ಸಾರಾಂಶ
ನವದೆಹಲಿ: ಸಂಸ್ಕೃತ ಭಾಷೆಯ ಪ್ರಚಾರಕ್ಕಾಗಿ ಮತ್ತು ಅದನ್ನು ಜನಪ್ರಿಯಗೊಳಿಸಲು ಬೆಂಗಳೂರಿನಲ್ಲಿ ಪ್ರತಿ ಭಾನುವಾರ ಕಾರ್ಯಕ್ರಮ ಆಯೋಜಿಸುವ ಸಮಷ್ಟಿ ಗುಬ್ಬಿ ಅವರ ಕುರಿತು ಪ್ರಧಾನಿ ನರೇಂದ್ರ ಮೋದಿ ತಮ್ಮ ಮಾಸಿಕ ‘ಮನ್ ಕೀ ಬಾತ್’ ರೇಡಿಯೋ ಕಾರ್ಯಕ್ರಮದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಭಾನುವಾರ ರೇಡಿಯೋ ಭಾಷಣ ಮಾಡಿದ ಮೋದಿ, ಆಕಾಶವಾಣಿಯಲ್ಲಿ ಸಂಸ್ಕೃತ ವಾರ್ತೆಗಳು ಆರಂಭವಾಗಿ 50 ವರ್ಷ ಸಂದಿದೆ ಎಂದು ಹರ್ಷಿಸಿದರು. ಈ ವೇಳೆ ಸಮಷ್ಟಿ ಸಾಧನೆಯನ್ನು ಪ್ರಸ್ತಾಪಿಸಿದ ಮೋದಿ ‘ಸಂಸ್ಕೃತ ಭಾಷೆ ನಮ್ಮ ಜ್ಞಾನ ಮತ್ತು ವಿಜ್ಞಾನ ಸಂಪತ್ತಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿದೆ. ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲೂ ಅಂಥದ್ದೊಂದು ಪ್ರಯತ್ನ ನಡೆಯುತ್ತಿದೆ. ಬೆಂಗಳೂರಿನಲ್ಲಿ ಕಬ್ಬನ್ ಪಾರ್ಕ್ ಎಂಬ ಉದ್ಯಾನವನ ಇದೆ. ಈ ಪಾರ್ಕ್‌ನಲ್ಲಿ ಇತ್ತೀಚೆಗೆ ಹೊಸದೊಂದು ಸಂಪ್ರದಾಯ ಆರಂಭವಾಗಿದೆ. ಪ್ರತಿ ಭಾನುವಾರ ಅಲ್ಲಿ ಆಸಕ್ತ ಮಕ್ಕಳು, ವಯಸ್ಕರು, ವೃದ್ಧರು ಜೊತೆಗೂಡಿ ಪರಸ್ಪರ ಸಂಸ್ಕೃತದಲ್ಲೇ ಮಾತುಕತೆ ನಡೆಸುತ್ತಾರೆ. ಅಲ್ಲದೆ ಸಂಸ್ಕೃತದಲ್ಲೇ ಹಲವು ಚರ್ಚಾಗೋಷ್ಠಿಗಳನ್ನೂ ಆಯೋಜಿಸಲಾಗಿದೆ’ ಎಂದರು.‘ಈ ಕಾರ್ಯಕ್ರಮದ ಹೆಸರೇ ಸಂಸ್ಕೃತ್ ಇನ್ ವೀಕೆಂಡ್. ಇದನ್ನು ಸಮಷ್ಟಿ ಗುಬ್ಬಿ ತಮ್ಮ ವೆಬ್‌ಸೈಟ್ ಮೂಲಕ ಆರಂಭಿಸಿದ್ದರು. ಕೆಲ ಸಮಯದ ಹಿಂದೆ ಆರಂಭವಾದ ಈ ಅಭಿಯಾನ ಇದೀಗ ಬೆಂಗಳೂರಿನ ಜನರಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ನಾವೆಲ್ಲಾ ಇಂಥ ಅಭಿಯಾನದಲ್ಲಿ ಭಾಗಿಯಾದರೆ ನಾವೆಲ್ಲಾ ಈ ಪುರಾತನ ಮತ್ತು ವೈಜ್ಞಾನಿಕ ಭಾಷೆಯಿಂದ ಸಾಕಷ್ಟು ಲಾಭ ಪಡೆಯಬಹುದು’ ಎಂದು ಸಲಹೆ ನೀಡಿದರು.
ಸಮಷ್ಟಿ ಹರ್ಷ:ತಮ್ಮ ಕಾರ್ಯಕ್ರಮದ ಕುರಿತು ಸ್ವತಃ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿರುವ ಬಗ್ಗೆ ಅತೀವ ಸಂತಸ ವ್ಯಕ್ತಪಡಿಸಿರುವ ಸಮಷ್ಟಿ ಗುಬ್ಬಿ, ‘ಸಂಸ್ಕೃತವನ್ನು ಜನಪ್ರಿಯಗೊಳಿಸಲು ನಾನು ಹಲವು ವರ್ಷಗಳಿಂದ ಈ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದೇನೆ. ಸ್ವತಃ ಪ್ರಧಾನಿಯೇ ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು ಸಂಭ್ರಮದ ಸಂಗತಿ’ ಎಂದು ಹರ್ಷಿಸಿದರು.‘ನಾವು ಸಂಸ್ಕೃತ ಮಾತನಾಡುವವರಿಗಾಗಿಯೇ ಬೈಕ್ ರೈಡ್‌ಗಳನ್ನು ಆಯೋಜಿಸುತ್ತಿದ್ದೇವೆ. ಜೊತೆಗೆ ಬಾಲಿವುಡ್ ಮತ್ತು ಕನ್ನಡದ ಹಾಡುಗಳನ್ನು ಸಂಸ್ಕೃತಕ್ಕೆ ಭಾಷಾಂತರ ಮಾಡುವ ಕೆಲಸ ಕೂಡ ಮಾಡುತ್ತಿದ್ದೇವೆ. ನಮ್ಮ ಭಾನುವಾರದ ಕಾರ್ಯಕ್ರಮಕ್ಕೆ 800-900 ಜನರು ಆಗಮಿಸುತ್ತಿದ್ದಾರೆ’ ಎಂದು ಗುಬ್ಬಿ ಹೇಳಿದರು.
ಸಮಷ್ಟಿ ಗುಬ್ಬಿ ಎಂ.ಎ. ಸಂಸ್ಕೃತ ಪದವೀಧರೆ ಆಗಿದ್ದು, sthaayi.in ಎಂಬ ಸಂಸ್ಕೃತ ಉತ್ತೇಜಕ ವೆಬ್‌ಸೈಟ್ ಅನ್ನು 2021ರಲ್ಲಿ ಪ್ರಾರಂಭಿಸಿದ್ದರು.