ನಟಿ ರನ್ಯಾಗೆ ಫೋಟೋಕಾಲ್‌: ಪೇದೆಗಳ ವಿಚಾರಣೆ

| Published : Mar 15 2025, 01:01 AM IST

ಸಾರಾಂಶ

ನಟಿ ರನ್ಯಾರಾವ್ ಚಿನ್ನ ಕಳ್ಳ ಸಾಗಣೆ ಕೃತ್ಯದಲ್ಲಿ ಶಿಷ್ಟಾಚಾರ (ಪ್ರೋಟೋಕಾಲ್‌) ನೀಡಿದ ಆರೋಪ ಸಂಬಂಧ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೂವರು ಕಾನ್‌ಸ್ಟೇಬಲ್‌ಗಳನ್ನು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್‌ ಗುಪ್ತಾ ನೇತೃತ್ವದ ತನಿಖಾ ತಂಡ ಶುಕ್ರವಾರ ವಿಚಾರಣೆ ನಡೆಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಟಿ ರನ್ಯಾರಾವ್ ಚಿನ್ನ ಕಳ್ಳ ಸಾಗಣೆ ಕೃತ್ಯದಲ್ಲಿ ಶಿಷ್ಟಾಚಾರ (ಪ್ರೋಟೋಕಾಲ್‌) ನೀಡಿದ ಆರೋಪ ಸಂಬಂಧ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೂವರು ಕಾನ್‌ಸ್ಟೇಬಲ್‌ಗಳನ್ನು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್‌ ಗುಪ್ತಾ ನೇತೃತ್ವದ ತನಿಖಾ ತಂಡ ಶುಕ್ರವಾರ ವಿಚಾರಣೆ ನಡೆಸಿದೆ.

ವಿಮಾನ ನಿಲ್ದಾಣ ಶಿಷ್ಟಾಚಾರ ವಿಭಾಗದ ಕಚೇರಿಗೆ ಬೆಳಗ್ಗೆ ತೆರಳಿದ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್‌ ಗುಪ್ತಾ, ಡಿಐಜಿ ವಂಶಿಕೃಷ್ಣ ನೇತೃತ್ವದ ತಂಡವು, ವಿಮಾನ ನಿಲ್ದಾಣ ಠಾಣೆ ಹೆಡ್‌ ಕಾನ್‌ಸ್ಟೆಬಲ್‌ ಬಸವರಾಜು, ಗುಪ್ತದಳದ ಧನುಷ್‌ ಕುಮಾರ್ ಹಾಗೂ ಮಹಾಂತೇಶ್‌ ಅವರನ್ನು ವಿಚಾರಣೆಗೊಳಪಡಿಸಿ ಹೇಳಿಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ತಾವು ವಿಮಾನ ನಿಲ್ದಾಣಕ್ಕೆ ಆಗಮಿಸುವ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಕುಟುಂಬ ಸದಸ್ಯರಿಗೆ ಅಧಿಕಾರಿಗಳ ಸೂಚನೆ ಮೇರೆಗೆ ಶಿಷ್ಟಾಚಾರ ಸೌಲಭ್ಯ ನೀಡಿದ್ದೇವೆ. ಅಂತೆಯೇ ಈ ಹಿಂದೆ ತಮ್ಮ ಕುಟುಂಬದವರು ಹಾಗೂ ಸ್ನೇಹಿತರಿಗೆ ಶಿಷ್ಟಾಚಾರ ಕಲ್ಪಿಸುವಂತೆ ಡಿಜಿಪಿ ರಾಮಚಂದ್ರರಾವ್‌ ಹೇಳಿದ್ದರು. ಹಾಗಾಗಿ ಡಿಜಿಪಿ ಅವರ ಪುತ್ರಿ ಎಂಬ ಕಾರಣಕ್ಕೆ ರನ್ಯಾರಾವ್‌ ಅವರಿಗೆ ಶಿಷ್ಟಾಚಾರದಲ್ಲಿ ಕರೆ ತರಲು ಹೋಗಿದ್ದಾಗಿ ಎಚ್‌.ಸಿ.ಬಸವರಾಜು ಪುನರುಚ್ಚರಿಸಿದ್ದಾರೆ ಎನ್ನಲಾಗಿದೆ.

ನನಗೆ ಮಾ.3 ರಂದು ಸಂಜೆ ದುಬೈನಿಂದಲೇ ರನ್ಯಾರಾವ್‌ ಕರೆ ಮಾಡಿ ಗ್ರೀನ್ ಚಾನಲ್‌ (ತಪಾಸಣೆ ಇಲ್ಲದೆ) ಮೂಲಕ ಕರೆದೊಯ್ಯುವಂತೆ ಸೂಚಿಸಿದ್ದರು. ಹೀಗಾಗಿ ಅವರನ್ನು ಕರೆದುಕೊಂಡು ಬರಲು ಹೋಗಿದ್ದೆ. ಆ ವೇಳೆ ತನ್ನೊಂದಿಗೆ ಸಹೋದ್ಯೋಗಿ ಗುಪ್ತದಳದ ಕಾನ್‌ಸ್ಟೇಬಲ್ ಧನುಷ್ ಸಹ ಇದ್ದರು ಎಂದು ಬಸವರಾಜು ಹೇಳಿದ್ದಾರೆ ಎನ್ನಲಾಗಿದೆ.

ಚಿನ್ನ ಕಳ್ಳ ಸಾಗಣೆ ಪ್ರಕರಣ ಸಂಬಂಧ ಡಿಇಆರ್‌ ವಿಚಾರಣೆ ವೇಳೆ ಸಹ ಡಿಜಿಪಿ ರಾಮಚಂದ್ರರಾವ್ ಹೆಸರು ಬಸವರಾಜು ಉಲ್ಲೇಖಿಸಿದ್ದರು. ಇನ್ನು ಚಿನ್ನ ಕಳ್ಳ ಸಾಗಣೆ ಕೃತ್ಯದ ಬಗ್ಗೆ ತಮಗೇನೂ ತಿಳಿದಿಲ್ಲ ಎಂದು ಕಾನ್‌ಸ್ಟೆಬಲ್‌ಗಳಾದ ಧನುಷ್ ಹಾಗೂ ಮಹಾಂತೇಶ್ ಹೇಳಿಕೆ ನೀಡಿರುವುದಾಗಿ ತಿಳಿದು ಬಂದಿದೆ.

ಶಿಷ್ಟಾಚಾರ ಪಡೆದವರ ಮಾಹಿತಿ ಸಂಗ್ರಹ:

ಇದೇ ವೇಳೆ ಶಿಷ್ಟಾಚಾರ ವ್ಯವಸ್ಥೆ ಕುರಿತು ದಾಖಲೆಗಳನ್ನು ಡಿಐಜಿ ವಂಶಿ ಕೃಷ್ಣ ತಂಡ ತಪಾಸಣೆ ನಡೆಸಿ ವಿವರ ಪಡೆದಿದೆ. ಈ ಹಿಂದೆ ಶಿಷ್ಟಾಚಾರ ಪಡೆದಿರುವವರ ಕುರಿತು ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದಾರೆ ಎನ್ನಲಾಗಿದೆ.