ರೈತರ ಸಭೆ ನಡೆಸದಿದ್ದರೆ ಸಕ್ಕರೆ ಕಾರ್ಖಾನೆ ಎದುರು ಪ್ರತಿಭಟನೆ ಎಚ್ಚರಿಕೆ

| Published : Jan 24 2025, 12:46 AM IST

ರೈತರ ಸಭೆ ನಡೆಸದಿದ್ದರೆ ಸಕ್ಕರೆ ಕಾರ್ಖಾನೆ ಎದುರು ಪ್ರತಿಭಟನೆ ಎಚ್ಚರಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ರೈತರ ಪ್ರತಿ ಟನ್ ಕಬ್ಬಿಗೆ ₹3 ಸಾವಿರ ಹಾಗೂ ರೈತರಿಂದ ನೇರವಾಗಿ ಮೆಕ್ಕೆಜೋಳ ಖರೀದಿ ಮಾಡುವ ಕುರಿತು ಕಳೆದ ಡಿಸೆಂಬರ್‌ನಲ್ಲಿ ಗಂಗಾಪುರ ವಿಜಯನಗರ ಸಕ್ಕರೆ ಕಾರ್ಖಾನೆಯ ಎದುರಿನಲ್ಲಿ ಪ್ರತಿಭಟನೆ ಮಾಡಲಾಗಿತ್ತು.

ಮುಂಡರಗಿ: ರೈತರಿಗೆ ನೀಡಿದ ಭರವಸೆಯಂತೆ ಗಂಗಾಪುರ ವಿಜಯನಗರ ಶುಗರ್ ಕಂಪನಿಯವರು ರೈತರ ಜತೆ ಸಭೆ ನಡೆಸಬೇಕು. ಇಲ್ಲದಿದ್ದರೆ ಕರ್ನಾಟಕ ರಾಜ್ಯ ರೈತ ಸಂಘದಿಂದ ಕಾರ್ಖಾನೆಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು ಎಂದು ರೈತರು ಎಚ್ಚರಿಸಿದ್ದಾರೆ.

ಈ ಕುರಿತು ಗುರುವಾರ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು. ರೈತರ ಪ್ರತಿ ಟನ್ ಕಬ್ಬಿಗೆ ₹3 ಸಾವಿರ ಹಾಗೂ ರೈತರಿಂದ ನೇರವಾಗಿ ಮೆಕ್ಕೆಜೋಳ ಖರೀದಿ ಮಾಡುವ ಕುರಿತು ಕಳೆದ ಡಿಸೆಂಬರ್‌ನಲ್ಲಿ ಗಂಗಾಪುರ ವಿಜಯನಗರ ಸಕ್ಕರೆ ಕಾರ್ಖಾನೆಯ ಎದುರಿನಲ್ಲಿ ಪ್ರತಿಭಟನೆ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಸಕ್ಕರೆ ಕಾರ್ಖಾನೆಯ ಎಂಡಿ ಹಾಗೂ ಗದಗ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಮುಂಡರಗಿ ತಹಸೀಲ್ದಾರ್ ಕಾರ್ಯಾಲಯದಲ್ಲಿ ಸಭೆ ನಡೆಸಲು ಒತ್ತಾಯಿಸಲಾಗಿತ್ತು. ಅಂದು ಸಭೆ ನಡೆಸುವುದಾಗಿ ಕಾರ್ಖಾನೆಯವರು ಮೌಖಿಕವಾಗಿ ಭರವಸೆ ನೀಡಿದ್ದರಿಂದಾಗಿ ಪ್ರತಿಭಟನೆ ಹಿಂಪಡೆಯಲಾಗಿತ್ತು.ಆದರೆ ಕಾರ್ಖಾನೆಯವರು ಇದುವರೆಗೂ ಯಾವುದೇ ಸಭೆ ನಡೆಸಿಲ್ಲ. ಹೀಗಾಗಿ ಫೆ. 5ರೊಳಗಾಗಿ ತಹಸೀಲ್ದಾರ್‌ ಕಾರ್ಯಾಲಯದಲ್ಲಿ ಜಿಲ್ಲಾಧಿಕಾರಿ ಹಾಗೂ ಕಾರ್ಖಾನೆ ಎಂಡಿ ಅವರನ್ನು ಕರೆಸಿ, ರೈತರ ಸಮ್ಮುಖದಲ್ಲಿ ಸಭೆ ನಡೆಸದೇ ಹೋದಲ್ಲಿ ಗಂಗಾಪುರ ವಿಜಯನಗರ ಶುಗರ್ ಪ್ರೈವೇಟ್ ಲಿಮಿಟೆಡ್ ಎದುರಿಗೆ ಪ್ರತಿಭಟನೆ ನಡೆಸಿ, ಕಾರ್ಖಾನೆಗೆ ಬೀಗ ಜಡಿಯಲಾಗುವುದು ಎಂದು ರೈತರು ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.

ಶಿವಾನಂದ ಇಟಗಿ, ಎಚ್.ಎನ್. ಹಂದ್ರಾಳ, ಮಂಜುನಾಥ ಹುಬ್ಬಳ್ಳಿ, ಅಶೋಕ ಬನ್ನಿಕೊಪ್ಪ, ಚಂದ್ರಪ್ಪ ಗದ್ದಿ, ಈರಣ್ಣ ಗಡಾದ, ಚಂದ್ರಪ್ಪ ಬಳ್ಳಾರಿ, ದ್ಯಾಮಪ್ಪ ವಾಲಿಕಾರ ಉಪಸ್ಥಿತರಿದ್ದರು.