ಸಾರಾಂಶ
ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳರು ಕಾಂಗ್ರೆಸ್ ನಾಯಕರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಇದು ಬಿಜೆಪಿ ಸಂಸ್ಕೃತಿ ಎತ್ತಿ ತೋರಿಸುತ್ತಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ ಕಿಡಿಕಾರಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳರು ಕಾಂಗ್ರೆಸ್ ನಾಯಕರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಇದು ಬಿಜೆಪಿ ಸಂಸ್ಕೃತಿ ಎತ್ತಿ ತೋರಿಸುತ್ತಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ ಕಿಡಿಕಾರಿದರು.ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯತ್ನಾಳರು ಪದೇ ಪದೇ ತಮ್ಮ ನಾಯಕರ ವಿರುದ್ಧ ಹೇಳಿಕೆಗಳನ್ನು ನೀಡತ್ತ ಬಂದಿದ್ದು, ಈಗ ಕಾಂಗ್ರೆಸ್ ಪಕ್ಷದ ನಾಯಕರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ಒಬ್ಬ ಜನಪ್ರತಿನಿಧಿಯಾಗಿ ಯಾವ ರೀತಿ ಮಾತನಾಡಬೇಕು ಎಂಬುವುದು ಮೊದಲು ತಿಳಿದುಕೊಳ್ಳಬೇಕು. ಇಂತಹ ಸಂಸ್ಕೃತಿಯನ್ನು ಯತ್ನಾಳ ಮೈಗೂಡಿ ಸಿಕೊಂಡಿದ್ದಾರೆ. ಹೇಳಿಕೆಗಳನ್ನು ನೀಡುತ್ತ ಶಿಳ್ಳೆ, ಚಪ್ಪಾಳೆ ತಟ್ಟಿಸಿ ಕೊಳ್ಳುವುದೇ ಇದೊಂದು ದೊಡ್ಡ ಸಾಧನೆ ಎಂದೆ ತಿಳಿದುಕೊಂಡಿದ್ದಾರೆ. ಕಾಂಗ್ರೆಸ್ ನಾಯಕರ ಬಗ್ಗೆ ಮಾತನಾಡುವುದು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು.ಸಚಿವ ಆರ್.ಬಿ.ತಿಮ್ಮಾಪೂರ ಮಾತನಾಡಿ, ಬಿಜೆಪಿಯವರ ಹೀನ ಸಂಸ್ಕೃತಿಯವರಿದ್ದು ತ್ಯಾಗ ಬಲಿದಾನ ಮಾಡಿದಂತಹ ಗಾಂಧಿ ಕುಟುಂಬಕ್ಕೆ ಅವಮಾನ ಮಾಡುವಂತಹ ಹೇಳಿಕೆಗಳನ್ನು ನೀಡುತ್ತಿರುವುದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದರು.
ಶಾಸಕ ಜೆ.ಟಿ.ಪಾಟೀಲ ಮಾತನಾಡಿ, ಯತ್ನಾಳ ಅವರು ನನಗೆ ಆತ್ಮೀಯರು ಆಗಿದ್ದು, ನಮ್ಮ ಪಕ್ಷದ ನಾಯಕರ ವಿರುದ್ಧ ಅಸಂಬದ್ಧ ಮಾತುಗಳನ್ನಾಡುತ್ತಿದ್ದು ಸರಿಯಲ್ಲ. ಮಾತುಗಳನ್ನು ನಿಲ್ಲಿಸಬೇಕು ಎಂದು ಕಿವಿಮಾತು ಹೇಳಿದರು.ಗೋಷ್ಠಿಯಲ್ಲಿ ಶಾಸಕ ಎಚ್.ವೈ.ಮೇಟಿ ಇದ್ದರು.
ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುತ್ತಿರುವ ಶಾಸಕ ಯತ್ನಾಳ ಹಾಗೂ ಬಿಜೆಪಿ ಹೇಳಿಕೆ ಖಂಡಿಸಿ ಸೆ.24 ರಂದು ಬೆಳಗ್ಗೆ 11 ಗಂಟೆಗೆ ನಗರದ ಬಸವೇಶ್ವರ ವೃತ್ತದಲ್ಲಿ ಬೃಹತ್ ಪ್ರತಿಭಟನೆ ಆಯೋಜಿಸಿದ್ದೇವೆ.-ಎಸ್.ಜಿ.ನಂಜಯ್ಯನಮಠ,
ಕಾಂಗ್ರೆಸ್ ಜಿಲ್ಲಾಧ್ಯಕ್ಷರು.