿತ ಶಾಲೆಗಳಲ್ಲಿ ಅಡುಗೆಯವರಾಗಿ ಕೆಲಸ ಮಾಡುತ್ತಿರುವ ಬಿಸಿಯೂಟ ತಯಾರಕರು ಸೇವಾ ಭದ್ರತೆ ಸೇರಿದಂತೆ ಇತರೆ ಬೇಡಿಕೆಗಾಗಿ ನಾವು ಇಂದು ರಾಜ್ಯಾದ್ಯಂತ ಶಾಲೆಗಳಲ್ಲಿ ಅಡುಗೆ ತಯಾರಿಕೆ ಬಂದ್ ಮಾಡಿ ಪ್ರತಿಭಟನೆ ಮಾಡುತ್ತಿದ್ದೇವೆ ಎಂದರು.

ಸಿಪಿಐ ಜಿಲ್ಲಾ ಖಜಾಂಚಿ ಸುರೇಶ್ ಹಲಗಿ ಮಾತನಾಡಿ, ತಾಲೂಕಿನ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಮದ್ಯಾಹ್ನ ಅಕ್ಷರ ದಾಸೋಹ ಬಿಸಿಯೂಟ ತಯಾರಕರು ಕಡಿಮೆ ಸಂಬಳ ಪಡೆದು ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಶಾಲಾ ಶಿಕ್ಷರಿಗೆ ಅಡುಗೆ ತಯಾರಿ ಜವಾಬ್ದಾರಿ ಹೊರೆಯಾಗುತ್ತಿದೆ ಎಂಬ ನೆಪ ಮಾಡಿ ಶಿಕ್ಷಣ ಇಲಾಖೆ ಅಡುಗೆ ತಯಾರಿಯ ಜವಾಬ್ದಾರಿ ಖಾಸಗೀಕರಣ ಮಾಡಲು ಹೊರಟಿದ್ದು, ಇದರಿಂದ ಸಾವಿರಾರು ಜನ ಅಡುಗೆ ತಯಾರಕರ ಬದುಕು ಬೀದಿಗೆ ಬರುವಂತಾಗಿದೆ. ಶಾಲೆಗಳಲ್ಲಿ ಅಡುಗೆ ಮುಖ್ಯತಯಾರಕರಿದ್ದು ಸಂಪೂರ್ಣ ಜವಾಬ್ದಾರಿ ಅವರಿಗೆ ನೀಡುವ ಮೂಲಕ ಶಿಕ್ಷಕರ ಮೇಲಿನ ಒತ್ತಡ ಕಡಿಮೆ ಮಾಡಬಹುದು. ಸರ್ಕಾರ, ಮತ್ತು ಇಲಾಖೆಯ ಅಧಿಕಾರಿಗಳು ಕೂಡಲೇ ಈ ಆದೇಶ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ತಾಲೂಕಾಧ್ಯಕ್ಷ ಪಿ. ಕವಿತಾ, ಉಪಾಧ್ಯಕ್ಷೆ ಲತಾ, ಅಡುಗೆ ತಯಾರಕರಾದ ರೇಣುಕಾ, ಮಂಗಳಾ, ಕೊಟ್ರಮ್ಮ, ನಾಗಮ್ಮ ಇತರರು ಶಿರಸ್ತೇದಾರ ಆಲಂ ಬಾಷ ಇವರಿಗೆ ಮನವಿ ಪತ್ರ ಸಲ್ಲಿಸಿದರು.