ಜಮಖಂಡಿ: ತಾಲೂಕಿನ ತೊದಲಬಾಗಿ ಗ್ರಾಮ ದಿಂದ ಮಹರಾಷ್ಟ್ರದ ಮೀರಜ್‌ ನಗರಕ್ಕೆ ಬಸ್‌ ಓಡಿಸುವಂತೆ ಆಗ್ರಹಿಸಿ ಗುರುವಾರ ಪ್ರತಿಭಟನೆ ಹಾಗೂ ರಸ್ತೆ ತಡೆ ನಡೆಸಲಾಗುವುದೆಂದು ಗ್ರಾಮದ ಮುಖಂಡರು ತಿಳಿಸಿದರು.

ನಗರದ ಕಾನಿಪ ಪತ್ರಿಕಾಭವನದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಥಣಿ ಡಿಪೋಕ್ಕೆ ಸೇರಿದ ಮೀರಜ್‌ -ಬಿದರಿ ಬಸ್‌ ಚಾಲನೆಯಲ್ಲಿತ್ತು. ಕಳೆದ ಹಲವು ದಿನಗಳಿಂದ ಬಸ್‌ ಓಡಿಸುವುದನ್ನು ನಿಲ್ಲಿಸಲಾಗಿದೆ. ಈ ಕುರಿತು ಹಲವು ಬಾರಿ ಅಥಣಿ ಡಿಪೋ ಮ್ಯಾನೇಜರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ತೊದಲಬಾಗಿ, ಚಿಕ್ಕಲಕಿ, ಅಡಿಹುಡಿ, ಹಿರೇಪಡಸಲಗಿ, ಕನ್ನೊಳಿ, ಕಾಜಿಬೀಳಗಿ, ಸಾವಳಗಿ ಸೇರಿ ಸುಮಾರು 33 ಗ್ರಾಮಗಳ ರೋಗಿಗಳಿಗೆ ಈ ಬಸ್‌ನಿಂದ ಪ್ರಯೋಜನವಾಗಿತ್ತು.

ಈ ಭಾಗದ ಜನರು ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆಗೆ ಮಹಾರಾಷ್ಟ್ರದ ಮೀರಜ ನಗರವನ್ನು ಅವಲಂಬಿಸಿರುವುದರಿಂದ ಬಸ್‌ನ ಓಡಾಟ ಬಹಳ ಅವಶ್ಯಕವಾಗಿದೆ. ಗ್ರಾಮಗಳ ಜನರಿಗೆ ಅನುಕೂಲ ಕಲ್ಪಿಸಿಕೊಡುವಂತೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಪ್ರತಿಭಟನೆಯ ಮಾರ್ಗವನ್ನು ಅನುಸರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಬಸ್‌ ಬೆಳಗ್ಗೆ 7 ಗಂಟೆಗೆ ತೊದಲಬಾಗಿ ಗ್ರಾಮದಿಂದ ಅಥಣಿ ಮಾರ್ಗವಾಗಿ ಹೊರಟು 10.30ರ ಸುಮಾರಿಗೆ ಮಿರಜ್‌ಗೆ ತಲುಪುತ್ತಿತ್ತು. ಇದರಿಂತ ಆರೋಗ್ಯ ತಪಾಸಣೆಗೆಂದು ಹೋಗುವ ರೋಗಿಗಳಿಗೆ ಅನುಕೂಲವಾಗಿತ್ತು ಹಾಗೂ ಸಂಜೆ ಮಿರಜ್‌ ನಿಂದ 6 ಗಂಟೆಯ ಸುಮಾರಿಗೆ ಹೊರಟು ರಾತ್ರಿ 9.30ಕ್ಕೆ ತೊದಲಬಾಗಿ ಗ್ರಾಮಕ್ಕೆ ಸೇರುತ್ತಿತ್ತು. ಆದ್ದರಿಂದ ಇದೇ ಮಾರ್ಗದಲ್ಲಿ ಬಸ್‌ನ್ನು ಪುನ ಪ್ರಾರಂಭಿಸುವಂತೆ ಆಗ್ರಹಿಸಿ ಹೋರಾಟಕ್ಕೆ ಕರೆ ನೀಡಲಾಗಿದೆ ಎಂದರು.

ರಮೇಶ ಬಜಂತ್ರಿ, ಸಿದ್ದಪ್ಪ ಹೆಗೊಂಡ, ಸಾಬು ಗುಡ್ಡದ, ಶಿವಾನಂದ ಮಾಳಿ ಹಾಗೂ ಸಿದ್ದಪ್ಪ ಸೊನ್ನದ ಇದ್ದರು.