ಪಟ್ಟಣದಲ್ಲಿ ನಾಯಿ ಹಾವಳಿ ಹೆಚ್ಚಿದ್ದು, ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿರುವ ಬಗ್ಗೆ ಕೆಲ ಸದಸ್ಯರು ದೂರಿದರು. ನಾಯಿ ಹಿಡಿಯಲು ೩ ಬಾರಿ ಟೆಂಡರ್ ಕರೆದರೂ ಕೂಡ ಯಾರೂ ಬಂದಿಲ್ಲ. ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಾಧಿಕಾರಿಗಳು ತಿಳಿಸಿದರು.

ಮುಂಡಗೋಡ: ಪಪಂನಿಂದ ರಸ್ತೆ, ಚರಂಡಿ, ನೀರು ಸೇರಿದಂತೆ ಅಗತ್ಯ ಮೂಲ ಸೌಕರ್ಯ ಒದಗಿಸಿದ ಮೇಲೆ ಕಡ್ಡಾಯವಾಗಿ ತೆರಿಗೆ ಪಾವತಿಸಿಕೊಳ್ಳಿ ಎಂದು ಶಾಸಕ ಶಿವರಾಮ ಹೆಬ್ಬಾರ ಪಪಂ ಮುಖ್ಯಾಧಿಕಾರಿಗೆ ಸೂಚಿಸಿದರು.

ಬುಧವಾರ ಇಲ್ಲಿಯ ಪಪಂ ಸಭಾಂಗಣದಲ್ಲಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ, ಪಟ್ಟಣದಲ್ಲಿ ಹಲವರು ಪರವಾನಗಿ ಪಡೆಯದೆ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಿಕೊಂಡು ಬಾಡಿಗೆ ಪಡೆಯುತ್ತಿದ್ದಾರೆ. ಆದರೆ ಪಪಂನವರು ಅವರಿಂದ ಯಾವುದೇ ರೀತಿ ತೆರಿಗೆ ವಸೂಲಿ ಮಾಡದೆ ಹಾಗೆಯೇ ಬಿಟ್ಟಿದ್ದಾರೆ. ಇದರಿಂದ ಪಪಂನ ಆದಾಯಕ್ಕೆ ಧಕ್ಕೆಯಾಗುತ್ತಿದೆ ಎಂದು ಮಾಜಿ ಪಪಂ ಸದಸ್ಯರು ಭಾರಿ ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪಪಂ ಸಿಬ್ಬಂದಿ, ದಾಖಲೆ ಇಲ್ಲದ ಆಸ್ತಿಗಳಿಂದ ತೆರಿಗೆ ಪಡೆಯಲು ಅವಕಾಶವಿಲ್ಲ. ನಾವು ಕರ ತುಂಬಿಸಿಕೊಂಡರೆ ಪಹಣಿ ಪತ್ರ ನೀಡಬೇಕಾಗುತ್ತದೆ. ಹಾಗಾಗಿ ಈ ಸಮಸ್ಯೆ ಎದುರಾಗಿದೆ ಎಂದರು.

ಪಪಂನಿಂದ ಮೂಲ ಸೌಲಭ್ಯ ಒದಗಿಸಿದ ಮೇಲೆ ತೆರಿಗೆ ವಸೂಲಿ ಮಾಡುವುದರಲ್ಲಿ ತಪ್ಪೇನಿದೆ. ಅದಕ್ಕೆ ಏನು ಅವಕಾಶವಿದೆ ಎಂದು ನೋಡಿ ತೆರಿಗೆ ಸಂಗ್ರಹ ಮಾಡಿ ಎಂದು ಶಾಸಕರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಪ್ರಸಕ್ತ ಸಾಲಿನಲ್ಲಿ ಮಳೆಯ ಕೊರತೆಯಿಂದಾಗಿ ಮುಂಡಗೋಡ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಸನವಳ್ಳಿ ಜಲಾಶಯದ ನೀರಿನ ಮಟ್ಟ ಕಡಿಮೆಯಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಪಟ್ಟಣಕ್ಕೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಹಾಗಾಗಿ ಚಿಕ್ಕ ನೀರಾವರಿ ಇಲಾಖೆಯೊಂದಿಗೆ ಚರ್ಚಿಸಿ ಜಲಾಶಯದಿಂದ ನೀರು ಪೋಲಾಗದಂತೆ ಹಾಗೂ ಯಾವುದೇ ರೀತಿ ಕೃಷಿ ಚಟುವಟಿಕೆಗೆ ನೀರು ಪೂರೈಸದಂತೆ ಸೂಕ್ತ ಕ್ರಮ ಕೈಗೊಳ್ಳಲು ಪಪಂ ಮುಖ್ಯಾಧಿಕಾರಿ ಸಂತೋಷ ಹಾಲಕಲ್ಲಾಪುರ ಅವರಿಗೆ ಸೂಚಿಸಿದರು.

ಪಟ್ಟಣದ ಹೆಬ್ಬಾರ ನಗರದ ನಿರ್ಮಾಣ ಮಾಡಲಾಗಿರುವ ಅಪಾರ್ಮೆಂಟ್‌ನಲ್ಲಿ ಮನೆ ಪಡೆಯಬೇಕಾದರೆ ₹೧.೨೫ ಲಕ್ಷ ಹಣ ಪಾವತಿ ಮಾಡಬೇಕು. ಈ ಹಣ ಎಲ್ಲೂ ಹೋಗುವುದಿಲ್ಲ. ಬದಲಾಗಿ ಅಪಾರ್ಟಮೆಂಟ್‌ನ ನಿರ್ವಹಣೆಗಾಗಿ ಬ್ಯಾಂಕ್ ನಲ್ಲಿ ಜಮಾ ಮಾಡಲಾಗುತ್ತದೆ. ಅಗತ್ಯ ಸಂದರ್ಭದಲ್ಲಿ ಅಭಿವೃದ್ಧಿ ಹಾಗೂ ದುರಸ್ತಿ ಕಾರ್ಯಕ್ಕೆ ಈ ಹಣ ಬಳಕೆ ಮಾಡಲಾಗುತ್ತದೆ ಎಂದು ಶಾಸಕರು ತಿಳಿಸಿದರು.

ಪಟ್ಟಣದಲ್ಲಿ ನಾಯಿ ಹಾವಳಿ ಹೆಚ್ಚಿದ್ದು, ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿರುವ ಬಗ್ಗೆ ಕೆಲ ಸದಸ್ಯರು ದೂರಿದರು. ನಾಯಿ ಹಿಡಿಯಲು ೩ ಬಾರಿ ಟೆಂಡರ್ ಕರೆದರೂ ಕೂಡ ಯಾರೂ ಬಂದಿಲ್ಲ. ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಾಧಿಕಾರಿಗಳು ತಿಳಿಸಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಎಸ್.ಎ. ಪ್ರಸಾದ, ಆರಕ್ಷಕ ವೃತ್ತ ನಿರೀಕ್ಷಕ ರಮೇಶ ಹನಾಪುರ, ಪಪಂ ಎಂಜಿನಿಯರ್ ಗಣೇಶ ಭಟ್, ಅಧಿಕಾರಿ ಪ್ರದೀಪ ಹೆಗಡೆ, ಪಪಂ ಮಾಜಿ ಸದಸ್ಯರು ಉಪಸ್ಥಿತರಿದ್ದರು.