ರೈತ ವಿರೋಧಿ ನೀತಿ ಖಂಡಿಸಿ ನಾಳೆ ಪ್ರತಿಭಟನೆ

| Published : Jul 29 2025, 01:38 AM IST

ಸಾರಾಂಶ

ಕಳೆದ ಎರಡು ವರ್ಷಗಳಲ್ಲಿ ವಿದ್ಯಾನಿಧಿ, ಬೈಸಿಕಲ್‌ ಭಾಗ್ಯ, ರೈತರಿಗೆ ನೀಡಲಾಗುತ್ತಿದ್ದ ಹಾಲಿನ ಪ್ರೋತ್ಸಾಹ ಧನ ಸಂಪೂರ್ಣ ನಿಲ್ಲಿಸಲಾಗಿದೆ

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಭಾರತೀಯ ಜನತಾ ಪಕ್ಷದಿಂದ ಬೆಳಗಾವಿಯಲ್ಲಿ ಜು.30ರಂದು ಬೆಳಗ್ಗೆ 10ಕ್ಕೆ ಜಿಲ್ಲಾಧಿಕಾರಿ ಕಚೇರಿ ಮುಂಬಾಗದಲ್ಲಿ ರಾಣಿ ಚನ್ನಮ್ಮ ವೃತ್ತದಿಂದ ಚಕ್ಕಡಿ, ಟ್ಯ್ರಾಕ್ಟರ್‌ಗಳ ಮೂಲಕ ರ್‍ಯಾಲಿ ನಡೆಸಿ ಬೃಹತ್ ಪ್ರತಿಭಟನೆ ನಡೆಸಲಾಗುವುದು. ರೈತರು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಜಗದೀಶ ಬೂದಿಹಾಳ ಕರೆ ನೀಡಿದರು.

ನಗರದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಅವರು, ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆರಂಭಿಸಿದ್ದ ಮಹತ್ವಕಾಂಕ್ಷೆಯ ಹಲವಾರು ಯೋಜನೆಗಳನ್ನು ಪ್ರಸ್ತುತ ಸರ್ಕಾರ ಗ್ಯಾರಂಟಿ ಯೋಜನೆಗಳ ನೆಪದಲ್ಲಿ ಕಡಿತಗೊಳಿಸಿ ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ವಿದ್ಯಾನಿಧಿ, ಬೈಸಿಕಲ್‌ ಭಾಗ್ಯ, ರೈತರಿಗೆ ನೀಡಲಾಗುತ್ತಿದ್ದ ಹಾಲಿನ ಪ್ರೋತ್ಸಾಹ ಧನ ಸಂಪೂರ್ಣ ನಿಲ್ಲಿಸಲಾಗಿದೆ ಎಂದು ಕಿಡಿಕಾರಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಗುರು ಮೆಟಗುಡ್ಡ ಮಾತನಾಡಿ, ಬಿಜೆಪಿ ಆಡಳಿದ ಸಂದರ್ಭದಲ್ಲಿ ಕಿಸಾನ್ ಸಮ್ಮಾನ ಹೆಸರಿನಲ್ಲಿ ನೀಡಲಾಗುತ್ತಿದ್ದ ರಾಜ್ಯದ 52 ಲಕ್ಷ ರೈತರಿಗೆ ತಲಾ ₹4000 ನಿಲ್ಲಿಸಲಾಗಿದೆ. ರೈತರಿಗೆ ಪಂಪ್‌ಸೆಟ್ ಅಳವಡಿಸಲು ಬಿಜೆಪಿ ಸರ್ಕಾರದಲ್ಲಿ ₹25 ಸಾವಿರ ನಿಗದಪಡಿಸಿದ್ದು, ಪ್ರಸ್ತುತ ಭ್ರಷ್ಟ ಕಾಂಗ್ರೆಸ್ ಆಡಳಿತ ಅದನ್ನು ₹3 ಲಕ್ಷಕ್ಕೆ ಏರಿಕೆ ಮಾಡಿ ರೈತರಿಗೆ ಹೊರೆಯಾಗಿಸಿದೆ. ಅಲ್ಲದೇ ಬಿತ್ತನೆ ಬೀಜ ಪ್ರತಿ ಕ್ವಿಂಟಲ್‌ಗೆ ಶೇ.20 ಏರಿಕೆ. ಬರ ಪರಿಹಾರದ ಹೆಸರಿನಲ್ಲಿ ₹3,454 ಕೋಟಿ ಲೂಟಿ ಮಾಡುತ್ತಾ ಜನರನ್ನು ಹಗಲು ದರೋಡೆ ಮಾಡುತ್ತಿದೆ ಎಂದು ಗಂಭೀರವಾಗಿ ಅಪಾದಿಸಿದರು.

ರಾಜ್ಯದ ರೈತರಿಗೆ 6.30 ಲಕ್ಷ ಮೆಟ್ರಿಕ್ ಟನ್ ಯೂರಿಯಾ ರಸಗೊಬ್ಬರ ಅವಶ್ಯಕತೆ ಇದ್ದು, ಈಗಾಗಲೇ ಕೇಂದ್ರ ಸರ್ಕಾರ 8.73 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಪೂರೈಕೆ ಮಾಡಿರುತ್ತದೆ. ಉಳಿದ 2.43 ಲಕ್ಷ ಮೆಟ್ರಿಕ್ ಟನ್‌ ಅನ್ನು ಕಾಳ ಸಂತೆಯಲ್ಲಿ ಕಾಂಗ್ರೆಸ್ ಮಾರಾಟ ಮಾಡುತ್ತಿದೆ ಎಂದು ಆಕ್ರೋಶ ಹೊರಹಾಕಿದರು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 3400ಕ್ಕಿಂತ ಹೆಚ್ಚು ರೈತರು ಆತ್ಮ ಹತ್ಯೆಗೆ ಶರಣಾಗಿರುವುದು ದುರದೃಷ್ಟಕರ ಸಂಗತಿ. ಭೂಸಿರಿ ಯೋಜನಯಡಿ ಸಿರಧಾನ್ಯ ಬೆಳೆಯುವ ರೈತರಿಗೆ ಪ್ರತಿ ಹೇಕ್ಟರ್‌ಗೆ ನೀಡುವ ₹10000 ಪ್ರೋತ್ಸಾಹ ಧನವನ್ನು ನಿಲ್ಲಿಸಲಾಗಿದೆ ಎಂದರು.

ಹಾವೇರಿ ಮತ್ತು ರಾಣೇಬೆನ್ನೂರಿನಲ್ಲಿ ರಸಗೊಬ್ಬರ ಖರೀದಿಸಲು ಆಗಮಿಸಿದ ರೈತರ ಮೇಲೆ ಪೊಲೀಸರಿಂದ ಲಾಠಿ ಚಾರ್ಜ್ ಮಾಡಿಸಿದ್ದು ಖಂಡನೀಯವಾಗಿದೆ. ಈಗಾಗಲೇ ರಾಜ್ಯದಲ್ಲಿ ಅವೈಜ್ಞಾನಿವಾಗಿ ರಸಗೊಬ್ಬರ ದಾಸ್ತಾನು ಶೇಖರಣೆ ಮಾಡಿದ್ದರಿಂದ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ರೈತರಿಗೆ ರಸಗೊಬ್ಬರದ ಅಭಾವ ಉಂಟಾಗಿದ್ದು ಕೂಡಲೇ ರೈತರಿಗೆ ವಿತರಿಸುವಂತೆ ಆಗ್ರಹಿಸಿದರು.

ಸರ್ಕಾರ ಸೇರಿದಂತೆ ಕೃಷಿ ಸಚಿವರು ಇಲಾಖೆ ಅಧಿಕಾರಿಗಳು ಸಂಪೂರ್ಣ ನಿಷ್ಕ್ರಿಯಗೊಂಡಿದ್ದಾರೆ. ಇದೇ ರೀತಿ ರಾಜ್ಯದಲ್ಲಿನ ಹಲವಾರು ರೈತ ವಿರೋಧಿ ನೀತಿಯನ್ನು ಖಂಡಿಸಿ ಜು.30ರಂದು ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಪ್ರತಿಭಟನೆಯಲ್ಲಿ ಜಿಲ್ಲೆಯ ಚಿಕ್ಕೋಡಿ, ಬೆಳಗಾವಿ ನಗರ, ಗ್ರಾಮಾಂತರ, ಸೇರಿದಂತೆ ವಿವಿಧ ರೈತ ಸಂಘಟನೆಗಳು, ಜಿಲ್ಲೆಯ ಬಿಜೆಪಿಯ ಹಾಲಿ, ಮಾಜಿ ಶಾಸಕರು, ಪಕ್ಷದ ಪ್ರಮುಖರು, ಪದಾಧಿಕಾರಿಗಳು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಸಬೇಕೆಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಸುಭಾಶ ತುರಮರಿ, ಬಿಜೆಪಿ ಜಿಲ್ಲಾ ಸಹಕಾರ ಪ್ರಕೋಷ್ಠದ ಸಂಚಾಲಕ ಸುನೀಲ ಮರಕುಂಬಿ, ಜಿಲ್ಲಾ ಮಾಧ್ಯಮ ಪ್ರಮುಖ ಸಚಿನ್ ಕಡಿ, ಒಬಿಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ ಹಡಪದ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಲಕ್ಕಪ್ಪ ಕಾರಗಿ, ವಿಶಾಲ ಬೋಗುರ, ಪುರಸಭೆ ಸದಸ್ಯ ಸಾಗರ ಭಾವಿಮನಿ, ಆಕಾಶ ಮಲಬನ್ನವರ ಇತರರು ಇದ್ದರು.