ಮಹಿಳೆಯಿಂದ ಎಲ್ಲ ಕ್ಷೇತ್ರಗಳಲ್ಲೂ ಸಾಮರ್ಥ್ಯ ಸಾಬೀತು; ಕ್ಯಾಥರಿನ್ ಎಂ.ಸಿ. ಲೂಯಿಜ್ ಅಭಿಮತ

| Published : Mar 25 2024, 12:48 AM IST

ಮಹಿಳೆಯಿಂದ ಎಲ್ಲ ಕ್ಷೇತ್ರಗಳಲ್ಲೂ ಸಾಮರ್ಥ್ಯ ಸಾಬೀತು; ಕ್ಯಾಥರಿನ್ ಎಂ.ಸಿ. ಲೂಯಿಜ್ ಅಭಿಮತ
Share this Article
  • FB
  • TW
  • Linkdin
  • Email

ಸಾರಾಂಶ

ಅನಾದಿಕಾಲದಿಂದಲೂ ಭಾರತೀಯ ಮಹಿಳೆ ವೈಶಿಷ್ಟ್ಯ ಪೂರ್ಣವಾಗಿ ಮನೆಯ ಸರ್ವತೋಮುಖ ಏಳಿಗೆಗಾಗಿ ಶ್ರಮಪಡುತ್ತಿದ್ದಾಳೆ. ಆರ್ಥಿಕವಾಗಿ ಪುರುಷನ ಸಮಾನವಾಗಿ ದುಡಿಯುತ್ತಿರುವ ಮಹಿಳೆಯರಿಗೆ ಎಲ್ಲಾ ಕಾರ್ಯ ಕ್ಷೇತ್ರಗಳಲ್ಲೂ ಸಮಾನ ಸ್ಥಾನಮಾನ ಸಿಗಬೇಕು.

ಕನ್ನಡಪ್ರಭ ವಾರ್ತೆ ತಿಪಟೂರು

ಹಿಂದೆ ಕೇವಲ ನಾಲ್ಕು ಗೋಡೆಗಳ ಮಧ್ಯೆ ಕುಟುಂಬ ನಿರ್ವಹಣೆ ಮಾಡುತ್ತಾ ಬಾವಿಯೊಳಗಿನ ಕಪ್ಪೆಯಂತೆ ಜೀವನ ನಡೆಸುತ್ತಿದ್ದ ಮಹಿಳೆ, ಪ್ರಸ್ತುತ ಎಲ್ಲಾ ಕ್ಷೇತ್ರಗಳಲ್ಲಿಯೂ ಮುನ್ನುಗ್ಗಿ ಸಾಧನೆಗೈದು ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಂಡಿದ್ದಾಳೆ ಎಂದು ಬೆಂಗಳೂರಿನ ಇಟಿಕ್ವೆಸ್ಟ್ ತರಬೇತಿ ಮತ್ತು ಸಲಹೆಗಾರ ಸಂಸ್ಥೆಯ ಸಂಸ್ಥಾಪಕಿ ಕ್ಯಾಥರಿನ್ ಎಂ.ಸಿ. ಲೂಯಿಜ್ ತಿಳಿಸಿದರು.

ನಗರದ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಂತಹ ಕಷ್ಟದ ಸಮಯದಲ್ಲಿಯೂ ಮಹಿಳೆ ಆತ್ಮವಿಶ್ವಾಸ ಕಳೆದುಕೊಳ್ಳದೇ ಧೈರ್ಯವಾಗಿರಬೇಕು. ಪ್ರಕೃತಿಯ ವಿಶೇಷ ಸೃಷ್ಟಿಯೇ ಮಹಿಳೆಯಾಗಿದ್ದು, ಆಧುನಿಕ ಯುಗದಲ್ಲಿ ಆಕೆ ತನ್ನ ಸಾಮರ್ಥ್ಯವನ್ನು ಎಲ್ಲಾ ಕಾರ್ಯಕ್ಷೇತ್ರಗಳಲ್ಲಿ ಮೆರೆದಿದ್ದಾಳೆ. ಇದಕ್ಕೂ ಮೊದಲು ಮಹಿಳೆಯ ಜೀವನ ಮನೆಯ ನಾಲ್ಕು ಗೋಡೆಗಳಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಈಗ ಮಹಿಳೆಯು ಎಲ್ಲಾ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡಿದ್ದಾಳೆ. ಅವರ ಈ ಸಾಧನೆಗೆ ಸಹಾಯಕವಾದ ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ ಹಾಗೂ ಮಾಧ್ಯಮಗಳಿಗೆ ಧನ್ಯವಾದಗಳನ್ನು ತಿಳಿಸಲೇಬೇಕು ಎಂದರು.

ಕಲ್ಪತರು ವಿದ್ಯಾಸಂಸ್ಥೆಯ ಸ್ವರ್ಣಗೌರಿ ಮತ್ತು ಸುಮನ ಮಾತನಾಡಿ, ಪಕ್ಷಿಗೆ ಹೇಗೆ ಒಂದೇ ರೆಕ್ಕೆಯಿಂದ ಹಾರುವುದು ಅಸಾಧ್ಯವೋ, ಹಾಗೆ ಮಹಿಳೆಯರ ಸ್ಥಿತಿಗತಿಗಳು ಉತ್ತಮಗೊಳ್ಳಲಾರದೇ ಜಗತ್ತಿನ ಕಲ್ಯಾಣವೂ ಅಸಾಧ್ಯ. ಅನಾದಿಕಾಲದಿಂದಲೂ ಭಾರತೀಯ ಮಹಿಳೆ ವೈಶಿಷ್ಟ್ಯ ಪೂರ್ಣವಾಗಿ ಮನೆಯ ಸರ್ವತೋಮುಖ ಏಳಿಗೆಗಾಗಿ ಶ್ರಮಪಡುತ್ತಿದ್ದಾಳೆ. ಆರ್ಥಿಕವಾಗಿ ಪುರುಷನ ಸಮಾನವಾಗಿ ದುಡಿಯುತ್ತಿರುವ ಮಹಿಳೆಯರಿಗೆ ಎಲ್ಲಾ ಕಾರ್ಯ ಕ್ಷೇತ್ರಗಳಲ್ಲೂ ಸಮಾನ ಸ್ಥಾನಮಾನ ಸಿಗಬೇಕು ಎಂದರು.

ಕೆಐಟಿ ಪ್ರಾಂಶುಪಾಲ ಡಾ. ಜಿ.ಡಿ ಗುರುಮೂರ್ತಿ ಮಾತನಾಡಿ. ನಮ್ಮ ಕಾಲೇಜಿನಲ್ಲಿ ಶೇ. ೪೦ರಷ್ಟು ಮಹಿಳೆಯರು ವಿವಿಧ ಹುದ್ದೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಮನೆಯಿಂದ ಹೊರಗೆ ಬಂದು ಸಮರ್ಥವಾಗಿ ಕೆಲಸ ನಿರ್ವಹಿಸುವ ಎಲ್ಲಾ ಮಹಿಳೆಯರೂ ಸಾಧಕರೇ ಆಗಿದ್ದಾರೆ. ಮಹಿಳಾ ಸಾಧಕರ ಸಾಧನೆಯನ್ನು ಮತ್ತು ಅವರ ಕೊಡುಗೆಯನ್ನು ನೆನೆಯಲು ನಡೆಸುವುದೇ ಮಹಿಳಾ ದಿನಾಚರಣೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕೆವಿಎಸ್ ಉಪಾಧ್ಯಕ್ಷ ಬಾಗೇಪಲ್ಲಿ ನಟರಾಜು ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, ಹೆಣ್ಣು ಮಕ್ಕಳನ್ನು ಎಲ್ಲಾ ಕಾರ್ಯಕ್ರಮಗಳಲ್ಲಿ ಹೆಚ್ಚೆಚ್ಚು ಭಾಗವಹಿಸುವಂತೆ ಮಾಡುವ ಜೊತೆಗೆ ಅವರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ ಎಂದರು.

ಕಲ್ಪತರು ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಂ.ಆರ್. ಸಂಗಮೇಶ್, ಟಿ.ಯು. ಜಗದೀಶಮೂರ್ತಿ, ಡಾ.ಎಚ್.ಎನ್ ಚಂದ್ರಕಲಾ ಮಾತನಾಡಿದರು.

ಕಾಲೇಜಿನ ಮಹಿಳಾ ಸದಸ್ಯರಿಗೆ ಕ್ರೀಡೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲಾಯಿತು. ಕಲಾಮೇಳದಲ್ಲಿ ವಿದ್ಯಾರ್ಥಿ ಮತ್ತು ಮಹಿಳಾ ಸಿಬ್ಬಂದಿ ತಮ್ಮ ಕಲಾತ್ಮಕ ಕೃತಿಗಳನ್ನು ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಆಂತರಿಕ ದೂರು ಸಮಿತಿಯ ಸದಸ್ಯರಾದ ದೀಪ್ತಿ ಅಮಿತ್, ಡಾ. ಪಿ.ವಿ ನಿರ್ಮಲಾದೇವಿ, ಮುಕ್ತಾ ಸಚ್ಚಿದಾನಂದ್, ಪ್ರಾಂಶುಪಾಲರಾದ ಡಾ.ಮಾಲತಿ, ವೀಣಾ ಸೇರಿ ವಿಭಾಗದ ಎಲ್ಲಾ ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು.