ನಗರದ ಪಡೀಲ್ ರೈಲು ನಿಲ್ದಾಣ ಪಾಲಕ್ಕಾಡ್ ರೈಲ್ವೆ ವಿಭಾಗದ ವ್ಯಾಪ್ತಿಯಲ್ಲಿದ್ದು, ಶೀಘ್ರದಲ್ಲಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ಹಾಗೂ ಸಂಬಂಧಿತ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಪಡೀಲ್‌ ನಿಲ್ದಾಣದಲ್ಲಿ ಪಂಚಗಂಗಾ ಎಕ್ಸ್‌ಪ್ರೆಸ್‌ಗೆ ನಿಲುಗಡೆ, ಸುರಕ್ಷಿತ ಪಾದಚಾರಿ ಮೇಲ್ಸೇತುವೆ ಅಥವಾ ಅಂಡರ್‌ಪಾಸ್ ನಿರ್ಮಾಣ ಸೇರಿದಂತೆ ಸ್ಥಳೀಯರ ಎಲ್ಲ ನ್ಯಾಯಯುತ ಬೇಡಿಕೆಗಳನ್ನು ಮಂಡಿಸುವುದಾಗಿ ವಿಧಾನ ಪರಿಷತ್‌ ಸದಸ್ಯ ಪಿ.ವಿ.ಮೋಹನ್‌ ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಅವರು ಶನಿವಾರ ಪಡೀಲ್‌ ನಿಲ್ದಾಣಕ್ಕೆ ಭೇಟಿ ನೀಡಿ, ಅಲ್ಲಿನ ಸಮಸ್ಯೆಗಳ ಪರಿಶೀಲನೆ ನಡೆಸಿ ಸ್ಥಳೀಯರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಪತ್ರಕರ್ತರ ಜೊತೆ ಮಾತನಾಡಿದರು.

ಪಡೀಲ್ ರೈಲು ನಿಲ್ದಾಣ ನಿರ್ಲಕ್ಷ್ಯದ ಸಂಕೇತವಾಗಿ ಉಳಿದಿದೆ. ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಈ ಭಾಗದ ಜನರ ನ್ಯಾಯಸಮ್ಮತ ಬೇಡಿಕೆಗಳು ವರ್ಷಗಳಿಂದ ನಿರ್ಲಕ್ಷ್ಯಕ್ಕೊಳಗಾಗಿವೆ. ನಿಲ್ದಾಣದ ಸುತ್ತಮುತ್ತ ಸುಮಾರು

1,400ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು, ಒಂದು ಕಡೆಯಿಂದ ಮತ್ತೊಂದು ಕಡೆಗೆ ತೆರಳಲು ಪ್ರತಿದಿನವೂ ಜೀವದ ಹಂಗು ತೊರೆದು ರೈಲು ಹಳಿ ದಾಟಬೇಕಾಗಿದೆ. ಶಾಲಾ ಮಕ್ಕಳು, ಹಿರಿಯ ನಾಗರಿಕರು, ಮಹಿಳೆಯರು ಹಾಗೂ ಗರ್ಭಿಣಿಯರು ಎದುರಿಸುತ್ತಿರುವ ಸಂಕಷ್ಟವನ್ನು ಯಾರೂ ಗಮನಿಸದಿರುವುದು ವಿಷಾದನೀಯ ಎಂದರು.

ಕಾರವಾರ–ಬೆಂಗಳೂರು 16596 ಪಂಚಗಂಗಾ ಸೂಪರ್ ಎಕ್ಸ್‌ಪ್ರೆಸ್ ಇದೇ ಮಾರ್ಗವಾಗಿ ಸಂಚರಿಸುತ್ತಿದ್ದರೂ ಪಡೀಲ್ ರೈಲು ನಿಲ್ದಾಣದಲ್ಲಿ ನಿಲುಗಡೆ ನೀಡಲಾಗುತ್ತಿಲ್ಲ. ಸುರತ್ಕಲ್‌ನಲ್ಲಿ ನಿಂತು ಬಂಟ್ವಾಳದವರೆಗೆ ಯಾವುದೇ ನಿಲುಗಡೆ ಇಲ್ಲದಿರುವುದು ನ್ಯಾಯಸಮ್ಮತವೂ ಅಲ್ಲ, ಜನಸ್ನೇಹಿಯೂ ಅಲ್ಲ. ಪಡೀಲ್‌ನಲ್ಲಿ ಈ ರೈಲಿಗೆ ನಿಲುಗಡೆ ನೀಡುವುದರಿಂದ ಸಾವಿರಾರು ಪ್ರಯಾಣಿಕರಿಗೆ ಅನುಕೂಲವಾಗಲಿದ್ದು, ಮಂಗಳೂರು ನಗರದ ಸಂಚಾರದ ಒತ್ತಡವೂ ಕಡಿಮೆಯಾಗಲಿದೆ. ಇದು ಯಾವುದೇ ವಿಶೇಷ ಸೌಲಭ್ಯವಲ್ಲ. ಈ ಭಾಗದ ಜನರ ಹಕ್ಕು ಎಂದರು.

ಇಲ್ಲಿನ ಈ ವಿಚಾರದಲ್ಲಿ ರಾಜಕೀಯ ಭೇದಭಾವಕ್ಕೆ ಅವಕಾಶವಿಲ್ಲ. ಸ್ಥಳೀಯ ಲೋಕಸಭಾ ಸದಸ್ಯರು, ಶಾಸಕರು, ಜನಪ್ರತಿನಿಧಿಗಳು ಹಾಗೂ ನಾಗರಿಕ ಸಂಘಟನೆಗಳ ಸಹಕಾರದೊಂದಿಗೆ ಪಡೀಲ್ ರೈಲು ನಿಲ್ದಾಣಕ್ಕೆ ಅದರ ಯೋಗ್ಯ ಸ್ಥಾನಮಾನ ಮತ್ತು ಅಗತ್ಯ ಸೌಲಭ್ಯಗಳನ್ನು ದೊರಕಿಸಿಕೊಡುವವರೆಗೆ ನನ್ನ ಹೋರಾಟ ಮುಂದುವರಿಯಲಿದೆ ಎಂದರು.