ಬಡವರು ಶ್ರೀಮಂತ ರಾಗಬೇಕಾದರೆ ಮಕ್ಕಳಿಗೆ ಉತ್ತಮವಾದ ಶಿಕ್ಷಣ ಮತ್ತು ಸಂಸ್ಕಾರ ನೀಡಬೇಕು ಅಂದಾಗ ಮಾತ್ರ ನಿಮ್ಮ ಜೀವನವು ಬದಲಾಗಲು ಸಾಧ್ಯ ಎಂದು ಜಿಪಂ ಸಿಇಓ ಗಿಟ್ಟೆ ಮಾಧವ ವಿಠ್ಠಲರಾವ್ ಹೇಳಿದರು.

ಕನ್ನಡಪ್ರಭ ವಾರ್ತೆ ಬಸವಕಲ್ಯಾಣ

ಬಡವರು ಶ್ರೀಮಂತ ರಾಗಬೇಕಾದರೆ ಮಕ್ಕಳಿಗೆ ಉತ್ತಮವಾದ ಶಿಕ್ಷಣ ಮತ್ತು ಸಂಸ್ಕಾರ ನೀಡಬೇಕು ಅಂದಾಗ ಮಾತ್ರ ನಿಮ್ಮ ಜೀವನವು ಬದಲಾಗಲು ಸಾಧ್ಯ ಎಂದು ಜಿಪಂ ಸಿಇಓ ಗಿಟ್ಟೆ ಮಾಧವ ವಿಠ್ಠಲರಾವ್ ಹೇಳಿದರು.

ತಾಲ್ಲೂಕಿನ ಮಂಠಾಳ ಗ್ರಾಮಕ್ಕೆ ಗುರುವಾರ ವಿಬಿ ಜಿ ರಾಮ್‌ ಜಿ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಅವರು, ಕೂಲಿ ಕಾರ್ಮಿಕರ ಜೊತೆ ಸಂವಾದ ನಡೆಸಿ, ನಿಮ್ಮ ಮಕ್ಕಳು ನಿಮ್ಮ ಹಾಗೇ ಕೆಲಸ ಮಾಡಬಾರದು ಅಂದರೆ, ಅವರಿಗೆ ಉತ್ತಮವಾದ ಶಿಕ್ಷಣ ಕೊಡಬೇಕು ಅಂದಾಗ ಮಾತ್ರ ನೀವು ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದರು.

ನಾನು ಒಂದು ಬಡ ಕುಟುಂಬದಲ್ಲಿ ಜನಿಸಿದ್ದರೂ ನಮ್ಮ ತಂದೆ - ತಾಯಿ ಪಟ್ಟ ಪರಿಶ್ರಮದಿಂದ ನಾನು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ ಎಂದು ಕೂಲಿ ಕಾರ್ಮಿಕರ ಜೊತೆ ಕೆಲಸ ಮಾಡುವ ಮೂಲಕ ಅವರಿಗೆ ಪ್ರೋತ್ಸಾಹ ನೀಡಿದರು.

ನೀವು ಮಾಡಿದ ಕೆಲಸದ ದುಡ್ಡು ಬರುತ್ತೆ ಅದಕ್ಕೆ ಚಿಂತೆ ಮಾಡುವುದು ಅವಶ್ಯಕತೆ ಇಲ್ಲ ಎಂದು ಕೂಲಿ ಕಾರ್ಮಿಕರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಜಿಲ್ಲೆ ಯಲ್ಲಿಯೇ ಬಸವಕಲ್ಯಾಣದಲ್ಲಿ ವಿಬಿ ಜಿ ರಾಮ ಜಿ ಕಾಮಗಾರಿ ಚೆನ್ನಾಗಿ ನಡೆಯುತ್ತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿ. ಇದೇ ಸಂದರ್ಭದಲ್ಲಿ ವಿಬಿ ಜಿ ರಾಮ ಜಿ ಯೋಜನೆಯಡಿ ನೋಂದಣಿ ಮಾಡಿಕೊಂಡ ಕೂಲಿ ಕಾರ್ಮಿಕರಿಗೆ ನೂತನ ಜಾಬ್ ಕಾರ್ಡ್‌ ವಿತರಿಸಿದರು.

ಬೆಳ್ಳಂ ಬೆಳಗ್ಗೆ ವಿವಿಧೆಡೆ ಭೇಟಿ:

ಬೆಳ್ಳಂ ಬೆಳಗ್ಗೆ ಮಂಠಾಳ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರ, ಗ್ರಾಮದಲ್ಲಿನ ಜೆಜೆಎಂ ಕಾಮಗಾರಿ, ಅರಿವು ಕೇಂದ್ರ, ಅಂಗನವಾಡಿ ಕೇಂದ್ರ, ಸರ್ಕಾರಿ ಶಾಲೆ, ವಸತಿ ಶಾಲೆಗೆ ಮತ್ತು ವಿಬಿ ಜಿ ರಾಮ್‌ ಜಿ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ನೀಡುವ ಔಷಧಿಗಳು ಮತ್ತು ರೋಗಿಗಳ ಜೊತೆ ಸಂವಾದ ನಡೆಸುವ ಮೂಲಕ ಅಲ್ಲಿನ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದುಕೊಂಡರು.

ನಂತರ ಗ್ರಾಮದ ಪ್ರಮುಖ ಬಡಾವಣೆಗಳಲ್ಲಿ ಸಂಚರಿಸುವ ಮೂಲಕ ಜೆಜೆಎಂ ಯೋಜನೆಯಡಿ ಮನೆಮನೆಗೆ ಸಂಪರ್ಕ ನೀಡಿರುವ ನಲ್ಲಿಗಳಿಂದ ನೀರು ಬರುತ್ತಿದೆಯೇ ಅಥವಾ ಇಲ್ಲವೇ ಎಂದು ಗ್ರಾಮಸ್ಥರಿಂದ ಮಾಹಿತಿ ಪಡೆದುಕೊಂಡರು, ಹಾಗೂ ಸರ್ಕಾರಿ ಶಾಲೆಯಲ್ಲಿ ಅರ್ಧಕ್ಕೆ ನಿಂತ ಶೌಚಾಲಯ ಪೂರ್ಣ ಗೊಳಿಸಬೇಕು ಹಾಗೂ ಶಾಲೆಯಲ್ಲಿ ಸ್ಥಳವಕಾಶ ಇರುವುದರಿಂದ ಉತ್ತಮವಾದ ಕ್ರೀಡಾಂಗಣ ನಿರ್ಮಾಣ ಮಾಡಿಕೊಡಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಸವಕಲ್ಯಾಣ ನಗರದ ಸಾರ್ವಜನಿಕರ ಆಸ್ಪತ್ರೆಗೆ ಭೇಟಿ ನೀಡಿದ ಅವರು, ರಕ್ತ ಪರೀಕ್ಷೆ, ಐಸಿಟಿಸಿ, ಸ್ಕ್ಯಾನಿಂಗ್ ಹಾಗೂ ತಾಯಿ ಮತ್ತು ಮಗು ಆರೈಕೆ ಆಸ್ಪತ್ರೆ ಸೇರಿದಂತೆ ವಿವಿಧ ವಿಭಾಗಕ್ಕೆ ಭೇಟಿ ನೀಡಿ ರೋಗಿಗಳಿಗೆ ಯಾವುದೇ ಸಮಸ್ಯೆ ಆಗದಂತೆ ಚಿಕಿತ್ಸೆ ನೀಡಬೇಕು ಎಂದು ಆಸ್ಪತ್ರೆಯ ಸಿಬ್ಬಂದಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ತಾಪಂ ಅಧಿಕಾರಿ ರಮೇಶ ಸುಲ್ಪಿ, ತಾಪಂ ಸಹಾಯಕ ನಿರ್ದೇಶಕ ಮಹ್ಮದ್ ಸಲೀಂ, ಅರುಣ ಕುಮಾರ ಪಾಟೀಲ್, ಆಡಳಿತಾಧಿಕಾರಿ ಡಾ.ಮಂಜುನಾಥ, ಪಿಡಿಓ ಮಹಾಂತೇಶ ಸಲಗರ, ತಾಂತ್ರಿಕ ಸಂಯೋಜಕ ಶಿವರಾಜ ಪಾಟೀಲ್, ಐಇಸಿ ಸಂಯೋಜಕ ವೀರಾರೆಡ್ಡಿ, ತಾಂತ್ರಿಕ ಸಹಾಯಕರಾದ ಮಾಣಿಕ, ಜಲೀಲ ಸಾಬ, ಸುಭಾಷ್‌, ಮಲ್ಲಕಾರ್ಜುನ ಜಾಧವ, ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿದ್ದರು.