ಬಾಂಗ್ಲಾ ದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ಮೇಲಿನ ನಿರಂತರ ಹತ್ಯೆಯನ್ನು ಖಂಡಿಸಿ ಹಿಂದೂ ಜಾಗರಣ ವೇದಿಕೆ ಸದಸ್ಯರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಎಸ್.ರೇಣುಕಾ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ಹಾನಗಲ್ಲ: ಬಾಂಗ್ಲಾ ದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ಮೇಲಿನ ನಿರಂತರ ಹತ್ಯೆಯನ್ನು ಖಂಡಿಸಿ ಹಿಂದೂ ಜಾಗರಣ ವೇದಿಕೆ ಸದಸ್ಯರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಎಸ್.ರೇಣುಕಾ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಹಿಂಜಾವೇ ಜಿಲ್ಲಾ ಸಂಚಾಲಕ ಹರೀಶ ಹಾನಗಲ್ಲ, ಭಾರತದ ನೆರವಿನಿಂದಲೇ ಸ್ವಾತಂತ್ರ್ಯ ಹೊಂದಿದ್ದ ಬಾಂಗ್ಲಾ ದೇಶದ ಜನತೆಗೆ ಹಿಂದೂಗಳ ಮೇಲಿನ ನರಮೇಧವನ್ನು ನಿಲ್ಲಿಸುವಂತೆ ಕೇಂದ್ರ ಸರ್ಕಾರ ತನ್ನದೇ ಭಾಷೆಯಲ್ಲಿ ಉತ್ತರ ನೀಡಬೇಕು. ಇದುವರೆಗೆ ಬಾಂಗ್ಲಾ ದೇಶದೊಂದಿಗೆ ಹೊಂದಿದ್ದ ವಿದೇಶಾಂಗ ಸಂಬಂಧ ಮತ್ತು ಭಾರತ ನೀಡುತ್ತಿರುವ ಸಹಕಾರ, ವಾಣಿಜ್ಯ ವ್ಯವಹಾರಗಳನ್ನು ಕೂಡಲೇ ಸ್ಥಗಿತಗೊಳಿಸಬೇಕು. ಇಂಥ ಕ್ರಮಗಳ ಮೂಲಕ ಹಿಂದೂಗಳ ಮೇಲಿನ ಹತ್ಯೆಗೆ ಉತ್ತರ ನೀಡಬೇಕು. ಬಾಂಗ್ಲಾದಲ್ಲಿ ಹಿಂದೂಗಳ ಪರಿಸ್ಥಿತಿ ದಯನೀಯ ಸ್ಥಿತಿಗೆ ತಲುಪಿದ್ದು, ಅಲ್ಪಸಂಖ್ಯಾತ ಭಾರತೀಯರ ಜೀವಕ್ಕೆ ಭದ್ರತೆ ಇಲ್ಲದಂತಾಗಿದೆ. ಭಾರತ ಸರ್ಕಾರ ಬಾಂಗ್ಲಾ ದೇಶಕ್ಕೆ ನೀಡುತ್ತಿರುವ ಔಷಧ ಹಾಗೂ ಆಹಾರ ಸಾಮಗ್ರಿಗಳ ಸರಬರಾಜನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು.ಭಾರತದಿಂದ ರಫ್ತು ಆಗುತ್ತಿರುವ ಅಗತ್ಯ ದಿನಸಿ ಸಾಮಗ್ರಿಗಳನ್ನು ನಿಲ್ಲಿಸಿ ಭಾರತೀಯರ ಶಕ್ತಿಯನ್ನು ಪ್ರದರ್ಶಿಸಬೇಕು. ಬಾಂಗ್ಲಾ ದೇಶದ ಕ್ರೀಡಾಪಟುಗಳಿಗೆ ಭಾರತದಲ್ಲಿ ಆಡುವ ಅವಕಾಶಗಳನ್ನು ನೀಡಬಾರದು. ಬಾಂಗ್ಲಾದಿಂದ ಆಮದಾಗುವ ವಸ್ತುಗಳ ಮೇಲೆ ನಿಷೇಧ ಹೇರಬೇಕು. ತನ್ಮೂಲಕ ಹಿಂದೂಗಳ ವಿಷಯದಲ್ಲಿ ಆಟಾಟೋಪ ಪ್ರದರ್ಶಿಸುತ್ತಿರುವ ಬಾಂಗ್ಲಾದ ಜಿಹಾದಿಗಳಿಗೆ ತಕ್ಕ ಪಾಠ ಕಲಿಸಬೇಕು. ಇಲ್ಲಿ ಅಕ್ರಮವಾಗಿ ನೆಲೆಸಿರುವ ಜಿಹಾದಿಗಳನ್ನು ಪತ್ತೆ ಮಾಡಿ, ಬಾಂಗ್ಲಾ ದೇಶಕ್ಕೆ ಗಡಿಪಾರು ಮಾಡಬೇಕು. ಭಾರತೀಯರ ರಕ್ಷಣೆಗೆ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ರಾಷ್ಟ್ರಪತಿಗಳನ್ನು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಲಿಖಿತ ಹದಳಗಿ, ನಾಗರಾಜ ಹೆಬ್ಬಾರ, ಹರೀಶ ತಳವಾರ, ಮನೋಜ ಕಲಾಲ, ರವಿಚಂದ್ರ ಪುರೋಹಿತ, ಗಿರೀಶ ಕರಿದ್ಯಾವಣ್ಣನವರ, ಸಂತೋಷ ಭಜಂತ್ರಿ, ಸಚಿನ್ ರಾಮಣ್ಣನವರ, ರಾಮು ಯಳ್ಳೂರ, ರವಿ ಪುರದ, ಬಸವರಾಜ ಮಟ್ಟಿಮನಿ, ರಾಮಚಂದ್ರ ಬಂಕಾಪೂರ, ಬಸವರಾಜ ಹಾದಿಮನಿ, ಶಿವು ಮೇದಾರ, ಕಾರ್ತಿಕ ತುಮರಿಕೊಪ್ಪ, ಚಿನ್ಮಯ ಸುಗಂಧಿ, ಸಂತೋಷ ಮೆಹರವಾಡೆ, ಶಿವನಾಗ ನೀರಲಗಿ, ಸಿದ್ದಲಿಂಗೇಶ ತುಪ್ಪದ, ವಿಜಯ ಮಾಗನೂರ, ಪ್ರವೀಣ ಉಳ್ಳಿಕಾಶಿ, ಉದಯ ಸವಣೂರ, ಶಂಕ್ರಯ್ಯ ಕಟ್ಟಿಮಠ, ಸಚಿನ್ ಗೌಳಿ ಇತರರು ಉಪಸ್ಥಿತರಿದ್ದರು.