ಖಾತ್ರಿ ಯೋಜನೆಯಡಿ 100 ದಿನಗಳ ಕಾಲ ಕೆಲಸ ನೀಡಿ

| Published : Apr 04 2025, 12:48 AM IST

ಸಾರಾಂಶ

ಉದ್ಯೋಗ ಖಾತ್ರಿ ಯೋಜನೆಯಡಿ 100 ದಿನಗಳ ಕಾಲ ಕೆಲಸ ನೀಡಬೇಕು. ಈ ಮೂಲಕ ಗುಳೆ ಹೋಗುವುದನ್ನು ತಪ್ಪಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ (ಕೆಪಿಆರ್‌ಎಸ್‌) ನೇತೃತ್ವದಲ್ಲಿ ನೂರಾರು ಕೃಷಿ ಕಾರ್ಮಿಕರು ಇಲ್ಲಿನ ಜಿಪಂ ಎದುರು ಪ್ರತಿಭಟನೆ ನಡೆಸಿದರು.

ಜಿಪಂ ಎದುರು ಕರ್ನಾಟಕ ಪ್ರಾಂತ ರೈತ ಸಂಘದಿಂದ ಪ್ರತಿಭಟನೆಕನ್ನಡಪ್ರಭ ವಾರ್ತೆ ಬಳ್ಳಾರಿ

ಉದ್ಯೋಗ ಖಾತ್ರಿ ಯೋಜನೆಯಡಿ 100 ದಿನಗಳ ಕಾಲ ಕೆಲಸ ನೀಡಬೇಕು. ಈ ಮೂಲಕ ಗುಳೆ ಹೋಗುವುದನ್ನು ತಪ್ಪಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ (ಕೆಪಿಆರ್‌ಎಸ್‌) ನೇತೃತ್ವದಲ್ಲಿ ನೂರಾರು ಕೃಷಿ ಕಾರ್ಮಿಕರು ಇಲ್ಲಿನ ಜಿಪಂ ಎದುರು ಪ್ರತಿಭಟನೆ ನಡೆಸಿದರು.

ಉದ್ಯೋಗ ಖಾತ್ರಿ ಯೋಜನೆಗೆ ಆಯಾ ಗ್ರಾಪಂಗಳಿಗೆ ಕೋಟಾ ನಿಗದಿಗೊಳಿಸಲಾಗಿದೆ. ಸಂಖ್ಯೆಯನ್ನು ಸರಿದೂಗಿಸಲು ಈ ಕ್ರಮ ಅನುಸರಿಸಲಾಗುತ್ತಿದೆ. ಪ್ರತಿವಾರವೂ 1 ಸಾವಿರ ಜನರಿಗೆ ಕೆಲಸ ನೀಡಲಾಗುತ್ತಿದೆ. ಈ ರೀತಿಯ ವಂತಿಗೆ ಪದ್ಧತಿಯಿಂದಾಗಿಯೇ ಕೂಲಿಕಾರರು ಗುಳೆ ಹೋಗುವಂತಾಗಿದೆ. ಹೀಗಾಗಿ ಜಿಪಂ ಅಧಿಕಾರಿಗಳು, ಕೆಲಸ ಬಯಸಿ ಅರ್ಜಿ ಸಲ್ಲಿಸಿದ ಎಲ್ಲ ಕೂಲಿಕಾರರಿಗೂ ನಿರಂತರ ಕೆಲಸ ನೀಡಬೇಕು. ಈ ಮೂಲಕ ಕೂಲಿಕಾರರ ಹಿತ ಕಾಯಲು ಜಿಲ್ಲಾಡಳಿತ ಮುಂದಾಗಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಪ್ರತಿಭಟನೆ ನೇತೃತ್ವ ವಹಿಸಿದ್ದ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ವಿ.ಎಸ್. ಶಿವಶಂಕರ್ ಮಾತನಾಡಿ, ಬೇಸಿಗೆಯಲ್ಲಿ ಕೂಲಿ ಕಾರ್ಮಿಕರು ಗುಳೆ ಹೋಗುವುದನ್ನು ತಪ್ಪಿಸಲು 100 ದಿನಗಳ ಕಾಲ ನಿರಂತರ ಕೆಲಸ ನೀಡಬೇಕು. ವಂತಿಕೆ ಪದ್ಧತಿ ಮುಂದುವರಿಸಿದಲ್ಲಿ ಕೆಲಸ ನೀಡದ ವಾರದ ದಿನಗಳಿಗೆ ನಿರುದ್ಯೋಗ ಭತ್ಯೆ ನೀಡಬೇಕು. ನಿರಂತರ 100 ದಿನಗಳ ಕೆಲಸ ನೀಡಲು ಗ್ರಾಮ ಪಂಚಾಯಿತಿಯಲ್ಲಿ ಕನಿಷ್ಠ 5 ಕಂಪ್ಯೂಟರ್ ಕೇಂದ್ರ ತೆರೆಯಬೇಕು. ಕಂಪ್ಯೂಟರ್ ನಿರ್ವಹಣೆಗೆ ಕಂಪ್ಯೂಟರ್ ಜ್ಞಾನ ಹೊಂದಿರುವ ನಿರುದ್ಯೋಗಿ ಯುವಕನನ್ನು ನೇಮಿಸಿಕೊಳ್ಳಬೇಕು. ಮೇಟಿಗಳಿಗೆ ಕಳೆದ 5 ವರ್ಷಗಳಿಂದ ನೀಡದಿರುವ ಬಾಕಿ ಮೊತ್ತವನ್ನು ಕೂಡಲೇ ನೀಡಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ ಕಾರ್ಯನಿರ್ವಹಿಸುವ ಸ್ಥಳದಲ್ಲಿ ನೀರು, ನೆರಳು ವ್ಯವಸ್ಥೆ ಒದಗಿಸಬೇಕು. ಗ್ರಾಪಂ 5 ಕಿಮೀ ವ್ಯಾಪ್ತಿಯಲ್ಲಿಯೇ ಕೆಲಸ ನೀಡಬೇಕು ಎಂದು ಒತ್ತಾಯಿಸಿದರು.

ಸಂಘಟನೆಯ ಜಿಲ್ಲಾ ಪ್ರಮುಖರಾದ ಗಾಳಿ ಬಸವರಾಜ್, ಮೇಟಿ ಕಲ್ಗುಡೆಪ್ಪ, ಮುದ್ದಣ್ಣ, ಬೈಲೂರು ಕಲ್ಗುಡೆಪ್ಪ, ಎ.ವೀರೇಶ, ಶಾನವಾಸಪುರ ಕನಕಪ್ಪ, ನಿಂಗಪ್ಪ ಬಸಾಪುರ ಶಂಕ್ರಪ್ಪ, ಗಂಗಣ್ಣಗೌಡ, ವಿಘ್ನೇಶ್ ಗೌಡ, ಎಂ.ನಾಗರಾಜ್, ಬ್ಯಾಡಗಿ ಚಂದ್ರಪ್ಪ, ಕನಕಪ್ಪ ಸೇರಿದಂತೆ ಸಂಘಟನೆಯ ಸದಸ್ಯರು ಹಾಗೂ ವಿವಿಧ ಗ್ರಾಮಗಳ ಕೃಷಿ ಕೂಲಿಕಾರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.