ಸಾರಾಂಶ
ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ ನಡೆಯಿತು. ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅಧ್ಯಕ್ಷತೆ ವಹಿಸಿದ್ದರು.
ಕನ್ನಡಪ್ರಭ ವಾರ್ತೆ ಮಣಿಪಾಲ
ಮಳೆಯಿಂದ ಹಾನಿಗೊಳಗಾದ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳ ಹಾನಿಯ ವಿವರಗಳನ್ನು ನಿಖರವಾಗಿ ನಿಗದಿತ ಕಾಲಾವಧಿಯ ಒಳಗೆ ಪೂರ್ಣಗೊಳಿಸಿ, ವರದಿ ನೀಡಬೇಕೆಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅಧಿಕಾರಿಗಳಿಗೆ ಸೂಚನೆ ನೀಡಿದರು.ಅವರು ಬುಧವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜಿಲ್ಲೆಯಲ್ಲಿ ವಾಡಿಕೆ ಮಳೆಗಿಂತ ಹೆಚ್ಚು ಮಳೆಯಿಂದಾಗಿ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳ ಹಾನಿ ಉಂಟಾಗಿದೆ. ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಬೆಳೆ ಹಾನಿಯ ಜಂಟಿ ಸರ್ವೇ ಕಾರ್ಯಗಳನ್ನು ಯಾವುದೇ ರೀತಿಯ ವ್ಯತ್ಯಾಸ ಆಗದಂತೆ ನಿಖರ ಮಾಹಿತಿಯನ್ನು ಸಂಗ್ರಹಿಸಿ, ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕು ಎಂದರು.ಹೆಚ್ಚಿನ ಮಳೆಯಿಂದಾಗಿ ಅಡಕೆ ಬೆಳೆಗೆ ಕೊಳೆ ರೋಗಗಳು ಕಂಡುಬರುತ್ತಿದೆ. ಇವುಗಳ ನಿಯಂತ್ರಣಕ್ಕೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು, ವಿಜ್ಞಾನಿಗಳು, ಸಂಶೋಧಕರು ಒಳಗೊಂಡ ತಂಡವು ರೈತರ ತೋಟಗಳಿಗೆ ಭೇಟಿ ನೀಡಿ, ರೋಗ ನಿಯಂತ್ರಣಕ್ಕೆ ಕಂಡುಕೊಳ್ಳಬಹುದಾದ ಪರಿಹಾರ ಕ್ರಮಗಳ ಮಾಹಿತಿ ನೀಡಬೇಕು. ರೈತರಿಗೆ ಬೋರ್ಡಲಿನ್ ದ್ರಾವಣ, ಕಾಪರ್ ಸಪ್ಲೇಟ್ ಸೇರಿದಂತೆ ಮತ್ತಿತರ ಔಷಧಿಗಳ ಸಿಂಪರಣೆಗೆ ಸಹಾಯಧನ ಒದಗಿಸಬೇಕು ಎಂದು ಹೇಳಿದರು.ಮಳೆಯಿಂದ ಉಂಟಾಗಿರುವ ರಸ್ತೆ ಗುಂಡಿಗಳ ದುರಸ್ತಿ ಕೈಗೊಳ್ಳಲು ನೀಡಿರುವ ಅಂದಾಜು ಮೊತ್ತದ ಪ್ರಸ್ತಾವನೆಯು ಹೆಚ್ಚು ಇರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಅಂದಾಜು ನಷ್ಟದ ನಿಖರ ಮೌಲ್ಯವನ್ನು ಪರಿಶೀಲಿಸಿ ನೀಡಬೇಕು ಎಂದು ಸೂಚನೆ ನೀಡಿದರು.ಎನ್‌ಡಿಆರ್‌ಎಫ್ ತಂಡಗಳು ಪ್ರಕೃತಿ ವಿಕೋಪ ಸಂದರ್ಭಗಳಲ್ಲಿ ಕೈಗೊಳ್ಳಬೇಕಾಗಿರುವ ಮುನ್ನೆಚ್ಚರಿಕೆ ಕಾರ್ಯಗಳ ಬಗ್ಗೆ ಸಮುದಾಯ ಅರಿವು ಕಾರ್ಯಕ್ರಮಗಳನ್ನು ಮೀನುಗಾರರಿಗೆ, ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸ್ಥಳೀಯ ಸಂಸ್ಥೆಗಳ ಸಹಯೋಗದೊಂದಿಗೆ ಹಮ್ಮಿಕೊಳ್ಳುವುದರಿಂದರೊಂದಿಗೆ ಜಾಗೃತಿ ಮೂಡಿಸಬೇಕು ಎಂದರು.ಜಿಲ್ಲಾ ಹಾಗೂ ತಾಲೂಕು ವಿಪತ್ತು ನಿರ್ವಹಣಾ ಕೇಂದ್ರಗಳ ಕಂಟ್ರೋಲ್ ರೂಂಗಳು ದಿನದ 24*7 ಅವಧಿಯೂ ನಿರಂತರವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು ಹಾಗೂ ತಾಲೂಕುಮಟ್ಟ, ಗ್ರಾಮ ಪಂಚಾಯಿತಿ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿಗಳು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.ಪ್ರಕೃತಿ ವಿಕೋಪದಿಂದ ಯಾವುದೇ ಅನಾಹುತಗಳು ಉಂಟಾದಲ್ಲಿ ಕೂಡಲೇ ಸ್ಪಂದಿಸಿ, ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕು ಎಂದ ಅವರು, ಪರಿಹಾರದ ಚೆಕ್ ಅನ್ನು ವಿತರಿಸುವ ಮುನ್ನ ಪ್ರಕೃತಿ ವಿಕೋಪದಿಂದಾಗಿರುವ ಬಗ್ಗೆ ನಿಖರ ಮಾಹಿತಿಯನ್ನು ಕ್ರೋಢೀಕರಿಸಿಕೊಳ್ಳುವುದು ಅಗತ್ಯ ಎಂದರು.ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಎಎಸ್‌ಪಿ ಸುಧಾಕರ್ ನಾಯಕ್, ಸಹಾಯಕ ಕಮೀಷನರ್ ರಶ್ಮಿ ಎಸ್., ವಿವಿಧ ಜಿಲ್ಲಾಮಟ್ಟದ ಅನುಷ್ಠಾನ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.