ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿತಾವು ಕನ್ನಡ ಸಾಹಿತ್ಯ ಪರಿಷತ್‌ನ ಬೈಲಾದಲ್ಲಿ ತರಲುದ್ದೇಶಿರುವ ತಿದ್ದುಪಡಿಗಳು ಕಾನೂನು ಬಾಹಿರ ಎಂದು ನ್ಯಾಯಾಲಯದಲ್ಲಿ ಸಾಬೀತು ಮಾಡಿ ಎಂದು ತಿದ್ದುಪಡಿಯನ್ನು ವಿರೋಧಿಸುತ್ತಿರುವವರಿಗೆ ಪರಿಷತ್ ಅಧ್ಯಕ್ಷ ನಾಡೋಜ ಮಹೇಶ್ ಜೋಶಿ ಸವಾಲು ಹಾಕಿದ್ದಾರೆ.
ಅವರು ಬುಧವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.ದೇಶದ ಸಂವಿಧಾನಕ್ಕೆ 106 ಬಾರಿ ತಿದ್ದುಪಡಿ ಮಾಡಲಾಗಿದೆ ಹಾಗಿರುವಾಗ ಕಸಾಪದ ಬೈಲಾಕ್ಕೆ ತಿದ್ದುಪಡಿ ಮಾಡಲಿಕ್ಕೂ ಕಾನೂನಿನಲ್ಲಿ ಅವಕಾಶ ಇದೆ. ಅಲ್ಲದೆ ಕಸಾಪ ಬೈಲಾ ಇದೇ ಮೊದಲ ಬಾರಿಗೆ ತಿದ್ದುಪಡಿ ಮಾಡಲಾಗುತ್ತಿಲ್ಲ, ಈ ಹಿಂದೆಯೂ ಮಾಡಲಾಗಿದೆ. ಹಾಗಿರುವಾಗ ತಾವು ಅಗತ್ಯ ತಿದ್ದುಪಡಿ ಮಾಡಿದರೆ ಕಾನೂನು ಬಾಹಿರ ಹೇಗಾಗುತ್ತದೆ ಎಂದವರು ಪ್ರಶ್ನಿಸಿದರು.ಈಗಿರುವ ಬೈಲಾದಲ್ಲಿ ನಾಮನಿರ್ದೇಶಿತ ಸದಸ್ಯರ ಅವಧಿ, ಕಾರ್ಯಕಾರಿ ಸದಸ್ಯರು ಸತತ 3 ಬಾರಿ ಸಭೆಗೆ ಗೈರು ಹಾಜರಾದರೆ ಕ್ರಮ, ಮಹಿಳೆಯರು ಅಧ್ಯಕ್ಷರಾಗುವುದಕ್ಕೆ ಅವಕಾಶ, ಅಧ್ಯಕ್ಷರ ಅಕಾಲಿಕ ಮರಣದ ಸಂದರ್ಭದಲ್ಲಿ ಏನು ಮಾಡಬೇಕು ಎಂಬಿತ್ಯಾದಿ ವಿಷಯಗಳ ಬಗ್ಗೆ ಸ್ಪಷ್ಟತೆ ಇಲ್ಲ, ಸ್ಪಷ್ಟತೆ ತರುವುದಕ್ಕಾಗಿ ತಿದ್ದುಪಡಿ ಮಾಡಲಾಗುತ್ತಿದೆ ಎಂದವರು ಸ್ಪಷ್ಟಪಡಿಸಿದರು.
ಕಸಾಪ ನಿಭಂದನೆಗಳ ಪ್ರಕಾರವೇ ನಿವೃತ್ತ ನ್ಯಾಯಧೀಶರ ನೇತೃತ್ವದಲ್ಲಿಯೇ ತಿದ್ದುಪಡಿ ಸಮಿತಿ ರಚಿಸಿ, ಅವರು ನೀಡಿದ ಶಿಫಾರಸುಗಳನ್ನು ಕಸಾಪ ಕಾರ್ಯಕಾರಿ ಸಮಿತಿಗೆ ಮಂಡಿಸಿ, ಬಹುಮತದ ಒಪ್ಪಿಗೆ ಪಡೆಯಲಾಗಿದೆ. ಅದನ್ನು ಕಸಾಪ ಸರ್ವಸದಸ್ಯರ ಸಭೆಯಲ್ಲಿ ಮಾಡಿಸಬೇಕಾಗಿದೆ. ಆದರೆ ಈಗ, ತಮ್ಮೆದುರು ಕಸಾಪ ಚುನಾವಣೆಯಲ್ಲಿ ಹೀನಾಯವಾಗಿ ಸೋತವರು ಸೇಡು ತೀರಿಸಿಕೊಳ್ಳಲು ತಿದ್ದುಪಡಿಯನ್ನು ವಿರೋಧಿಸುತ್ತಿದ್ದಾರೆ, ಕಾನೂನು ಬಾಹಿರ ಎನ್ನುತಿದ್ದಾರೆ, ತನ್ನನ್ನು ಸರ್ವಧಿಕಾರಿ ಎನ್ನುತಿದ್ದಾರೆ, ಅವರ ವಿರುದ್ಧ ಈಗಾಗಲೇ ನ್ಯಾಯಾಲಯದಿಂದ ತಡೆಯಾಜ್ಞೆ ಇದೆ, ಅವರೀಗ ನ್ಯಾಯಾಲಯದ ಆದೇಶ ಉಲ್ಲಂಘಿಸಿದ್ದಾರೆ. ನ್ಯಾಯಾಲಕ್ಕೆ ಬಂದು ತಮ್ಮ ಆರೋಪ ಸಾಬೀತು ಮಾಡಲಿ ಎಂದರು.ನಾನೇನು ಹೇಡಿಯಲ್ಲ, ಓಡಿ ಹೋಗುವುದಿಲ್ಲ, ನಾನು ಚುನಾವಣೆಯ ಪ್ರಣಾಳಿಕೆಯಲ್ಲಿ ಕಸಾಪ ಬೈಲಾಗಳಲ್ಲಿ ಕ್ರಾಂತಿಕಾರಕ ಬದಲಾವಣೆ ಮಾಡುವುದಾಗಿ ಹೇಳಿದ್ದೇನೆ, ಅದರಂತೆ ನಡೆದುಕೊಂಡಿದ್ದೇನೆ, ಬೈಲಾದಲ್ಲಿ ಸ್ಪಷ್ಟತೆ ತರುವುದು ಅಧ್ಯಕ್ಷನ ಕರ್ತವ್ಯ, ನಾನು ಕರ್ತವ್ಯಭ್ರಷ್ಟ ಅಗಲಾರೆ ಎಂದು ಹೇಳಿದರು.ದಕ್ಷಿಣ ಕನ್ನಡ ಜಿಲ್ಲಾ ಕಸಾಪ ಅಧ್ಯಕ್ಷ ಶ್ರೀನಾಥ್ ರಾವ್ ಉಪಸ್ಥಿತರಿದ್ದರು.