ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯನ್ನು ಖಂಡಿಸಿ ಭಾರತದ ಕೆಲವು ಮುಸ್ಲಿಮರು ಪ್ರತಿಭಟನೆ ನಡೆಸುತ್ತಿರುವುದಕ್ಕೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಿಜವಾದ ರಾಷ್ಟ್ರಭಕ್ತ ಮುಸಲ್ಮಾನರು ಎಂದಿಗೂ ರಾಷ್ಟ್ರದ್ರೋಹಿ ದೇಶದ ಪರವಾಗಿ ನಿಲ್ಲಲು ಸಾಧ್ಯವಿಲ್ಲ ಎಂದು ಹೇಳಿದರು.ವಿಶ್ವದ ಹಲವು ಮುಸ್ಲಿಂ ರಾಷ್ಟ್ರಗಳಲ್ಲಿ ಅಶಾಂತಿ ಮತ್ತು ಸಂಘರ್ಷದ ವಾತಾವರಣವಿದ್ದು, ಮುಸ್ಲಿಮರು ಪರಸ್ಪರ ಕಾದಾಡುತ್ತಿದ್ದಾರೆ. ಆದರೆ, ಭಾರತವು ಮುಸ್ಲಿಮರಿಗೆ ಅತ್ಯಂತ ಸುರಕ್ಷಿತವಾದ ದೇಶವಾಗಿದೆ. ಇಲ್ಲಿ ಅವರು ಯಾವುದೇ ಆತಂಕವಿಲ್ಲದೆ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಭಾರತ ವಿರೋಧಿ ಧೋರಣೆ ಹೊಂದಿದ್ದ ಖಮೇನಿ ಪರವಾಗಿ ಬೀದಿಗೆ ಇಳಿಯುವುದು ಸರಿಯಲ್ಲ ಎಂದು ಹೇಳಿದರು.
ಇರಾನ್ ಕೇವಲ ಭಾರತದ ವ್ಯಾಪಾರ ಪಾಲುದಾರನಾಗಿದೆಯೇ ಹೊರತು, ರಾಜತಾಂತ್ರಿಕವಾಗಿ ಯಾವಾಗಲೂ ಪಾಕಿಸ್ತಾನದ ಪರವಾಗಿಯೇ ನಿಂತಿದೆ. ಮುಂಬೈ ಬಾಂಬ್ ದಾಳಿಯ ಸಂದರ್ಭದಲ್ಲಿ ಇರಾನ್ ಪಾಕಿಸ್ತಾನಕ್ಕೆ ಬೆಂಬಲ ನೀಡಿತ್ತು. ಅಲ್ಲದೆ, 2017ರಲ್ಲಿ ಕಾಶ್ಮೀರದ ವಿಚಾರದಲ್ಲಿ ಭಾರತದ ವಿರುದ್ಧ ಹೇಳಿಕೆ ನೀಡಿದ್ದ ಖಮೇನಿ, 2019ರಲ್ಲಿ 370ನೇ ವಿಧಿ ರದ್ದಾದಾಗಲೂ ಅಸಮಾಧಾನ ವ್ಯಕ್ತಪಡಿಸಿದ್ದರು. 2020ರ ದೆಹಲಿ ಗಲಭೆಯ ಸಂದರ್ಭದಲ್ಲಿ ಭಾರತದಲ್ಲಿ ಮುಸ್ಲಿಮರ ಮಾರಣಹೋಮ ನಡೆಯುತ್ತಿದೆ ಎಂದು ಸುಳ್ಳು ಆರೋಪ ಮಾಡಿದ್ದರು, ಅಂತಹ ವ್ಯಕ್ತಿ ಪರವಾಗಿ ಕೆಲ ಮುಸ್ಲಿಮರು ಹೋರಾಟ ಮಾಡುತ್ತಿರುವುದು ಸರಿಯಿಲ್ಲ.ಈ ಹಿಂದೆ ಪೆಹಲ್ಗಾಂ ಅಟ್ಯಾಕ್‌ನಲ್ಲಿ ಮೃತಪಟ್ಟಾಗ ಮೌನ ವಹಿಸಿದ್ದವರು ಯಾರೂ ಸಹ ಭಯೋತ್ಪಾದಕರ ವಿರುದ್ದ ಹೋರಾಟ ಮಾಡಲಿಲ್ಲ, ಇಂದು ಇರಾನ್ ನಾಯಕನಿಗಾಗಿ ಸಾವಿರಾರು ಸಂಖ್ಯೆಯಲ್ಲಿ ಸೇರುತ್ತಿರುವುದು ದುರದೃಷ್ಟಕರ. ಭಾರತದ ಅನ್ನ ತಿಂದು ಬೆಳೆದವರು ಈ ಮಣ್ಣಿನ ಜನರ ಪರವಾಗಿ ನಿಲ್ಲಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ಮಟ್ಟದಲ್ಲಿ ಶಾಂತಿಗಾಗಿ ಶ್ರಮಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಮತ್ತು ಕೆಲವು ಮುಸ್ಲಿಂ ಸಂಘಟನೆಗಳು ಮೋದಿಯವರು ಹೋಗಿ ಇಸ್ರೇಲ್ ಬಳಿ ಯುದ್ದ ನಿಲ್ಲಿಸಲು ಹೇಳಬೇಕು ಎನ್ನುತ್ತಿದ್ದಾರೆ. ಆನೇಕ ವಿಚಾರಗಳಲ್ಲಿ ಇಸ್ರೇಲ್ ನಮ್ಮ ಪರವಾಗಿಯೇ ಇದೆ ಎಂದರು
ಪಾಕಿಸ್ತಾನದಂತಹ ದೇಶಗಳಲ್ಲಿ ಮಸೀದಿಗಳ ಮೇಲೆಯೇ ಬಾಂಬ್ ದಾಳಿಗಳು ನಡೆಯುತ್ತವೆ, ಆದರೆ ಭಾರತದಲ್ಲಿ ಮಸೀದಿಗಳ ಮೇಲೆ ಇದುವರೆಗೂ ಸಹ ಬಾಂಬ್ ಬಿದ್ದ ಉದಾಹಾರಣೆಗಳಿಲ್ಲ. ಅಷ್ಟರ ಮಟ್ಟಿಗೆ ಮುಸ್ಲಿಮರಿಗೆ ಭಾರತ ದೇಶದಲ್ಲಿ ಭದ್ರತೆ ಇದೆ. ಮುಸ್ಲಿಮರು ದೇಶದ ಭದ್ರತೆಯನ್ನು ಗೌರವಿಸಬೇಕು ಮತ್ತು ದೇಶದ ಪರವಾಗಿ ನಿಲ್ಲಬೇಕು ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸಂಪೂರ್ಣ ದಿವಾಳಿ
ಶಿವಮೊಗ್ಗ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ ಎಂದು ರಾಷ್ಟ್ರಭಕ್ತರ ಬಳಗದ ಸಂಚಾಲಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದ ಆಡಳಿತದಲ್ಲಿ ಸಂಪೂರ್ಣ ವಿಫಲವಾಗಿದ್ದು, ಆರ್ಥಿಕವಾಗಿಯೂ ದಿವಾಳಿಯಾಗಿದೆ. ಇದಕ್ಕೆ ತಾಜಾ ಉದಾಹರಣೆ ಎಂದರೆ ರಾಜ್ಯದ ಗುತ್ತಿಗೆದಾರರಿಗೆ ಕಾಮಗಾರಿಗಳ ಪೂರ್ಣಹಣವನ್ನು ಪಾವತಿಸಲು ಆಗದಷ್ಟು ದಿವಾಳಿಯಾಗಿದೆ. ಗುತ್ತಿಗೆದಾರರು ಹಲವು ಭಾರಿ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದರೂ ಸಹ ಮುಖ್ಯಮಂತ್ರಿಗಳು ನಿಸ್ಸಾಹಯಕರಾಗಿದ್ದಾರೆ ಎಂದು ಟೀಕಿಸಿದರು.
ಲೋಕೋಪಯೋಗಿ ಇಲಾಖೆ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಗುತ್ತಿಗೆದಾರರಿಗೆ ಸುಮಾರು ೩೭,೦೦೦ ಕೋಟಿ ಹಣ ಪಾವತಿಯಾಗಬೇಕಾಗಿದೆ. ಈ ಹಣ ಬಿಡುಗಡೆಯಾಗದೆ ಗುತ್ತಿಗೆದಾರರು ಅತ್ಯಂತ ಸಂಕಷ್ಟಕ್ಕೆ ತಲುಪಿದ್ದು, ಸರ್ಕಾರದ ಮೇಲೆ ನಂಬಿಕೆಯನ್ನೇ ಕಳೆದುಕೊಂಡಿದ್ದಾರೆ. ಹಣಬರುವ ಗ್ಯಾರೆಂಟಿಯೂ ಇಲ್ಲವಾಗಿ ಟೆಂಡರ್ ಹಾಕುವುದನ್ನೇ ನಿಲ್ಲಿಸಿಬಿಟ್ಟಿದ್ದಾರೆ. ಇದಕ್ಕೆ ಶಿವಮೊಗ್ಗದ್ದೇ ಉದಾಹರಣೆ ಎಂದರೆ ಯಲವಟ್ಟಿ ಕೆರೆ ಅಭಿವೃದ್ಧಿ ಕಾಮಗಾರಿಗೆ ಯಾವ ಗುತ್ತಿಗೆದಾರನು ಟೆಂಡರ್ ಹಾಕಿಲ್ಲ ಎಂದರು.ರಾಜ್ಯ ಸರ್ಕಾರ ಈ ನಡುವೆ ಮತ್ತೊಂದು ಹೊಸ ಪದ್ಧತಿಯನ್ನು ಜಾರಿಗೆ ತರಲು ಹೊರಟಿದೆ. ರಾಜ್ಯದ ಎಲ್ಲಾ ಟೆಂಡರ್ ಪ್ರಕ್ರಿಯೆಗಳು ಕೇಂದ್ರೀಕೃತ ವ್ಯವಸ್ಥೆಯಲ್ಲಿಯೇ ಆಗಬೇಕು ಎಂದಿದ್ದಾರೆ. ಇದು ಸ್ಥಳೀಯ ಗುತ್ತಿಗೆದಾರರಿಗೆ ಮಾರಕವಾಗುತ್ತದೆ. ಅಷ್ಟೇ ಅಲ್ಲ, ಇದರಲ್ಲಿ ಬೇರೆ ರಾಜ್ಯದ ಗುತ್ತಿಗೆದಾರರು ಬಂದರೆ ರಾಜ್ಯದ ಗುತ್ತಿಗೆದಾರರಿಗೆ ಅವಕಾಶವೇ ಇಲ್ಲದಂತಾಗಿ ಕನ್ನಡಿಗರಿಗೆ ತೊಂದರೆಯಾಗುತ್ತದೆ. ಮತ್ತು ಕೇಂದ್ರೀಕೃತ ವ್ಯವಸ್ಥೆಯಾದರೆ ಭ್ರಷ್ಟಾಚಾರವೇ ಒಟ್ಟುಗೂಡಿದಂತಾಗುತ್ತದೆ ಎಂದರು.
ಈಗಾಗಲೇ ರಾಜ್ಯದ ಗುತ್ತಿಗೆದಾರರು ಮಾ.೩ರಂದು ರಾಜ್ಯಮಟ್ಟದಲ್ಲಿ ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ. ಸರ್ಕಾರ ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ಹಿಂದಿನ ಸರ್ಕಾರದ ಮೇಲೆ ಸುಳ್ಳು ಆರೋಪಗಳನ್ನು ಮಾಡಿ, ಅಧಿಕಾರಕ್ಕೆ ಬಂದ ಈಗಿನ ಕಾಂಗ್ರೆಸ್ ಸರ್ಕಾರ ತಾನೇ ನೇಮಿಸಿದ ನ್ಯಾಯಮೂರ್ತಿ ನಾಗಮೋಹನ್‌ದಾಸ್ ತನಿಖಾ ಆಯೋಗ ಕಾಂಗ್ರೆಸ್ ಮಾಡಿದ ಆರೋಪದಲ್ಲಿ ಯಾವುದೇ ಹುರುಳಿಲ್ಲವೆಂದು ನೀಡಿರುವ ವರದಿಯನ್ನು ಕಣ್ಣುತೆರೆದು ನೋಡುವ ಕೆಲಸವನ್ನು ಮಾಡಿಲ್ಲ. ಹಿಂದಿನ ಸರ್ಕಾರದಿಂದ ತಪ್ಪಾಗಿದೆ ಎಂದು ಹೇಳುತ್ತಲೇ ಇರುವುದು ವಿಪರ್ಯಾಸ ಎಂದರು.ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕೆ.ಈ. ಕಾಂತೇಶ್, ಮಹಾಲಿಂಗಯ್ಯಶಾಸ್ತ್ರೀ, ಮೋಹನ್ ಜಾದವ್, ಮಧುಸೂದನ್, ಕುಬೇರಪ್ಪ, ಚನ್ನಬಸಪ್ಪ ಸೇರಿದಂತೆ ಹಲವರಿದ್ದರು.