ಕುಷ್ಟಗಿ ತಾಲೂಕಿನ ತಾವರಗೇರಾ ಸಮೀಪದ ರೈತ ನಿಂಗಪ್ಪ ಬಡಿಗೇರ ಅವರ ಹೊಲಕ್ಕೆ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಭೇಟಿ ನೀಡಿ ಬೆಳೆ ಪರಿಸ್ಥಿತಿ ಪರಿಶೀಲಿಸಿದರು.
ಕುಷ್ಟಗಿ: ತೀವ್ರ ಬರಗಾಲದಿಂದ ತತ್ತರಿಸಿರುವ ರೈತರಿಗೆ ಪರಿಹಾರವಾಗಿ ಎಕರೆಗೆ ₹50 ಸಾವಿರ ಪರಿಹಾರವನ್ನು ರಾಜ್ಯ ಸರ್ಕಾರ ತಕ್ಷಣವೇ ಘೋಷಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.
ತಾಲೂಕಿನ ತಾವರಗೇರಾ ಸಮೀಪದ ರೈತ ನಿಂಗಪ್ಪ ಬಡಿಗೇರ ಅವರ ಹೊಲಕ್ಕೆ ಭೇಟಿ ನೀಡಿ ಬೆಳೆ ಪರಿಸ್ಥಿತಿ ಪರಿಶೀಲಿಸಿದರು. ಬಳಿಕ ರೈತರೊಂದಿಗೆ ಮಾತನಾಡಿದ ಅವರು, ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ಕೂಡಲೇ ನೆರವಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಕೊಪ್ಪಳ, ರಾಯಚೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ರೈತರು ಬರದಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಮಳೆ ಇಲ್ಲದೆ ಬೆಳೆಗಳು ನಾಶವಾಗಿದ್ದು, ರೈತರು ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ರೈತರ ನೆರವಿಗೆ ಬರಬೇಕಾದರೆ, ಸಚಿವ ಸಂಪುಟ ವಿಸ್ತರಣೆ ಹಾಗೂ ರಾಜಕೀಯ ಬೆಳವಣಿಗೆಗಳಲ್ಲೇ ನಿರತವಾಗಿರುವುದು ದುರದೃಷ್ಟಕರ ಎಂದ ಅವರು, ಬರ ಪರಿಹಾರವನ್ನು ತಕ್ಷಣ ಘೋಷಿಸಿ, ಎಕರೆಗೆ ₹50 ಸಾವಿರ ಪರಿಹಾರ ನೀಡುವ ಮೂಲಕ ರೈತರ ಬದುಕಿಗೆ ಆಸರೆಯಾಗಬೇಕು ಎಂದರು.
ಸಿ.ಟಿ. ರವಿ ಎದುರು ಅಳಲು ತೋಡಿಕೊಂಡ ರೈತರು, ಮಳೆಯ ಕೊರತೆಯಿಂದ ಬೆಳೆಗಳು ಸಂಪೂರ್ಣ ಹಾಳಾಗಿದ್ದು, ಉದ್ಯೋಗವಿಲ್ಲದೆ ಪಟ್ಟಣಗಳಿಗೆ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮ ಕಷ್ಟಗಳಿಗೆ ಸ್ಪಂದಿಸುವವರು ಯಾರೂ ಇಲ್ಲದಂತಾಗಿದೆ ಎಂದರು.ಶಾಸಕ ದೊಡ್ಡನಗೌಡ ಪಾಟೀಲ್, ಮಾಜಿ ಶಾಸಕ ಪರಣ್ಣ ಮನವಳ್ಳಿ, ಮಾಜಿ ಸಂಸದ ಶಿವರಾಮಗೌಡ, ಮಾಜಿ ಶಾಸಕ ಬಸವರಾಜ ದಢೇಸೂಗೂರು, ಮುಖಂಡರಾದ ತಿಪ್ಪೇರುದ್ರಸ್ವಾಮಿ, ಕುಷ್ಟಗಿ ಬಿಜೆಪಿ ತಾಲೂಕು ಅಧ್ಯಕ್ಷ ಮಾಂತೇಶ್ ಬದಾಮಿ, ಕೆ. ಮಹೇಶ್, ವೀರಭದ್ರಪ್ಪ ನಾಲತವಾಡ, ಸಾಗರ್ ಬೇರಿ, ಶಿವನಗೌಡ ಪಾಟೀಲ್, ಮಂಜುನಾಥ ಜೊಲಕುಂಟಿ, ಪಪಂ ಸದಸ್ಯರಾದ ಬಸನಗೌಡ ಓಲಿ, ಶಾಮೂರ್ತಿ ಅಂಚಿ, ದಶರಥ್ ಸಿಂಗ್ ಉಪಸ್ಥಿತರಿದ್ದರು.