ಅಂದಾಜು ಪಟ್ಟಿಯು ಪ್ರಸ್ತುತ ಬ್ಯಾಂಕ್ ಖಾತೆಯಲ್ಲಿ ಇರುವ ಮೊತ್ತಕ್ಕಿಂತಲೂ ಅಧಿಕವಾದಲ್ಲಿ ಹೆಚ್ಚುವರಿ ಮೊತ್ತವನ್ನು ಇತರೇ ಇಲಾಖೆಗಳ ಮೂಲಕ ಒದಗಿಸಲು ಕ್ರಮ ಕೈಗೊಳ್ಳಲಾಗುವುದು.

ಕನ್ನಡಪ್ರಭ ವಾರ್ತೆ ಕಾರವಾರ

ಅಂಕೋಲಾದಲ್ಲಿರುವ ಸತ್ಯಾಗ್ರಹ ಸ್ಮಾರಕ ಭವನಕ್ಕೆ ಸೌಂಡ್, ಲೈಟ್, ಫ್ಯಾನ್‌ಗಳು, ಶೌಚಾಲಯಗಳ ದುರಸ್ತಿ, ಗ್ರಂಥಾಲಯ ದುರಸ್ತಿ ಹಾಗೂ ಕಟ್ಟಡಕ್ಕೆ ಪೈಂಟಿಂಗ್ ಸೇರಿದಂತೆ ಎಲ್ಲಾ ರೀತಿಯ ಅಗತ್ಯವಿರುವ ಮೂಲ ಸೌಕರ್ಯಗಳ ಕಾಮಗಾರಿಗಳನ್ನು ಆದ್ಯತೆಯಲ್ಲಿ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಸೂಚನೆ ನೀಡಿದರು.

ಅಂಕೋಲಾದ ಸತ್ಯಾಗ್ರಹ ಸ್ಮಾರಕ ಭವನದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸತ್ಯಾಗ್ರಹ ಸ್ಮಾರಕ ಭವನಕ್ಕೆ ಸಂಬಂಧಿಸಿದಂತೆ ವಿವಿಧ ಬ್ಯಾಂಕ್ ಖಾತೆಯಲ್ಲಿ ₹25 ಲಕ್ಷಕ್ಕೂ ಅಧಿಕ ಮೊತ್ತ ಇದ್ದು, ಲೋಕೋಪಯೋಗಿ ಇಲಾಖೆಯಿಂದ ಭವನವನ್ನು ಎಲ್ಲಾ ಅಗತ್ಯ ಮೂಲ ಸೌಕರ್ಯಗಳೊಂದಿಗೆ ಸುಸಜ್ಜಿತಗೊಳಿಸಲು ಅಂದಾಜು ಪಟ್ಟಿಯನ್ನು ಪಡೆಯುವಂತೆ ತಿಳಿಸಿದ ಜಿಲ್ಲಾಧಿಕಾರಿ, ಅಂದಾಜು ಪಟ್ಟಿಯು ಪ್ರಸ್ತುತ ಬ್ಯಾಂಕ್ ಖಾತೆಯಲ್ಲಿ ಇರುವ ಮೊತ್ತಕ್ಕಿಂತಲೂ ಅಧಿಕವಾದಲ್ಲಿ ಹೆಚ್ಚುವರಿ ಮೊತ್ತವನ್ನು ಇತರೇ ಇಲಾಖೆಗಳ ಮೂಲಕ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಸತ್ಯಾಗ್ರಹ ಸ್ಮಾರಕ ಭವನದ ಆವರಣದಲ್ಲಿರುವ ಗ್ರಂಥಾಲಯ ಮತ್ತು ಉದ್ಯಾನವನವನ್ನು ತಾಲೂಕು ಆಡಳಿತ ಮತ್ತು ಪುರಸಭೆಯು ಪರಸ್ಪರ ಎಂಓಯು ಮಾಡಿಕೊಳ್ಳುವ ಮೂಲಕ, ಪುರಸಭೆಯಿಂದ ನಿರ್ವಹಣೆ ಮಾಡುವಂತೆ ತಿಳಿಸಿದ ಜಿಲ್ಲಾಧಿಕಾರಿ, ಉದ್ಯಾನವನದಲ್ಲಿ ಲೈಟ್‌ಗಳ ವ್ಯವಸ್ಥೆ ಹಾಗೂ ಸ್ವಚ್ಛತಾ ಕಾರ್ಯಗಳನ್ನು ಕೂಡಲೇ ಕೈಗೊಳ್ಳುವಂತೆ ಪುರಸಭೆ ಅಧಿಕಾರಿಗಳಿಗೆ ಸೂಚಿಸಿದರು.

ಮುಂದಿನ ದಿನಗಳಲ್ಲಿ ಸತ್ಯಾಗ್ರಹ ಸ್ಮಾರಕ ಭವನವನ್ನು ಇನ್ನಷ್ಟು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಮಾಸ್ಟರ್ ಪ್ಲಾನ್ ತಯಾರಿಸುವಂತೆ ತಿಳಿಸಿದ ಜಿಲ್ಲಾಧಿಕಾರಿ, ಹೆಚ್ಚಿನ ಅನುದಾನ ಲಭ್ಯವಾದಲ್ಲಿ ಮಾಸ್ಟರ್ ಪ್ಲಾನ್‌ಗೆ ಅನುಗುಣವಾಗಿ ಅಭಿವೃದ್ಧಿಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದರು.

ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಐತಿಹಾಸಿಕ ಮಹತ್ವ ಹೊಂದಿರುವ ಅಂಕೋಲಾದಲ್ಲಿರುವ ಈ ಸತ್ಯಾಗ್ರಹ ಸ್ಮಾರಕ ಭವನವನ್ನು, ಉಪ್ಪಿನ ಸತ್ಯಾಗ್ರಹ ಹಾಗೂ ಕರ ನಿರಾಕರಣೆ ಚಳುವಳಿ ಘಟನೆಯ 50 ವರ್ಷದ ಸಮಾರಂಭದಲ್ಲಿ ನಿರ್ಮಿಸಲಾಗಿದ್ದು, ಈ ಭವನವನ್ನು ಅಭಿವೃದ್ಧಿಗೊಳಿಸಲು ಆರ್ಥಿಕ ನೆರವು ನೀಡಲು ಬಯಸುವ ಉದ್ದಿಮೆಗಳು ಮತ್ತು ಉದ್ದಿಮೆದಾರರು ಸಿ.ಎಸ್.ಆರ್. ದೇಣಿಗೆ ನೀಡಲು ಅಂಕೋಲಾ ತಹಸೀಲ್ದಾರ್ ಅವರನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

ಸತ್ಯಾಗ್ರಹ ಸ್ಮಾರಕ ಭವನವನ್ನು ರಾಷ್ಟ್ರೀಯ ಸ್ಮಾರಕದ ಮಾದರಿಯಲ್ಲಿ ಅಭಿವೃದ್ಧಿಪಡಿಸಬೇಕು, ಇಲ್ಲಿನ ಎಲ್ಲಾ ಕಟ್ಟಡಗಳು ಅರ್ಥಪೂರ್ಣವಾಗಿ ಅಭಿವೃದ್ಧಿಪಡಿಸಬೇಕು, ಜಿಲ್ಲೆಯ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರ ಹೆಸರುಗಳನ್ನು ಇಲ್ಲಿನ ಆವರಣದಲ್ಲಿ ಅಳವಡಿಸಬೇಕು, ಮಹಾತ್ಮ ಗಾಂಧೀಜಿ ಅವರ ಕಂಚಿನ ಪುತ್ಥಳಿ ಸ್ಥಾಪಿಸಬೇಕು, ಸ್ವಚ್ಛತೆ ಕಾಪಾಡಬೇಕು, ಕಾಯಂ ಸಿಬ್ಬಂದಿ ನೇಮಿಸಬೇಕು ಎಂದು ಸಭೆಯಲ್ಲಿ ಭಾಗವಹಿಸಿದ್ದ ಕಾಳಪ್ಪ ನಾಯಕ್, ಶಾಂತಾರಾಮ ನಾಯಕ್, ರಘುನಂದನ ನಾಯಕ್, ಉಮೇಶ್ ನಾಯಕ್, ರಮೇಶ್ ಮತ್ತಿತರರು ಮನವಿ ಮಾಡಿದರು.

ತಹಸೀಲ್ದಾರ್ ಡಾ. ಚಿಕ್ಕಪ್ಪ ನಾಯಕ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಲಾ ನಾಯ್ಕ್ ಇದ್ದರು.