ಕಬ್ಬು ಬೆಳೆಗಾರರಿಗೆ ಸರ್ಕಾರ-ಸಕ್ಕರೆ ಕಾರ್ಖಾನೆ ಪ್ರತಿ ಟನ್ ಕಬ್ಬಿಗೆ ತಲಾ 50 ರು. ಪಾವತಿಗೆ ಒತ್ತಾಯ ಕನ್ನಡಪ್ರಭ ವಾರ್ತೆ ಮಂಡ್ಯ
ರಾಜ್ಯದ ಸಕ್ಕರೆ ಕಾರ್ಖಾನೆಗಳಿಗೆ 2025-26ನೇ ಸಾಲಿನಲ್ಲಿ ಕಬ್ಬು ಸರಬರಾಜು ಮಾಡಿದ ರೈತರಿಗೆ ಸರ್ಕಾರ ಮತ್ತು ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ ತಲಾ 50 ರು ರಂತೆ, 100 ರು. ಆರ್ಥಿಕ ನೆರವು ನೀಡುವಂತೆ ಒತ್ತಾಯಿಸಿ ಭಾರತೀಯ ಕಿಸಾನ್ ಸಂಘದ ಕಾರ್‍ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.ನಗರದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಕಾರ್ಯಕರ್ತರು, ಜಿಲ್ಲಾಧಿಕಾರಿ ಸಹಾಯಕಿ ಡಾ.ರೋಹಿಣಿ ಅವರಿಗೆ ಮನವಿ ಸಲ್ಲಿಸಿ ಕಳೆದ 2025ರ ನವೆಂಬರ್ 8ರಂದು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಸರ್ಕಾರ ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ಕಬ್ಬು ಬೆಳೆಗಾರರು ಸಭೆಯಲ್ಲಿ ಪ್ರತಿ ಟನ್ ಕಬ್ಬಿಗೆ ಎಫ್‌ಆರ್‌ಪಿ ದರದ ಮೇಲೆ ಸರ್ಕಾರ, ಸಕ್ಕರೆ ಕಾರ್ಖಾನೆ ಮಾಲೀಕರು ತಲಾ 50 ರು. ಗಳಂತೆ ಸೇರಿಸಿ ಒಟ್ಟು 100 ರು. ಆರ್ಥಿಕ ನೆರವು ನೀಡುವುದಾಗಿ ನಿರ್ಧಾರ ಕೈಗೊಳ್ಳಲಾಗಿತ್ತು. ಅದರಂತೆ ಸರ್ಕಾರ ತನ್ನ ಪಾಲಿನ ಸುಮಾರು 300 ಕೋಟಿಗೂ ಹೆಚ್ಚಿನ ಹಣ ಈಗಾಗಲೇ ಬಿಡುಗಡೆ ಮಾಡಿದೆ ಎಂದು ಸಕ್ಕರೆ ಸಚಿವರು ತಿಳಿಸಿದ್ದಾರೆ.
ಸರ್ಕಾರದ ಪ್ರಸ್ತಾವ ಆಧರಿಸಿ ಕಬ್ಬು ಅಭಿವೃದ್ಧಿ ಆಯುಕ್ತರು ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮೆ ಮಾಡಲು ಜಿಲ್ಲಾಧಿಕಾರಿ ಕಚೇರಿಗೆ ಹಣ ಬಿಡುಗಡೆ ಮಾಡಿದೆ. ಆದರೆ, ಮಂಡ್ಯ ಜಿಲ್ಲಾ ವ್ಯಾಪ್ತಿ ಸಕ್ಕರೆ ಕಾರ್ಖಾನೆಗಳು ಕಬ್ಬು ಸರಬರಾಜು ಮಾಡಿದ ರೈತರಿಗೆ ಸರ್ಕಾರದ ಸಹಾಯಧನ ಇದುವರೆಗೂ ಬಿಡುಗಡೆ ಮಾಡಿಲ್ಲ ಎಂದು ದೂರಿದರು.ಈ ಸಹಾಯಧನ ಪಾವತಿಸಿದರೆ ರೈತರಿಗೆ ತುಂಬಾ ಅನುಕೂಲವಾಗುತ್ತದೆ. ಈ ಕೂಡಲೇ ಹಣ ಪಾವತಿ ಮಾಡಬೇಕೆಂದು ಆಗ್ರಹಿಸಿದರು. ಈ ವೇಳೆ ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಬಿ.ಪಿ. ಅಪ್ಪಾಜಿ, ಜೆ.ಕೆ. ಬಸವರಾಜು, ಶ್ರೀಧರ್, ಪ್ರಕಾಶ್, ಜಯರಾಮು, ರುದ್ರಪ್ಪ, ಸ್ವಾಮಿ, ನಾಗರಾಜು, ಗವಿರಂಗ, ಅಚ್ಯುತಣ್ಣ, ಹರ್ಷಿತ, ಶಿವಣ್ಣ ಇತರರು ಹಾಜರಿದ್ದರು.
---------------
4ಕೆಎಂಎನ್ ಡಿ21
ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರು ಭಾರತೀಯ ಕಿಸಾನ್ ಸಂಘದ ಕಾರ್‍ಯಕರ್ತರು ಪ್ರತಿಭಟನೆ ನಡೆಸಿದರು.