ಸಾರಾಂಶ
ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಜಿಲ್ಲೆಯ ಕೃಷ್ಣಾ ಮೇಲ್ದಂಡೆ ಯೋಜನೆ ಜ್ವಲಂತ ಸಮಸ್ಯೆಯಾಗಿದೆ. ಸರ್ಕಾರ ಇದಕ್ಕೆ ಕನಿಷ್ಟ ₹75 ಸಾವಿರ ಕೋಟಿ ಅನುದಾನ ಒದಗಿಸಿ ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಅಲ್ಲದೇ ಜಿಲ್ಲೆಯ ಇನ್ನೂ ಕೆಲವು ಪ್ರಮುಖ ಸಮಸ್ಯೆಗಳ ನಿವಾರಣೆಗೆ ಸರ್ಕಾರ ಮುಂದಾಗಬೇಕೆಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ ಒತ್ತಾಯಿಸಿದ್ದಾರೆ.ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.17ರಂದು ಸಿಎಂ ಸಿದ್ದರಾಮಯ್ಯ ಹಾಗೂ ನೀರಾವರಿ ಸಚಿವರನ್ನು ಖುದ್ದಾಗಿ ಭೇಟಿ ಮಾಡುತ್ತೇನೆ. ಪ್ರಮುಖವಾಗಿ ಕೃಷ್ಣಾ ಮೇಲ್ದಂಡೆ ಯೋಜನೆ ಸುಮಾರು 3 ತಿಂಗಳ ಹಿಂದೆ ನಡೆದ ಸತ್ಯಾಗ್ರಹದಲ್ಲಿ ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಸಂಬಂಧಿಸಿದವರನ್ನು ಕರೆಯಿಸಿ ಸಮಸ್ಯೆ ನಿವಾರಣೆಗೆ ಅಗತ್ಯ ಹಣಕಾಸು ಒದಗಿಸುವ ಭರವಸೆ ನೀಡಲಾಗಿತ್ತು. ನಮ್ಮದೇ ಸರ್ಕಾರ ಇದ್ದರೂ ಕೂಡಾ ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ಮನವಿ ಮಾಡುತ್ತೇನೆ ಎಂದರು.
ಈ ಯೋಜನೆ ರೂಪಿಸುವ ಸಂದರ್ಭದಲ್ಲಿ ರೈತರು ಕೂಡಾ ಸರ್ಕಾರದೊಂದಿಗೆ ಸಹಕರಿಸಬೇಕು. ಸರ್ಕಾರ ಕೂಡಲೇ ಈ ಬಜೆಟ್‌ನಲ್ಲಿ ಅನುದಾನ ಒದಗಿಸಿ, ಕೊಟ್ಟ ಭರವಸೆ ಈಡೇರಿಸುವ ಜವಾಬ್ದಾರಿ ಹೊರಬೇಕು. ಒಂದು ಎಕರೆಗೆ ಕನಿಷ್ಠ ₹45 ರಿಂದ ₹50 ಲಕ್ಷ ನೀರಾವರಿಗೆ ಹಾಗೂ ₹30 ರಿಂದ ₹35 ಲಕ್ಷ ಒಣಬೇಸಾಯಕ್ಕೆ ಒದಗಿಸಬೇಕು. ಇಷ್ಟು ಮಾಡಿದರೆ ಈ ಭಾಗದ ಜ್ವಲಂತ ಸಮಸ್ಯೆಗಳಿಗೆ ಶೇ.90 ರಷ್ಟು ಶಾಶ್ವತ ಪರಿಹಾರ ಒದಗಿಸಿದಂತಾಗುತ್ತದೆ ಎಂದರು.ಪಕ್ಷ ಸಂಘಟನೆ:ಪಕ್ಷ ಸಂಘಟನೆಯ ದೃಷ್ಟಿಯಿಂದ ಜಿಲ್ಲೆಯ ಪ್ರತಿ ಬ್ಲಾಕ್‌ಗೆ ಭೇಟಿ ನೀಡಿ ಹಿರಿಯ, ಕಿರಿಯ ಕಾರ್ಯಕರ್ತರನ್ನು, ಮುಖಂಡರನ್ನು ಭೇಟಿ ಮಾಡುತ್ತೇನೆ. ಸ್ವಾಭಾವಿಕವಾಗಿ ಕೆಲವರಲ್ಲಿ ಭಿನ್ನಾಭಿಪ್ರಾಯ, ವೈಮನಸ್ಸುಗಳನ್ನು ಬಗೆಹರಿಸಿ ಪಕ್ಷದ ಒಗ್ಗಟ್ಟಿಗೆ ಮುಂದಾಗುವ ಕೆಲಸ ಮಾಡುತ್ತೇನೆ. 22, 23, 24 ರಂದು ಮುಧೋಳ, ತೇರದಾಳ, ಜಮಖಂಡಿ ಕ್ಷೇತ್ರಗಳಿಗೆ ಭೇಟಿ ನೀಡಿ, ಅಲ್ಲಿನ ನಿಷ್ಠಾವಂತ ಕಾರ್ಯಕರ್ತರನ್ನು, ಪುರಸಭೆ ಹಾಗೂ ಪಪಂ ಮುಖಂಡರನ್ನು ಭೇಟಿ ಮಾಡುತ್ತೇನೆ. ಮುಂಬರುವ ಜಿಪಂ, ತಾಪಂ ಚುನಾವಣೆ ಸಮೀಸುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಾಂತರ ಭಾಗದಲ್ಲಿ ಪಕ್ಷ ಬಲಪಡಿಸುವ ಕಾರ್ಯದಲ್ಲಿ ಇಂದಿನಿಂದಲೇ ನಮ್ಮ ಕಾರ್ಯಾರಂಭ ಮಾಡುತ್ತೇನೆ ಎಂದರು.ನೂತನ ತಾಲೂಕುಗಳಿಗೆ ಕಚೇರಿ:
ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ರಾಜ್ಯದಲ್ಲಿ ಹೊಸ ತಾಲೂಕು ಘೋಷಣೆ ಮಾಡಿದೆ. ಅವುಗಳಿಗೆ ಅಗತ್ಯ ಕಟ್ಟಡ, ಸಿಬ್ಬಂದಿ ಒದಗಿಸಿಲ್ಲ. ಹೀಗಾಗಿ ಹೊಸ ತಾಲೂಕುಗಳು ಹೆಸರಿಗೆ ಮಾತ್ರ ಸೀಮಿತವಾಗಿವೆ. ಅಗತ್ಯ ಕೆಲಸಕ್ಕೆ ಬೇರೆ ತಾಲೂಕುಗಳಿಗೆ ಅಲೆದಾಡಬೇಕಾಗಿದೆ. ಜನರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಅದಕ್ಕೆ ಸರ್ಕಾರ ಅವಶ್ಯಕ ಸಿಬ್ಬಂದಿ, ಕಟ್ಟಡ, ಕಚೇರಿ ಒದಗಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸುತ್ತೇನೆಂದು ಎಸ್.ಜಿ.ನಂಜಯ್ಯನಮಠ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ ಬರಗುಂಡಿ, ಮುಖಂಡರಾದ ಜಮೀರ ಮೌಲ್ವಿ, ರಾಜು ಸಂಗಮ, ಸಲೀಮ ಮೋಮಿನ, ಮೆಹಬೂಬ ಬಾಗವಾನ, ಲಾಲಸಾಬ್ ಅತ್ತಾರ ಇತರರು ಇದ್ದರು.